ADVERTISEMENT

ಆಕಾಶವಾಣಿಯಲ್ಲಿ ಚಿತ್ರ ಭಂಡಾರ ಉದ್ಛಾಟನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2014, 6:19 IST
Last Updated 14 ಜೂನ್ 2014, 6:19 IST
ಪಂಡಿತ್‌ ಹರಿಪ್ರಸಾದ್‌ ಚೌರಾಸಿಯಾ ಅವರಿಂದ ಕೊಳಲು ವಾದನ. ತಬಲಾ ಸಾಥ್‌ ನೀಡಿರುವ ಉಸ್ತಾದ್‌ ಝಾಕೀರ್‌ ಹುಸೇನ್‌ (ಚಿತ್ರಭಂಡಾರದಲ್ಲಿರುವ ಚಿತ್ರ).
ಪಂಡಿತ್‌ ಹರಿಪ್ರಸಾದ್‌ ಚೌರಾಸಿಯಾ ಅವರಿಂದ ಕೊಳಲು ವಾದನ. ತಬಲಾ ಸಾಥ್‌ ನೀಡಿರುವ ಉಸ್ತಾದ್‌ ಝಾಕೀರ್‌ ಹುಸೇನ್‌ (ಚಿತ್ರಭಂಡಾರದಲ್ಲಿರುವ ಚಿತ್ರ).   

ಧಾರವಾಡ: ಧಾರವಾಡ ಆಕಾಶ­ವಾಣಿ ಆರಂಭಗೊಂಡಾಗಿನಿಂದ ಇಲ್ಲಿ­ಯ­ವರೆಗೆ ಆಕಾಶವಾಣಿಗೆ ಭೇಟಿ ನೀಡಿದ ಸುಮಾರು 100 ಗಣ್ಯರು, ಕವಿ- ಕಲಾವಿದರು ಹಾಗೂ ಖ್ಯಾತ ಸಂಗೀತ­ಗಾರರ ಛಾಯಾಚಿತ್ರಗಳನ್ನು ಆಕಾಶವಾಣಿ ಸಂಗ್ರಹಿಸಿ ಇರಿಸಿದೆ.

ಹೀಗೆ ಸಂಗ್ರಹಿತ ಅಪರೂಪದ ಛಾಯಾ­­ಚಿತ್ರಗಳನ್ನು ಮುದ್ರಿಸಿ ಆಕಾಶ­ವಾಣಿಗೆ ಭೇಟಿ ನೀಡುವವರು ನೋಡಲು ಅನುಕೂಲವಾಗುವಂತೆ ಆಕಾಶ­ವಾಣಿ ಸಭಾಂಗಣದಲ್ಲಿ ಛಾಯಾ­­ಚಿತ್ರಗಳಿಗೆ ಕಟ್ಟು ಹಾಕಿಸಿ ಪ್ರದರ್ಶಿಸಲಾಗಿದೆ. ಹೀಗೆ ಪ್ರದರ್ಶಿಸಿದ ಈ ಛಾಯಾಚಿತ್ರ ಭಂಡಾರವನ್ನು ಇದೇ ಜೂನ್ -17ರಂದು ಮಂಗಳ­ವಾರ ಬೆಳಿಗ್ಗೆ 11ಕ್ಕೆ ಅದೇ ಸಭಾಂ­ಗಣದಲ್ಲಿ ಉದ್ಛಾಟಸ­ಲಾಗುವುದು ಎಂದು ನಿಲಯದ ನಿರ್ದೇಶಕ ಸಿ.ಯು.ಬೆಳ್ಳಕ್ಕಿ  ತಿಳಿಸಿದ್ದಾರೆ.

ಛಾಯಾಚಿತ್ರ ಭಂಡಾರವನ್ನು ಲೇಖಕ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಉದ್ಛಾಟಿಸಲಿದ್ದು, ಪತ್ರಕರ್ತ ಡಾ.­ಸರಜೂ ಕಾಟಕರ್ ಮುಖ್ಯ ಅತಿಥಿ­ಗಳಾಗಿ ಬರಲಿದ್ದಾರೆ. ಆರು ದಶಕ­ಗಳಿಗೂ ಮಿಕ್ಕಿದ ಧಾರವಾಡ ಆಕಾಶ­ವಾಣಿಯ ಸೇವೆಯಲ್ಲಿ ಅವಿಸ್ಮರಣೀಯ ಕ್ಷಣಗಳು ಅಸಂಖ್ಯ. ಧ್ವನಿರೂಪದಲ್ಲಿ ಸಂಗ್ರಹವಾದ ಮಾತು, ಸಂಗೀತಗಳ ಭಂಡಾರವೇ ಇದೆ. ಅಂತೆಯೇ ಆರಂಭ­ದಿಂದ ಇಂದಿನವರೆಗಿನ ಅನೇಕ ಸಂದರ್ಭ­ಗಳ ಭಾವಚಿತ್ರಗಳು ಕಾಲದ ಕತೆ ಹೇಳುತ್ತವೆ. ಸಾಗಿಬಂದ ಹಾದಿಯ ಮೈಲುಗಲ್ಲುಗಳಂತೆ ಗೋಚರಿಸುತ್ತವೆ. ಅಂತಹ ಅಪರೂಪದ ಭಾವಚಿತ್ರಗಳ ನಿತ್ಯ ದರ್ಶನಕ್ಕೆ ಈಗ ಅವಕಾಶ ಕಲ್ಪಿಸ­ಲಾಗಿದೆ.

