ADVERTISEMENT

ಅಧ್ಯಾತ್ಮಿಕ ಪುಣ್ಯ ಸ್ಥಾನ ತತ್ವಾನ್ವೇಷಣ ಮಂದಿರ

ಶ್ರೀಪಾದ ಯರೇಕುಪ್ಪಿ
Published 15 ಜನವರಿ 2012, 8:55 IST
Last Updated 15 ಜನವರಿ 2012, 8:55 IST
ಅಧ್ಯಾತ್ಮಿಕ ಪುಣ್ಯ ಸ್ಥಾನ ತತ್ವಾನ್ವೇಷಣ ಮಂದಿರ
ಅಧ್ಯಾತ್ಮಿಕ ಪುಣ್ಯ ಸ್ಥಾನ ತತ್ವಾನ್ವೇಷಣ ಮಂದಿರ   

ಪ್ರಶಾಂತ ಪರಿಸರದ ನಡುವೆ ಕುಟೀರದಂತೆ ಇರುವ ಕಟ್ಟಡವೇ ದಿವ್ಯಜ್ಞಾನದೇಗುಲ. ನಗರದ ನಾಗರಿಕರಿಗೆ ನಿತ್ಯವೂ ಆಧ್ಯಾತ್ಮದ ಅಮೃತ ಸಿಂಚನಗೈಯುತ್ತಿರುವ ಪುನೀತ ತಾಣ. ಅದುವೇ ಹನ್ನೊಂದು ದಶಕಗಳನ್ನು ಪೂರೈಸಿರುವ ಥಿಯಾಸಾಫಿಕಲ್ ಸೊಸೈಟಿಯ ತತ್ವಾನ್ವೇಷಣ ಮಂದಿರ.

ಇಂದಿನ ಯಾಂತ್ರಿಕ ಯುಗದಲ್ಲಿ ಉದ್ವೇಗ, ಒತ್ತಡ, ಆತಂಕಗಳ ಕತ್ತರಿಯಲ್ಲಿ ಸಿಲುಕಿ ನರಳುತ್ತಿರುವ ಆಧುನಿಕ ಜನಸಮುದಾಯಕ್ಕೆ ಸಾಂತ್ವನ ನೀಡುತ್ತ, ಆಧ್ಯಾತ್ಮಿಕ ಉನ್ನತಿಗೆ ಅನುವು ಮಾಡಿಕೊಡುತ್ತ, ದಿವ್ಯಜ್ಞಾನದ ಪ್ರಚಾರ ಮಾಡುತ್ತಿರುವ ಪುಣ್ಯಧಾಮ, ನೆಮ್ಮದಿಯ ನಿಲಯ ಇದಾಗಿದೆ. ದೈವೀ ಚಿಂತನೆಯಲ್ಲಿಯೇ ಸದಾ ತನ್ನನ್ನು ತಾನು ತೊಡಗಿಸಿಕೊಂಡು ಸಾರ್ವಜನಿಕರ ಸೇವೆಯಲ್ಲಿ ನಿರತವಾಗಿದೆ.

ಧಾರವಾಡ ಇತಿಹಾಸದಲ್ಲಿ 20ನೆಯ ಶತಮಾನ ಸರ್ವಕ್ಷೇತ್ರಗಳಲ್ಲಿ ಪ್ರಗತಿ ಪಥದಲ್ಲಿ ಮುನ್ನಡೆದಿದ್ದ ಸಮಯವಾಗಿತ್ತು. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ರಂಗಗಳಲ್ಲಿನ ಪ್ರಗತಿಗಳಿಂದಾಗಿ ದೊಡ್ಡ ಹಳ್ಳಿಯಂತಿದ್ದ ಧಾರವಾಡ ಸಾಂಸ್ಕೃತಿಕ ರಾಜಧಾನಿ ಎಂದು ಗುರುತಿಸಿಕೊಳ್ಳುವಂತಾಯಿತು.

