ADVERTISEMENT

ಇನ್ನೂ ನನಸಾಗದ ‘ಅಂಡರ್‌ಪಾಸ್‌’ ಕನಸು!

ಭವಾನಿ ನಗರ– ದೇಶಪಾಂಡೆ ನಗರಕ್ಕೆ ಇದೇ ಸಂಪರ್ಕ ಹಾದಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:32 IST
Last Updated 2 ಜನವರಿ 2014, 6:32 IST

ಹುಬ್ಬಳ್ಳಿ: ಕೂಗಳತೆ ಅಂತರದಲ್ಲಿರುವ ಭವಾನಿ ನಗರ ಮತ್ತು ದೇಶಪಾಂಡೆ ನಗರ ಮಧ್ಯೆ ಸುಲಭ ಸಂಪರ್ಕಕ್ಕೆ ಅಡ್ಡವಾಗಿ ನಿಂತಿರುವ ರೈಲ್ವೆ ಹಳಿಗೆ ‘ಅಂಡರ್‌ ಪಾಸ್‌’ ರಸ್ತೆ ನಿರ್ಮಿಸಬೇಕೆಂಬ ಸ್ಥಳೀಯರ ಬೇಡಿಕೆ ಎರಡು ದಶಕ ಹಿಂದಿನದು. ಹಳಿಗೆ ಅಡ್ಡಲಾಗಿ ಓಡಾಡುತ್ತ ಬೇಡಿಕೆ ಈಡೇರಿಸುವಂತೆ ಒತ್ತಾಯಿಸುತ್ತಲೇ ಬಂದಿರುವ ಭವಾನಿ ನಗರ ನಾಗರಿಕರ ಸಂಘ, ಇದೀಗ ಈ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಮತ್ತು ಪಾಲಿಕೆ ಮೇಲೆ ಮತ್ತೆ ಒತ್ತಡ ಹೇರಲು ಮುಂದಾಗಿದೆ.

ಅಂಡರ್‌ ಪಾಸ್ ರಸ್ತೆ ನಿರ್ಮಾಣಕ್ಕೆ ರೈಲ್ವೆ ಮಂಡಳಿ 1989ರಲ್ಲೇ ಹಸಿರು ನಿಶಾನೆ ತೋರಿಸಿತ್ತು. ಆದರೆ ಸಮೀಪದ ರೈಲ್ವೆ ಗಾಲ್ಫ್‌ ಮೈದಾನ ಮೂಲಕ ಭವಾನಿ ನಗರದಿಂದ ಕೇಶ್ವಾಪುರಕ್ಕೆ ಹೋಗುವ ರಸ್ತೆಯನ್ನು ಪಾಲಿಕೆಯ ಸುಪರ್ದಿಗೆ ಬಿಟ್ಟುಕೊಡುವ ಕುರಿತ ವಿವಾದ ಮತ್ತು ಅಂಡರ್‌ ಪಾಸ್‌ ರಸ್ತೆ ನಿರ್ಮಾಣಕ್ಕೆ ತಗಲುವ ವೆಚ್ಚ ಭರಿಸುವ ಕುರಿತ ಗೊಂದಲದಿಂದಾಗಿ ಭವಾನಿ ನಗರ ನಿವಾಸಿಗಳ ಈ ಬೇಡಿಕೆ ನನೆಗುದಿಗೆ ಬಿದ್ದಿದೆ. ರೈಲ್ವೆ ಮತ್ತು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈಲ್ವೆ ಹಳಿ ಕ್ರಾಸ್‌ ಮಾಡಬೇಕಾದ ಅನಿವಾರ್ಯತೆ ದೂರವಾಗಿಲ್ಲ ಎನ್ನುವ ಅಳಲು ಇಲ್ಲಿನ ನಿವಾಸಿಗಳದ್ದು.

ಭವಾನಿ ನಗರ ಮತ್ತು ದೇಶಪಾಂಡೆ ನಗರ ಮಧ್ಯೆ ಸಂಚರಿಸಲು ಶಾಲಾ ಮಕ್ಕಳ ಸಹಿತ ನೂರಾರು ಮಂದಿ ರೈಲು ಹಳಿ ದಾಟುವುದು ಅನಿವಾರ್ಯ. ಈ ಎರಡು ನಗರಗಳ ಮಧ್ಯೆ ಕೇವಲ 350ರಿಂದ 400 ಮೀಟರ್‌ ಅಂತರವಿದೆ. ಹೀಗಾಗಿ ರೈಲ್ವೆ ಹಳಿಗೆ ಅಂಡರ್‌ ಪಾಸ್‌ ರಸ್ತೆ ನಿರ್ಮಿಸಬೇಕು ಎನ್ನುವುದು ಸ್ಥಳೀಯರ ಬಹುಕಾಲದ ಬೇಡಿಕೆ.

