ADVERTISEMENT

‘ಅಂಗವಿಕಲರ ಸೌಲಭ್ಯ ಅನ್ಯರ ಪಾಲಾಗದಿರಲಿ’

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 9:11 IST
Last Updated 4 ಡಿಸೆಂಬರ್ 2017, 9:11 IST
ವಿವಿಧ ಕ್ರೀಡೆಯಲ್ಲಿ ಸಾಧನೆ ಮಾಡಿದ ಪ್ಯಾರಾ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಜೊತೆ ಗಣ್ಯರು ಇದ್ದಾರೆ
ವಿವಿಧ ಕ್ರೀಡೆಯಲ್ಲಿ ಸಾಧನೆ ಮಾಡಿದ ಪ್ಯಾರಾ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಜೊತೆ ಗಣ್ಯರು ಇದ್ದಾರೆ   

ಹುಬ್ಬಳ್ಳಿ: ಅಲ್ಲಿ ಸೇರಿದ್ದ ಮಕ್ಕಳೆಲ್ಲರೂ ಅಂಗವಿಕಲರು. ತಮ್ಮ ಗಾಯನ, ನೃತ್ಯ, ವೇಷಭೂಷಣದ ಮೂಲಕ ಗಮನ ಸೆಳೆದರು. ತಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತಮ್ಮ ಪ್ರತಿಭೆ ಮೂಲಕ ಸಾಬೀತು ಪಡಿಸಿದರು. ಗಣ್ಯರು ಕೂಡ ಅವರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವ ಅಂಗವಿಕಲರ ದಿನದ ಅಂಗವಾಗಿ ಭಾನುವಾರ ಇಂದಿರಾ ಗಾಜಿನ ಮನೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೇಲಿನ ದೃಶ್ಯ ಕಂಡುಬಂದಿತು.

ಬೇರೆ ಬೇರೆ ಶಾಲೆಗಳ ನೂರಾರು ಅಂಗವಿಕಲ ಮಕ್ಕಳು ಕಾರ್ಯಕ್ರಮ ನಿಗದಿಯಾಗಿದ್ದ ಬೆಳಿಗ್ಗೆ 10 ಗಂಟೆಗೆ ಬಂದು ಕುಳಿತಿದ್ದರು. ಆದರೆ, ಶಾಸಕ ಪ್ರಸಾದ ಅಬ್ಬಯ್ಯ ಎರಡು ಗಂಟೆ ತಡವಾಗಿ ಬಂದ ಕಾರಣ ಕಾರ್ಯಕ್ರಮ 12 ಗಂಟೆಗೆ ಆರಂಭವಾಯಿತು. ಅಂಗವಿಕಲ ಮಕ್ಕಳೇ  ಕಾರ್ಯಕ್ರಮ ಉದ್ಘಾಟಿಸಿದ್ದು ವಿಶೇಷವಾಗಿತ್ತು.

ADVERTISEMENT

ಬಳಿಕ ಮಾತನಾಡಿದ ಅಬ್ಬಯ್ಯ ‘ಅಂಗವಿಕಲರು ಯಾರಿಗೂ ಕಡಿಮೆ ಇಲ್ಲದಂತೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಅವರೆಲ್ಲರೂ ನಮಗೆ ಸ್ಫೂರ್ತಿ’ ಎಂದರು.

‘ಅಂಗವಿಕಲರನ್ನು ಅನುಕಂಪದಿಂದ ನೋಡುವ ಬದಲು, ಉತ್ತಮ ಅವಕಾಶಗಳನ್ನು ಕೊಡಬೇಕು. ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಅಂಗವಿಕಲರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಇವು ಬೇರೆಯವರ ಪಾಲಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ ‘ಅಂಗವಿಕಲರಿಗೆ ಸಾರಿಗೆ ಇಲಾಖೆಯಿಂದ ಉಪಯುಕ್ತ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಇನ್ನಷ್ಟು ಸೌಲಭ್ಯಗಳನ್ನು ಕೊಡುತ್ತೇವೆ. ಅವರನ್ನು ಇನ್ನು ಮುಂದೆ ವಿಶೇಷ ಚೇತನರು ಎಂದು ಕರೆಯಬೇಕು. ಅಂಗವಿಕಲರಿಗೆ ಅನುಕೂಲವಾಗುವಂತೆ ಬಸ್‌ ನಿಲ್ದಾಣಗಳಲ್ಲಿ ಶೌಚಾಲಯ ನಿರ್ಮಿಸಲಾಗುತ್ತಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ‘ಅಂಧರಾಗಿದ್ದ ಪಂಚಾಕ್ಷರಿ ಗವಾಯಿಗಳು ಸಂಗೀತದಲ್ಲಿ ಬಹು ಎತ್ತರಕ್ಕೆ ಬೆಳೆದರು. ಅಂಗವಿಕಲರಿಗೆ ಸೌಲಭ್ಯ ಕಲ್ಪಿಸಲು ಜಿಲ್ಲಾ ಪಂಚಾಯ್ತಿ ಬದ್ಧವಾಗಿದೆ’ ಎಂದು ಭರವಸೆ ನೀಡಿದರು.