ಆ ಸಂದರ್ಭದಲ್ಲಿ 1902ರ ಜುಲೈ 18 ರಂದು ನಗರದಲ್ಲಿ ಥಿಯಾಸಾಫಿಕಲ್ ಸೊಸೈಟಿ ಸ್ಥಾಪಿಸಲ್ಪಟ್ಟಿತು. ಅಂದು ಧಾರವಾಡದಲ್ಲಿ ಆರಂಭವಾಗಿದ್ದ ರೈಲ್ವೆ ವಲಯವೇ ಈ ಸಂಸ್ಥೆಯ ಸ್ಥಾಪನೆಗೆ ಮೂಲ ಕಾರಣ. ಈ ಕಚೇರಿಯ ಕೆಲವು ನೌಕರರು ಡಾ. ಅನಿಬೆಸೆಂಟ್ ಅವರ ಪ್ರಭಾವಕ್ಕೊಳಗಾಗಿದ್ದರು. ಆದ್ದರಿಂದಲೇ ಈ ನೌಕರರ  ಮುಂದಾಳತ್ವದಲ್ಲಿ ಈ ಸಂಸ್ಥೆ ಸ್ಥಾಪನೆಗೊಂಡಿತು.

ಬೆಳಗಾವಿ ರಸ್ತೆಯ ಬದಿಗೆ ವಿಶಾಲವಾದ ಜಾಗೆಯಲ್ಲಿ ಕುಟೀರದಂತೆ ಕಟ್ಟಡ ಹೊಂದಿದ್ದ ಸಂಸ್ಥೆ, ಇಂದು ಹೊಸ ಕಟ್ಟಡಗಳನ್ನು ಸಹ ಹೊಂದಿದೆ. ಆಧ್ಯಾತ್ಮ ಜ್ಞಾನ ಎಲ್ಲ ವಿದ್ಯಗಳಿಗೆ ಮೂಲಭೂತ ಆಧಾರವಾಗಿದ್ದು, ಆತ್ಮ ತತ್ವವನ್ನು ಅರಿತುಕೊಳ್ಳಲು ನೆರವು ನೀಡುವ ಏಕೈಕ ಜ್ಞಾನಪ್ರಸಾರ ಕೇಂದ್ರ ಈ ತತ್ವಾನ್ವೇಷಣ ಮಂದಿರ.
ಈ ಆಧ್ಯಾತ್ಮಿಕ ಸಂಸ್ಥೆ ತನ್ನ ನಿಸ್ವಾರ್ಥತೆಯ ನಿರಂತರ ಸೇವೆಗಾಗಿ 2000-01 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದೆ.

ಈ ಆಧ್ಯಾತ್ಮಿಕ ಕೇಂದ್ರಕ್ಕೆ 1915ರಲ್ಲಿ ಸರ್ಕಾರದಿಂದ 28 ಗುಂಟೆ ಜಾಗೆ ದೊರೆಯಿತು. 1929ರಲ್ಲಿ ನಿವೇಶನದ ಮಧ್ಯಭಾಗದಲ್ಲಿ ಪ್ರವಚನ ಮಂದಿರ ನಿರ್ಮಾಣ ಹಾಗೂ ಬಾವಿ ತೋಡಲಾಯಿತು. ಅನೇಕ ಏಳು- ಬೀಳುಗಳನ್ನು ಕಂಡಿರುವ ಈ ಸಂಸ್ಥೆಯಲ್ಲಿ 1962ರಲ್ಲಿ ಗುರುದೇವ ರಾನಡೆ ಧ್ಯಾನ ಮಂದಿರ ನಿರ್ಮಾಣವಾಗಿದೆ.

`ಥಿಯಾಸಾಫಿ ಸಾಹಿತ್ಯದ ಪುಸ್ತಕಗಳನ್ನು ಬೆಂಗಳೂರು ಹಾಗೂ ಅಡಿಯಾರ್‌ನಿಂದ ತರಿಸಿಕೊಳ್ಳಲಾಗುತ್ತಿದೆ. ಪುಸ್ತಕ ಪ್ರದರ್ಶನ, ಮಾರಾಟದ ವ್ಯವಸ್ಥೆ ಮಾಡಲಾಗಿದೆ. 2008ರ ಆಗಸ್ಟ್ 24 ರಂದು ಮೊದಲನೇ ಮಹಡಿಯ ಕಟ್ಟಡವನ್ನು ಉದ್ಘಾಟಿಸಲಾಯಿತು. ಸಂಸದ ಪ್ರಹ್ಲಾದ ಜೋಶಿ, ಮಾಜಿ ಸಚಿವರಾದ ಎಚ್.ಕೆ.ಪಾಟೀಲ ಹಾಗೂ ಎ.ಎಂ.ಹಿಂಡಸಗೇರಿ ಅವರ ಅನುದಾನದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಈ ಕಟ್ಟಡದ ಸಮೀಪದ ವೃತ್ತಕ್ಕೆ ಪಾಲಿಕೆ ಅನಿಬೆಸೆಂಟ್ ವೃತ್ತ ಎಂದೂ ನಾಮಕರಣ ಮಾಡಿದೆ~ ಎಂದು ಸೊಸೈಟಿಯ ಸದಸ್ಯ ಕೆ.ಎಲ್.ತ್ಯಾಗರಾಜಶೆಟ್ಟಿ ಹೇಳುತ್ತಾರೆ.

