ADVERTISEMENT

ಆರ್‌ಟಿಇ: 2,604 ವಿದ್ಯಾರ್ಥಿಗಳು ದಾಖಲು

ಒಟ್ಟು 7,865 ಅರ್ಜಿ ಸಲ್ಲಿಕೆ: ನಗರದ ಶಾಲೆಗಳತ್ತ ಹೆಚ್ಚಿನ ಒಲವು

ಜಿತೇಂದ್ರ ಆರ್
Published 23 ಏಪ್ರಿಲ್ 2014, 5:24 IST
Last Updated 23 ಏಪ್ರಿಲ್ 2014, 5:24 IST

ಹುಬ್ಬಳ್ಳಿ: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಡಿ 2014–15ನೇ ಸಾಲಿಗೆ ಪ್ರವೇಶ ಪ್ರಕ್ರಿಯೆಯು ಮುಕ್ತಾಯಗೊಂಡಿದ್ದು, ಜಿಲ್ಲೆ ಯಲ್ಲಿ ಒಟ್ಟು 2,604 ಮಕ್ಕಳು ಶಾಲೆಗೆ ಪ್ರವೇಶ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 331 ಅನುದಾನ ರಹಿತ ಖಾಸಗಿ ಶಾಲೆಗಳಿವೆ. ಇವುಗಳಲ್ಲಿ ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ 258 ಶಾಲೆಗಳಲ್ಲಿ 2,744 ಸೀಟುಗಳನ್ನು ಈ ವರ್ಷ ಸರ್ಕಾರವು ಬಡ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿತ್ತು. ನಿರೀಕ್ಷೆಗೂ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಅರ್ಜಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ಶಿಕ್ಷಣ ಹಕ್ಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿರುವ ಕಾರಣ ಹಿಂದೆಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದ್ದು, 7,865 ಅರ್ಜಿಗಳನ್ನು ಮಕ್ಕಳ ಪೋಷಕರು ಸಲ್ಲಿಸಿದ್ದರು. ಇವರಲ್ಲಿ 2,643 ವಿದ್ಯಾರ್ಥಿಗಳಿಗೆ ಪ್ರವೇಶಾವ ಕಾಶ ನೀಡಲಾಗಿತ್ತು.

ಧಾರವಾಡ ಗ್ರಾಮೀಣ: ಸೀಟು ಖಾಲಿ...
ನಗರ ಪ್ರದೇಶದ ಖಾಸಗಿ ಶಾಲೆಗಳಲ್ಲಿ ಸೀಟು ಪಡೆದು ಕೊಳ್ಳಲು ಹೆಚ್ಚಿನ ಪೋಷಕರು ಒಲವು ತೋರಿದ್ದಾರೆ. ಹೀಗಾಗಿ ಹುಬ್ಬಳ್ಳಿ ಹಾಗೂ ಧಾರವಾಡ ನಗರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಹುಬ್ಬಳ್ಳಿ ನಗರ ವೊಂದರಲ್ಲೇ ಒಟ್ಟು 3,358 ವಿದ್ಯಾರ್ಥಿಗಳ ಪೋಷಕರು ಅರ್ಜಿ ಸಲ್ಲಿಸಿದ್ದರು.

ಇವರಲ್ಲಿ 272 ವಿದ್ಯಾರ್ಥಿಗಳು ಎಲ್‌ಕೆಜಿಗೆ ಹಾಗೂ 955 ವಿದ್ಯಾರ್ಥಿಗಳು ಒಂದನೇ ತರಗತಿಗೆ ಆರ್‌ಟಿಇ ಅಡಿ  ಪ್ರವೇಶ ಪಡೆದಿದ್ದಾರೆ. ಅದರಂತೆ ಧಾರವಾಡ ನಗರದ ಖಾಸಗಿ ಶಾಲೆಗಳಲ್ಲಿ ಲಭ್ಯವಿದ್ದ 437 ಸೀಟುಗಳಿಗಾಗಿ ಒಟ್ಟು 2,659 ಅರ್ಜಿಗಳು ಬಂದಿದ್ದು, ಎಲ್‌ಕೆಜಿಗೆ 184 ಹಾಗೂ ಒಂದನೇ ತರಗತಿಗೆ 253 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಕುಂದಗೋಳ, ನವಲಗುಂದ ತಾಲ್ಲೂಕಿನ ಶಾಲೆಗಳಲ್ಲಿ ಲಭ್ಯವಿದ್ದ ಎಲ್ಲ ಸೀಟುಗಳು ಸಹ ಪೂರ್ತಿಯಾಗಿವೆ. ಕಲಘಟಗಿಯಲ್ಲಿ ಒಂದು ಸೀಟು ಮಾತ್ರ ಉಳಿದಿದೆ. ಆದರೆ ಧಾರವಾಡ ಗ್ರಾಮೀಣ ವಲಯ ವ್ಯಾಪ್ತಿಯ ಶಾಲೆಗಳಲ್ಲಿ ಒಟ್ಟು 38 ಸೀಟುಗಳು ಹಾಗೆಯೇ ಉಳಿದಿವೆ. ಎಲ್‌ಕೆಜಿ ವಿಭಾಗದಲ್ಲಿ 106 ಹಾಗೂ ಒಂದನೇ ತರಗತಿಗೆ 41 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

‘ನಗರ ಪ್ರದೇಶದಲ್ಲಿ ಎಲ್ಲ ಸೀಟುಗಳು ಭರ್ತಿಯಾಗಿವೆ. ಗ್ರಾಮೀಣ ವಿಭಾಗದಲ್ಲಿ ಹೆಚ್ಚಾಗಿ ಸರ್ಕಾರಿ ಶಾಲೆಗಳಿರುವ ಕಾರಣ ಹಾಗೂ ಜನರಿಗೆ ಈ ಬಗ್ಗೆ ಅರಿವು ಇಲ್ಲದಿರುವ ಕಾರಣ ಕಡಿಮೆ ಸಂಖ್ಯೆಯಲ್ಲಿ ಅರ್ಜಿ ಬಂದಿದ್ದವು. ಆದಾಗ್ಯೂ ಧಾರ ವಾಡ ಗ್ರಾಮೀಣ ಹೊರತುಪಡಿಸಿ ಉಳಿದ ಕಡೆ ಸೀಟುಗಳು ಉಳಿದಿಲ್ಲ. ಯಾವ ಶಾಲೆಯೂ ಸೀಟು ನೀಡಲು ನಿರಾಕರಿಸಿದ ವರದಿಯಾಗಿಲ್ಲ’ ಎಂದು ಯೋಜನೆಯ ಜಿಲ್ಲಾ ನೋಡಲ್‌ ಅಧಿಕಾರಿ ಜೆ.ಎನ್. ನಂದನ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ 2012-–13ನೇ ಸಾಲಿನಲ್ಲಿ 1,153 ಹಾಗೂ 2013–14ನೇ ಸಾಲಿನಲ್ಲಿ 1,724 ವಿದ್ಯಾರ್ಥಿಗಳು ಆರ್‌ಟಿಇ ಅಡಿಯಲ್ಲಿ ಪ್ರವೇಶ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.