ADVERTISEMENT

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿಯೇ ಬಂದಿಲ್ಲ!

ಎಂ.ಕಾಂ, ಎಂ.ಎ. ಇಂಗ್ಲಿಷ್ ಕಲಿಸಲು ಹಿಂದೇಟು?

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 5:37 IST
Last Updated 5 ಆಗಸ್ಟ್ 2013, 5:37 IST

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡ ಕ್ಯಾಂಪಸ್, ಕರ್ನಾಟಕ ಕಲಾ ಕಾಲೇಜು, ಹಾವೇರಿ, ಗದಗ ಹಾಗೂ ಕಾರವಾರ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ವಿವಿಧ ವಿಭಾಗಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ವಿ.ವಿ. ಅರ್ಜಿಗಳನ್ನು ಆಹ್ವಾನಿಸಿದ್ದರೂ ಎಂ.ಕಾಂ. ಹಾಗೂ ಇಂಗ್ಲಿಷ್ ವಿಭಾಗಗಳಿಗೆ ಅರ್ಜಿಯೇ ಬಂದಿಲ್ಲದಿರುವ ಸಂಗತಿ ಬೆಳಕಿಗೆ ಬಂದಿದೆ.

ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಕಲಾ ನಿಕಾಯದ ವಿವಿಧ ವಿಭಾಗಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. ಆದರೆ ಸ್ನಾತಕೋತ್ತರ ವಾಣಿಜ್ಯ ಹಾಗೂ ಇಂಗ್ಲಿಷ್ ವಿಷಯಕ್ಕೆ ಮಾತ್ರ ಒಬ್ಬರೂ ಅರ್ಜಿ ಹಾಕಿಲ್ಲ.

ಸ್ನಾತಕೋತ್ತರ ಇಂಗ್ಲಿಷ್ ವಿಷಯ ಬೋಧಿಸಲು ಹಾವೇರಿ, ಗದಗ, ಕಾರವಾರ ಹಾಗೂ ಧಾರವಾಡದ ಕರ್ನಾಟಕ ಕಾಲೇಜು ಸೇರಿ ಅಂದಾಜು 12 ಜನ ಅತಿಥಿ ಉಪನ್ಯಾಸಕರು ಹಾಗೂ ಸಹಾಯಕ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ವಿಶ್ವವಿದ್ಯಾಲಯ ಪತ್ರಿಕೆ ಹಾಗೂ ತನ್ನ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಹೊರಡಿಸಿತ್ತು. ಅದರಂತೆ ಎಂ.ಕಾಂ.ನ ವಿವಿಧ ವಿಷಯಗಳನ್ನು ಬೋಧಿಸಲು 11 ಜನ ಉಪನ್ಯಾಸಕರ ನೇಮಕಾತಿಗೂ ಅಧಿಸೂಚನೆ ಹೊರಡಿಸಿ ಕಳೆದ ಶುಕ್ರವಾರ ವಿ.ವಿ.ಯ ಸಿಂಡಿಕೇಟ್ ಸಭಾಂಗಣದಲ್ಲಿ ಸಂದರ್ಶನವನ್ನೂ ಏರ್ಪಡಿಸಲಾಗಿತ್ತು. ಸಂದರ್ಶನಕ್ಕೆ ಬಂದಿದ್ದ ಡೀನ್ ಹಾಗೂ ವಿಷಯದ ಪ್ರಾಧ್ಯಾಪಕರು ಈ ಎರಡು ವಿಭಾಗಗಳಿಗೆ ಅರ್ಜಿ ಬಂದಿಲ್ಲದಿರುವುದನ್ನು ತಿಳಿದು ದಿಗಿಲುಗೊಂಡರು. ಆಗಸ್ಟ್ 1ರಿಂದಲೇ ತರಗತಿಗಳನ್ನು ಆರಂಭಿಸಲಾಗಿದ್ದು, ನಾಲ್ಕು ದಿನ ಕಳೆದರೂ ಇನ್ನೂ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯೇ ಮುಗಿದಿಲ್ಲದಿರುವುದರಿಂದ ಹೊಸ ಸಮಸ್ಯೆ ತಲೆದೋರಿದಂತಾಗಿದೆ ಎಂದು ವಿ.ವಿ.ಯ ಅಕಾಡೆಮಿಕ್ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.