`ಕುಲ, ಜಾತಿ, ಮತ, ಲಿಂಗ ಮತ್ತು ವರ್ಣಗಳ ಬೇಧವನ್ನು ಎಣಿಸದೇ ಮಾನವರ ಸಾರ್ವತ್ರಿಕ ಸೋದರ ಭಾವದ ಒಂದು ಅಂಕುರವನ್ನು ಏರ್ಪಡಿಸುವುದು. ಮತ, ತತ್ವ, ವಿಜ್ಞಾನಗಳ ಪರಸ್ಪರ ತುಲನಾತ್ಮಕ ಅಧ್ಯಯನಕ್ಕೆ ಪ್ರೋತ್ಸಾಹ ಕೊಡುವುದು. ಸ್ಪಷ್ಟವಲ್ಲದ ಪ್ರಕೃತಿ ನಿಯಮಗಳನ್ನು ಮತ್ತು ಮಾನವರಲ್ಲಿ ಅಡಗಿರುವ ಸುಪ್ತಶಕ್ತಿಗಳನ್ನು ಪರಿಶೋಧಿಸುವುದು ಥಿಯಾಸಾಫಿ ಸೊಸೈಟಿಯ ಮೂಲ ಉದ್ದೇಶವಾಗಿದೆ~ ಎಂದು ಶೆಟ್ಟಿ ತಿಳಿಸಿದರು.

`ಚೆನ್ನೈನ ಅಡಿಯಾರ್‌ದಲ್ಲಿ ಪ್ರಧಾನ ಶಾಖೆ ಹೊಂದಿರುವ, ವೈಜ್ಞಾನಿಕ, ವೈಚಾರಿಕ ತಳಹದಿಯ ಮೇಲೆ ನಿಂತ ಈ ಆಧ್ಯಾತ್ಮಿಕ ಸಂಸ್ಥೆ ಇಂದು ಜಗತ್ತಿನ ಅನೇಕ ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಮಾನವ ಜನಾಂಗದ ಆತ್ಮೋದ್ಧಾರದ ಗುರಿಯನ್ನು ಹೊತ್ತು ಶ್ರಮಿಸುವುದೇ ಈ ಸಂಸ್ಥೆಯ ಗುರಿಯಾಗಿದೆ~ ಎಂದು ಹೇಳುತ್ತಾರೆ ಅವರು.

`ಧಾರವಾಡ ಕೇಂದ್ರದಲ್ಲಿ ನಿತ್ಯವೂ ಉಪನ್ಯಾಸಗಳು ನಡೆಯುತ್ತವೆ. ಈ ಉಪನ್ಯಾಸಗಳು ಮನಸ್ಸಿಗೆ ಸರಿಯಾದ ಶಕ್ತಿ ಕೊಡುತ್ತವೆ. ಈ ಸೊಸೈಟಿ ಅಡಿಯಲ್ಲಿ ದೀನಬಂಧು ಸೇವಾ ವಿಭಾಗ ಎಂಬ ಅಂಗ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ಅಂಗ ಸಂಸ್ಥೆಯಿಂದ ಮಮತಾ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಯೊಬ್ಬರನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆಯಲಾಗಿದ್ದು, ಆತನ ಶಿಕ್ಷಣ ಸಂಪೂರ್ಣ ಶುಲ್ಕವನ್ನು ಭರಿಸಲಾಗುತ್ತಿದೆ. ಒಟ್ಟಾರೆಯಾಗಿ ಧಾರ್ಮಿಕ ಪ್ರವೃತ್ತಿ ಬೆಳೆಸುವುದು ಸಂಸ್ಥೆಯ ಉದ್ದೇಶ~ ಎಂದು ಶೆಟ್ಟಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.