ADVERTISEMENT

ಅವಳಿ ನಗರಕ್ಕೆ ಆರು ಅತ್ಯಾಧುನಿಕ ಬಸ್‌

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 6:07 IST
Last Updated 19 ಡಿಸೆಂಬರ್ 2013, 6:07 IST

ಹುಬ್ಬಳ್ಳಿ: ಸಂಚಾರದ ಮಾಹಿತಿ ನೀಡುವ ಎಲ್‌ಇಡಿ ಫಲಕ, ತಂಗುದಾಣಗಳ ಮಾಹಿತಿ ನೀಡಲು ಸ್ವಯಂಚಾಲಿತ ಉದ್ಘೋಷ, ಬಾಗಿಲು ತೆರೆಯಲು ಮತ್ತು ಮುಚ್ಚಲು ಸ್ವಯಂಚಾಲಿತ ಸೌಲಭ್ಯ ಇತ್ಯಾದಿ ಒಳಗೊಂಡ ಆರು ಹೊಸ ಬಸ್‌ಗಳನ್ನು ಅವಳಿ ನಗರಕ್ಕೆ ಬುಧವಾರ ಸಮರ್ಪಿಸಲಾಯಿತು.

ಹಳೆ ಬಸ್‌್ ನಿಲ್ದಾಣದಲ್ಲಿ ನಡೆದ ಸಮಾರಂಭ­ದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಮತ್ತು ಮಾಜಿ ಸಚಿವ ಬಸವರಾಜ ಹೊರಟ್ಟಿ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ ಶೆಟ್ಟರ್‌ ಈ ಬಸ್‌ಗಳಿಂದ ನಗರದ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

‘ಪ್ರತಿ ತಂಗುದಾಣದ ಮಾಹಿತಿಯನ್ನು ಸ್ವಯಂ ಚಾಲಿತ ವ್ಯವಸ್ಥೆಯನ್ನು ಬಳಸಿರುವುದರಿಂದಾಗಿ ಗ್ರಾಮೀಣ ಪ್ರದೇಶದಿಂದ ನಗರಕ್ಕೆ
ಬಂದು ಪ್ರಯಾಣ ಮಾಡುವವರಿಗೆ ತಂಗುದಾಣಗಳ ಮಾಹಿತಿ ಪಡೆಯಲು ಯಾರನ್ನೂ ಆಶ್ರಯಿಸುವ ಅಗತ್ಯ ಇಲ್ಲ’ ಎಂದು ಅವರು ಹೇಳಿದರು.

ಬಸವರಾಜ ಹೊರಟ್ಟಿ ಮಾತನಾಡಿ ಬೆಂಗಳೂರಿನಲ್ಲಿ ಇರುವ ಸೌಲಭ್ಯಗಳನ್ನು ಅವಳಿ ನಗರದಲ್ಲಿ ಕಲ್ಪಿಸಿರುವುದು ಖುಷಿಯ ವಿಷಯ ಎಂದು ಹೇಳಿದರು.

‘ನಾಲ್ಕು ವಿಭಾಗಗಳಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೇ ಹೆಚ್ಚು ಆದಾಯ ಗಳಿಸುತ್ತಿದ್ದು ಈ ಕಾರಣದಿಂದ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕು’ ಎಂದು ಅವರು ಆಗ್ರಹಿಸಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉಮೇಶ ಎಚ್‌. ಕುಸುಗಲ್‌ ಬಸ್‌ಗಳ ಮಾಹಿತಿ ನೀಡಿದರು.

ಟಾಟಾ ಕಂಪೆನಿಯ ಹೊಸ ತಾಂತ್ರಿ ಸೌಲಭ್ಯ­ಗಳಿರುವ ಯೂರೋ–3 ಮಾದರಿಯ ಈ ಬಸ್‌­ಗಳಲ್ಲಿ ವಿಶೇಷ ನುಡಿಗಟ್ಟುಗಳನ್ನು ಬರೆಯಲಾಗಿದ್ದು ಅಗ್ನಿಶಾಮಕ ವ್ಯವಸ್ಥೆಯೂ ಇದೆ ಎಂದರು.‘ಈ ವರ್ಷ ವಿಭಾಗಕ್ಕೆ ಒಟ್ಟು 750 ಬಸ್‌ಗಳನ್ನು ಒದಗಿಸಲಾಗಿದ್ದು ನಗರ ಸಾರಿಗೆ ವಿಭಾಗಕ್ಕೆ 60 ಬಸ್‌ಗಳು ಲಭಿಸಿವೆ’ ಎಂದು ಅವರು ತಿಳಿಸಿದರು.

ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎಸ್.ಆರ್‌.ನಮಾಜಿ, ಸಂಸ್ಥೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.