ತನ್ನ ಸುತ್ತಲಿನ ಪರಿಸರದ ಎಲ್ಲ ಪ್ರತಿಭೆಗಳಿಗೂ ಅಭಿವ್ಯಕ್ತಿಯ ಅವಕಾಶ ನೀಡಿದ ಆಕಾಶವಾಣಿಗೆ ಮಕ್ಕಳು, ಯುವ­ಕರು, ವೃದ್ಧರು, ಪಂಡಿತರು  ಜನಪದರು, ಜನ­ನಾಯ­ಕರು ಎಲ್ಲರೂ ಭೇಟಿ ನೀಡಿದ್ದಾರೆ.  ನಾದ­ತರಂಗ, ರಂಗ­­ತರಂಗ, ಸಾಹಿತ್ಯಸಾಂಗತ್ಯ ಮತ್ತು ಅವಿ­ಸ್ಮರಣೀಯ ಗಳಿಗೆಗಳು ಹೀಗೆ ನಾಲ್ಕು ವಿಭಾಗಗಳಲ್ಲಿ ಸಂಯೋಜನೆ­ಗೊಂಡ ಚಿತ್ರಭಿತ್ತಿ ನಾಡಿನ ಸಂಗೀತ ದಿಗ್ಗಜರ, ರಂಗಕಲಾವಿದರ, ಕವಿ­ಪುಂಗವರ ನುಡಿಯನ್ನು ಸಮೃದ್ಧ­ಗೊಳಿಸಿದ ಸಂಶೋ-ಧಕರ ಭಾವ ಸಂಪುಟ­ದಂತೆ ಗೋಚರಿಸುತ್ತಿದೆ.

ಈ ಅಪರೂಪದ ಭಾವಚಿತ್ರ ಭಂಡಾರ ನಾಡಿನ ಸಾಂಸ್ಕೃತಿಕ ಲೋಕ­ವನ್ನೇ ತೆರೆದಿಟ್ಟಂತಿದೆ. ಸಂಗೀತ ದಿಗ್ಗಜ­ರಾದ ಪಂ.ಮಲ್ಲಿಕಾರ್ಜುನ ಮನ­ಸೂರ, ಡಾ.ಗಂಗೂಬಾಯಿ ಹಾನ­ಗಲ್, ಪಂ.ಬಸವರಾಜ ರಾಜಗುರು, ಪಂ.ಬಿಸ್ಮಿಲ್ಲಾಖಾನ್ ಮುಂತಾದವರ ವಿಭಿನ್ನ ನಾದಭಂಗಿಗಳು, ಸ್ವಾತಂತ್ರ್ಯ ಸೇನಾನಿ ನಾ.ಸು.ಹರ್ಡಿೀಕರ, ಸಂಶೋ­ಧಕ ಶಂಭಾ ಜೋಶಿ, ಕವಿಗಳಾದ- ದ.ರಾ.ಬೇಂದ್ರೆ, ವಿ.ಕೃ.ಗೋಕಾಕ, ಡಿ.ಎಸ್.ಕರ್ಕಿ, ಚೆನ್ನವೀರ ಕಣವಿ, ಕಾದಂಬರಿ­ಕಾರರಾದ ಶಿವರಾಮ ಕಾರಂತ, ಬಸವರಾಜ ಕಟ್ಟೀಮನಿ, ಸತ್ಯಕಾಮ, ನಾಟಕಕಾರ- ಗಿರೀಶ ಕಾರ್ನಾಡ್ ಹಾಗೂ ಚಂದ್ರಶೇಖರ ಕಂಬಾರ ಮೊದಲಾದವರ ಭಾವ­ಭಂಗಿಗಳು ಚಿತ್ರಭಿತ್ತಿಯಲ್ಲಿ ಮೂಡಿ­ಬಂದಿವೆ. ಆಕಾಶವಾಣಿಯ ಆಡಳಿತ ಕಚೇರಿ ಆವರಣದಲ್ಲಿರುವ ಆಕಾಶ­ವಾಣಿ ಚಿತ್ರಭಂಡಾರಕ್ಕೆ ಭೇಟಿ ನೀಡುವ ಎಲ್ಲರಿಗೂ ಉಚಿತ ಪ್ರವೇಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.