
ಸವಳಂಗ (ನ್ಯಾಮತಿ): ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಅವರು ಶುಕ್ರವಾರ ಬೆಳಿಗ್ಗೆ ‘ಬೆಳಗಿನ ನಡೆ ಗ್ರಾಮದ ಕಡೆ’ ಕಾರ್ಯ ಯೋಜನೆ ಅಡಿಯಲ್ಲಿ ನ್ಯಾಮತಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ, ಆಸ್ಪತ್ರೆಗಳಿಗೆ, ವಸತಿ ನಿಲಯಗಳಿಗೆ ಭೇಟಿ ನೀಡಿದರು.
ಸವಳಂಗ ಗ್ರಾಮಕ್ಕೆ ಬಂದ ಸಿಇಒ ನೇರವಾಗಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್‌ಪೂರ್ವ ಬಾಲಕರ ವಸತಿ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಶೌಚಾಲಯ, ಅಡುಗೆ ಕೋಣೆ ನಿರ್ವಹಣೆ, ಆಹಾರ ದಾಸ್ತಾನು ಪದಾರ್ಥಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳ ಕುಂದು– ಕೊರತೆ ವಿಚಾರಿಸಿ ಅವರೊಂದಿಗೆ ಬೆಳಿಗ್ಗಿನ ಉಪಾಹಾರ ಸೇವಿಸಿ ವಸತಿ ನಿಲಯದ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೀಕ್ಷಣೆ ಮಾಡಿ, ವೈದ್ಯರು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದು ಉತ್ತಮ ಸೇವೆ ಸಲ್ಲಿಸುವಂತೆ ಸಲಹೆ ನೀಡಿದರು. ವೈದ್ಯಾಧಿಕಾರಿ ಬಸವೇಶ್ವರ ಅವರು ಆಸ್ಪತ್ರೆಯ ಬಗ್ಗೆ ಮಾಹಿತಿ ನೀಡಿದರು.
ಸವಳಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಾಪುರ ಗ್ರಾಮಕ್ಕೆ ಭೇಟಿ ನೀಡಿ, ಜೆಜೆಎಂ ಯೋಜನೆ ಕಾಮಗಾರಿಯನ್ನು ವೀಕ್ಷಿಸಿದರು. ನಂತರ ಚಟ್ನಹಳಿ ಗ್ರಾಮ ಪಂಚಾಯಿತಿ, ಫಲವನಹಳ್ಳಿ ಗ್ರಾಮ ಪಂಚಾಯಿತಿ, ಗಂಜೀನಹಳ್ಳಿ ಜೆಜೆಎಂ ಕಾಮಗಾರಿಯನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಸವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದನಬಾವಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಅಪೂರ್ಣಗೊಂಡಿರುವ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ನ್ಯೂನ್ಯತೆ ಸರಿಪಡಿಸಿಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ನ್ಯಾಮತಿ ತಾಲ್ಲೂಕು ಪಂಚಾಯಿತಿ ಇಒ ಎಚ್.ವಿ.ರಾಘವೇಂದ್ರ, ಸವಳಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ ಪಾಟೀಲ್ ಮತ್ತು ಸದಸ್ಯರು, ಚಟ್ನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಜಿ.ಬಿ. ವಿಜಯಕುಮಾರ, ಕುಂಕುವ ಗ್ರಾ.ಪಂ ಪಿಡಿಒ ಜಯಪ್ಪ, ಕಾರ್ಯದರ್ಶಿ ಅಂಜುನಾಯ್ಕ ಮತ್ತು ಸಿಬ್ಬಂದಿ ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.