ADVERTISEMENT

‘ಆಳುವವರಿಗೆ ದೇಶಭಕ್ತಿಯೇ ಮಾನದಂಡವಾಗಲಿ’

ಯುವ ಬ್ರಿಗೇಡ್‌ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 10:05 IST
Last Updated 28 ಏಪ್ರಿಲ್ 2018, 10:05 IST

ಹುಬ್ಬಳ್ಳಿ: ‘ನಮ್ಮನ್ನು ಆಳುವವರಿಗೆ ದೇಶಭಕ್ತಿಯೇ ಏಕೈಕ ಮಾನದಂಡವಾಗಬೇಕು. ಅಭ್ಯರ್ಥಿಗೆ ನಿಜವಾದ ದೇಶಭಕ್ತಿ ಇದೆಯೋ, ಇಲ್ಲವೋ ಎಂಬುದನ್ನು ತಿಳಿದುಕೊಂಡು ಮತ ಹಾಕಬೇಕು’ ಎಂದು ಯುವ ಬ್ರಿಗೇಡ್‌ನ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.

ಲಿಂಗರಾಜನಗರದ ಸಮುದಾಯ ಭವನದಲ್ಲಿ ಶುಕ್ರವಾರ ಯುವ ಬ್ರಿಗೇಡ್‌ ವತಿಯಿಂದ ‘ಮತದಾನ ನಮ್ಮ ಹಕ್ಕು, ಸಮರ್ಥ ಆಯ್ಕೆ ನಮ್ಮ ಕರ್ತವ್ಯ’ ಕುರಿತು ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಭಾರತದವರು ದಕ್ಷಿಣ ಭಾರತಕ್ಕೆ ಬರಬಾರದು ಎಂದು ಹೇಳುವುದು ಸರಿಯಲ್ಲ. ಜನಪ್ರತಿನಿಧಿಗಳಾಗುವವರಿಗೆ ಅಖಂಡ ಭಾರತದ ಮೇಲೆ ಪ್ರೀತಿ ಇದೆಯಾ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಶಾಸಕ, ಸಂಸದರಾಗುವವರಿಗೆ ಶೈಕ್ಷಣಿಕ ಅರ್ಹತೆ ನಿಗದಿಪಡಿಸಬೇಕು ಎಂದು ಹೇಳುತ್ತೇವೆ. ಆದರೆ, ಸುಶಿಕ್ಷಿತರು ಎನಿಸಿಕೊಂಡಿರುವ ಕೆಲವು ಐಎಎಸ್, ಕೆಎಎಸ್‌ ಅಧಿಕಾರಿಗಳೇ ಭ್ರಷ್ಟಾಚಾರ ನಡೆಸುತ್ತಾರೆ. ಇದಕ್ಕೆ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆ. ಹುಬ್ಬಳ್ಳಿಯಲ್ಲೇ ಇರುವವರಿಗೆ ಹುಬ್ಬಳ್ಳಿಯ ಕೆಲವು ಸ್ವಾತಂತ್ರ್ಯ ಹೋರಾಟಗಾರರ ಹೆಸರು ಹೇಳಲು ಆಗುವುದಿಲ್ಲ. ಇಂತಹ ಶಿಕ್ಷಣ ನಮಗೆ ಸಿಗುತ್ತಿದೆ. ಅದಕ್ಕೆ, ಆಕ್ಸ್‌ಫರ್ಡ್‌, ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಓದಿ ಪ್ರಧಾನಮಂತ್ರಿ ಆದವರಿಗಿಂತ, ಬೀದಿಯಲ್ಲಿ ಚಹಾ ಮಾರಿ ಪ್ರಧಾನಮಂತ್ರಿ ಆದವರು ಉತ್ತಮ ಎನಿಸುತ್ತಾರೆ’ ಎಂದು ಸೂಲಿಬೆಲೆ ಹೇಳಿದರು.

ADVERTISEMENT

ಕೈ ಕಲೆ ಹೆಮ್ಮೆ: ‘ಮತದಾನದ ದಿನ ಕೈ ಬೆರಳಿಗೆ ಕಲೆ ಮಾಡಿಕೊಳ್ಳುವುದಕ್ಕೆ ಬೇಸರ ಮಾಡಿಕೊಳ್ಳಬಾರದು. ಅದು ನಮ್ಮ ಹೆಮ್ಮೆ ಆಗಬೇಕು’ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

‘ನಮ್ಮದು ಜಗತ್ತಿನ ಶ್ರೇಷ್ಠ ಪ್ರಜಾಪ್ರಭುತ್ವ. ಭಾರತೀಯರ ರಕ್ತದಲ್ಲಿಯೇ ಪ್ರಜಾಪ್ರಭುತ್ವದ ಕುರಿತ ತುಡಿತ ಇದೆ. ನಾವು ಸರ್ವಾಧಿಕಾರವನ್ನು ಒಪ್ಪಿಕೊಳ್ಳುವ ಮನಸ್ಥಿತಿಯವರಲ್ಲ. ರಾಜಪ್ರಭುತ್ವವಿದ್ದಾಗಲೇ ಕೆಟ್ಟ ರಾಜನ ವಿರುದ್ಧ ದಂಗೆ ಎದ್ದು ಅವನನ್ನು ಇಳಿಸಿದವರು. ಮೇ 12ರಂದು ಎಲ್ಲರೂ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಬಗೆಗಿನ ನಮ್ಮ ತುಡಿತ ಎಂಥದ್ದು ಎಂಬುದನ್ನು ಮತ್ತೆ ಪ್ರದರ್ಶಿಸಬೇಕು’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ‘ಮೋದಿ ಮೆಚ್ಚಿದ ಯೋಗಿ’ ಕೃತಿ ಬಿಡುಗಡೆ ಮಾಡಲಾಯಿತು. ಮಹೇಶ ದ್ಯಾವಪ್ಪನವರ, ಸುಭಾಷಸಿಂಗ್ ಜಮಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.