`ಇದೊಂದು ಅಪರೂಪದ ಪ್ರಕರಣವಾಗಿದ್ದು, ಪತ್ರಿಕೆ ಹಾಗೂ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದರೂ ಅರ್ಜಿಗಳು ಬಂದಿಲ್ಲ. ಕೂಡಲೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನಮಗೆ ತಿಳಿಸಿದರೆ ಆದೇಶ ಪತ್ರ ನೀಡುತ್ತೇವೆ ಎಂದು ಎಲ್ಲ ಸ್ನಾತಕೋತ್ತರ ಕೇಂದ್ರದ ಸಂಯೋಜನಾಧಿಕಾರಿಗಳಿಗೆ ತಿಳಿಸಲಾಗಿದೆ. ಅಲ್ಲದೇ, ಕರ್ನಾಟಕ ವಿ.ವಿ. ಕ್ಯಾಂಪಸ್‌ನಲ್ಲಿದ್ದ ಖಾಲಿ ಹುದ್ದೆಗೆ ಅರ್ಜಿ ಹಾಕಿದ್ದವರನ್ನೇ ವಿವಿಧ ಸ್ನಾತಕೋತ್ತರ ಕೇಂದ್ರಗಳಿಗೆ ನಿಯೋಜಿಸುವ ಚಿಂತನೆಯೂ ನಡೆದಿದೆ' ಎಂದು ಕರ್ನಾಟಕ ವಿ.ವಿ. ಅಕಾಡೆಮಿಕ್ ವಿಭಾಗದ ವಿಶೇಷಾಧಿಕಾರಿ ಡಾ.ಐ.ಎಂ.ಖಾಜಿ `ಪ್ರಜಾವಾಣಿ'ಗೆ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಲಸಚಿವ ಡಾ.ಜಿ.ಬಿ.ನಂದನ್, `ಕಳೆದ ಆ 1ರಿಂದಲೇ ತರಗತಿಗಳು ಆರಂಭವಾಗಿದ್ದರಿಂದ ಯಾವುದೇ ವಿಳಂಬ ಮಾಡದಂತೆ ಸೂಚಿಸಲಾಗಿದೆ. ಕೂಡಲೇ ಅರ್ಹರನ್ನು ಗುರುತಿಸಿ ನೇಮಕ ಮಾಡಿಕೊಳ್ಳುವಂತೆಯೂ ತಿಳಿಸಲಾಗಿದೆ' ಎಂದರು.

ಸಂದರ್ಶನ ಪ್ರಹಸನ: ಏತನ್ಮಧ್ಯೆ, ವಿ.ವಿ.ಯ ಸ್ವ ಸಂಪನ್ಮೂಲದ ಸಹಾಯದಿಂದ ನಡೆಯುವ ಕೋರ್ಸ್ ಒಂದಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಸಂದರ್ಶನ ಏರ್ಪಡಿಸಲಾಗಿತ್ತು. ಇದಕ್ಕಾಗಿ ವಿ.ವಿ.ಯ ಅಕಾಡೆಮಿಕ್ ವಿಭಾಗದ ಸೂಚನೆಯ ಮೇರೆಗೆ ಬಂದಿದ್ದ ಅಭ್ಯರ್ಥಿಯೊಬ್ಬರಿಗೆ `ಈ ಹುದ್ದೆಗೆ ನೀವು ಅರ್ಹರಿಲ್ಲ' ಎಂದು ಹೇಳಿ ವಾಪಸ್ ಕಳಿಸಿದ್ದು ಸಹ ವ್ಯಾಪಕ ಟೀಕೆಗೆ ಒಳಗಾಗಿದೆ.

ವಾಸ್ತವವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಶೇ 50ರಷ್ಟು ಹಾಗೂ ಇತರೆ ಅಭ್ಯರ್ಥಿಯಾದರೆ ಶೇ 55ರಷ್ಟು ಪಡೆದಿದ್ದರೆ ಮಾತ್ರ ಅವರನ್ನು ಸಂದರ್ಶನಕ್ಕೆ ಆಹ್ವಾನಿಸಬೇಕಿತ್ತು. ಶೇ 52 ಅಂಕ ಪಡೆದ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ್ದ ಅಭ್ಯರ್ಥಿಯನ್ನೂ ಸಂದರ್ಶನಕ್ಕೆ ಆಹ್ವಾನಿಸಿದ್ದು ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ.

ಸ್ವತಃ ಕುಲಸಚಿವರೇ ಈ ಲೋಪವನ್ನು ಒಪ್ಪಿಕೊಂಡಿದ್ದು, `ನಮ್ಮಿಂದಲೇ ಈ ಪ್ರಮಾದವಾಗಿದೆ. ಆ ಅಭ್ಯರ್ಥಿಗೆ ಕರೆ ಮಾಡುವ ಮೊದಲೇ ನಮ್ಮವರು ಯೋಚಿಸಬೇಕಿತ್ತು. ಸಂಬಂಧಪಟ್ಟವರು ಅರ್ಜಿಗಳ ಪರಿಶೀಲನೆ ಮಾಡಿಯೇ ಇಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ' ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.