ಹೂಡಾ ಅಧ್ಯಕ್ಷ ಅನ್ವರ್ ಮೂಧೋಳ, ಮೇಯರ್‌ ಡಿ.ಕೆ. ಚವ್ಹಾಣ, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಂ. ಅಮರನಾಥ, ಪ್ರಿಯದರ್ಶಿನಿ ಸೇವಾ ಸಂಸ್ಥೆಯ ಮಚಣ್ಣನವರ್, ನಿವೃತ್ತ ವೈದ್ಯಾಧಿಕಾರಿ ಡಾ.ಕರ್ಪೂಕ ಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಿ.ಎಸ್.ಕಲಾದಗಿ, ಜಿಲ್ಲಾ ಅಂಗವಿಕರ ಕಲ್ಯಾಣಾಧಿಕಾರಿ ಅಮರನಾಥ ಹಾಗು ಇತರರು ಇದ್ದರು.

ಕ್ರೀಡಾಪಟುಗಳಿಗೆ ಸನ್ಮಾನ
ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ಅಂಗವಿಕಲರಿಗೆ ಸನ್ಮಾನಿಸಲಾಯಿತು. ಜ್ಯೋತಿ ಸಣ್ಣಕ್ಕಿ (ಶೂಟಿಂಗ್), ನಿಧಿ ಸುಲಾಖೆ (ಅಥ್ಲೆಟಿಕ್ಸ್‌ ಹಾಗೂ ಟೇಕ್ವಾಂಡೊ), ಮಹಮ್ಮದ್‌ ಗೌಸ್ ಆರ್. ಕಳಸಾಪುರ (ಅಥ್ಲೆಟಿಕ್ಸ್‌ ಹಾಗೂ ವೇಟ್‌ಲಿಫ್ಟಿಂಗ್‌), ಮೌಲಾನಿ ಗುಂಡಕರ್ಜಗಿ (ವೀಲ್‌ಚೇರ್‌ ಟೆನಿಸ್‌), ಹರ್ಷ ಆರ್. ದೇವರೆಡ್ಡಿ (ರೈಫಲ್ ಶೂಟಿಂಗ್) ಕೇಶವ ಪಿ. (ರೈಫಲ್ ಶೂಟಿಂಗ್ ಹಾಗೂ ವೀಲ್‌ ಚೇರ್ ಟೆನಿಸ್) ಸನ್ಮಾನಿತರು.

ಸರ್ಕಾರಿ ನೌಕರರಾಗಿ ಸೇವಸಲ್ಲಿಸಿದ ಅಂಧ ಶಿಕ್ಷಕ ಜೋರಾಪುರ ಎಸ್.ಎಂ ಹಾಗೂ ಬಾಲಕಿಯರ ಬಾಲ ಮಂದಿರದ ಡಿ ಗ್ರೂಪ್ ನೌಕರ ಹನುಮಂತಪ್ಪ ಟಗರಗುಂಟಿಯವರಿಗೆ ಅವರನ್ನು ಸನ್ಮಾನಿಸಲಾಯಿತು.

ಅಂಗವಿಕಲರ ದಿನದ ಅಂಗವಾಗಿ ಇತ್ತೀಚೆಗೆ ಬಿ.ವಿ.ಬಿ. ಕಾಲೇಜು ಮೈದಾನದಲ್ಲಿ ನಡೆದ ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಲಾಖೆ ವತಿಯಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಬೆ.ಎಸ್‌. ಬೆಳ್ಳಾದ ಮತ್ತು ಎಂ.ಎನ್‌. ಕುರ್ತಕೋಟಿ (ದ್ವಿತೀಯ) ಮತ್ತು ಕಲಾವತಿ (ತೃತೀಯ) ಅವರಿಗೆ ಪ್ರಶಸ್ತಿ ಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.