ಭವಾನಿ ನಗರ ನಿವಾಸಿಗಳು ದೇಶಪಾಂಡೆ ನಗರ ಮತ್ತು ಅಲ್ಲಿಂದ ಮಾರ್ಕೆಟ್‌ ಕಡೆಗೆ ರೈಲ್ವೆ ಹಳಿ ದಾಟಿ ನಡೆದುಕೊಂಡು ಹೋಗಲು ಕೇವಲ ಐದು ನಿಮಿಷ ಸಾಕು. ಆದರೆ ವಾಹನದಲ್ಲಿ ಸುತ್ತು ಬಳಸಿಕೊಂಡು ಹೋಗಬೇಕಿದ್ದು, 2ರಿಂದ 3 ಕಿಲೋ ಮೀಟರ್‌ ದೂರ ಸಂಚರಿಸಬೇಕು. ಇಲ್ಲಿ ಹಳಿಯ ಮೂಲಕ ಹಲವು ರೈಲುಗಳು ಸಂಚರಿಸುತ್ತಲೇ ಇವೆ. ಈ ಪ್ರದೇಶದಲ್ಲಿ ಹಳಿ ರಚನೆ ನೇರವಾಗಿಲ್ಲ.

ಹೀಗಾಗಿ ರೈಲು ಹಾದುಹೋಗುವುದು ಕೆಲವೊಮ್ಮೆ ಗಮನಕ್ಕೆ ಬರುವುದಿಲ್ಲ. ಈ ಕಾರಣಕ್ಕೆ ರೈಲ್ವೆ ಹಳಿ ಕ್ರಾಸ್‌ ಮಾಡುವುದು ಅಪಾಯಕಾರಿ. ಅಂಡರ್‍ ಪಾಸ್‌ ರಸ್ತೆ ನಿರ್ಮಾಣವೊಂದೇ ಈ ಸಮಸ್ಯೆಗೆ ಪರಿಹಾರ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ‘ರೈಲ್ವೆ ಹಳಿಯ ಸಮೀಪದಲ್ಲಿ ಭವಾನಿ ನಗರದಲ್ಲಿರುವ ಸೆವೆಂತ್ ಡೇ ಶಾಲೆ ಮತ್ತು ದೇಶಪಾಂಡೆ ನಗರದಲ್ಲಿರುವ ಬಾಲಕಿಯರ ಆಂಗ್ಲ ಪ್ರೌಢಶಾಲೆ ಇದೆ. ಈ ಎರಡೂ ಶಾಲೆಗೆ ಹೋಗುವ ಮಕ್ಕಳು ರೈಲ್ವೆ ಹಳಿ ಮಧ್ಯೆ ಓಡಾಡುವ ಅನಿವಾರ್ಯ ಸ್ಥಿತಿ ಇಲ್ಲಿದೆ. ಈಗಾಗಲೇ ಇಲ್ಲಿ ಹಲವು ದುರ್ಘಟನೆಗಳು ನಡೆದಿವೆ.

ಈ ಹಿನ್ನೆಲೆಯಲ್ಲಾದರೂ ಅಂಡರ್‌ ಪಾಸ್‌ ರಸ್ತೆ ನಿರ್ಮಿಸುವಂತೆ ಸ್ಥಳೀಯ ನಿವಾಸಿಗಳು ಒಕ್ಕೊರಲಿನಿಂದ ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ ಈ ಬಗ್ಗೆ ಅಧಿಕಾರಿಗಳು ಸುಮ್ಮನಿದ್ದಾರೆ. ಇತ್ತೀಚೆಗೆ ಹಳಿ ಹೊಂದಿ­ಕೊಂಡಂತೆ ನಿರ್ಮಿಸಲಾಗಿದ್ದ ಮೆಟ್ಟಿಲುಗಳನ್ನೂ ತೆರವುಗೊಳಿಸಲಾಗಿದೆ’ ಎಂದು ಭವಾನಿ ನಗರ ನಾಗರಿಕ ಸಂಘದ ಕಾರ್ಯದರ್ಶಿ ವೆಂಕಟೇಶ ದೇವದಾಸ ಹೇಳುತ್ತಾರೆ.

‘ಅಂಡರ್‌ ಪಾಸ್‌ ರಸ್ತೆ ನಿರ್ಮಿಸಬೇಕೆಂಬ ಬೇಡಿಕೆ ಎರಡು ದಶಕಗಳ ಹಿಂದಿನದು. ಈ ಕುರಿತು ಹುಬ್ಬಳ್ಳಿ– ಧಾರವಾಡ ಮಹಾನಗರಪಾಲಿಕೆ ಮತ್ತು ರೈಲ್ವೆ ಮಧ್ಯೆ 1989ರಲ್ಲಿ ಪತ್ರ ವ್ಯವಹಾರ ನಡೆದಿದೆ. ಆದರೆ ಅಧಿಕಾರಿ ವರ್ಗದಿಂದ ಈವರೆಗೂ ನಮ್ಮ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿಲ್ಲ’ ಎನ್ನುತ್ತಾರೆ ಅವರು.

‘1989ರವರೆಗೆ ಪಾದಚಾರಿಗಳಿಗೆ ರೈಲ್ವೆ ಗಾಲ್ಫ್‌ ಕ್ಲಬ್‌ ಮೈದಾನ ಪ್ರವೇಶಿಸಲು ಮತ್ತು ಮೈದಾನದ ಮೂಲಕ ಕೇಶ್ವಾಪುರ, ದೇಶಪಶಾಂಡೆ ನಗರ ಮತ್ತಿತರ ಕಡೆಗೆ ಹೋಗಲು ಮುಕ್ತ ಅವಕಾಶ ಇತ್ತು. ಆದರೆ ನಂತರ ಮೈದಾನ ಸುತ್ತ ಆವರಣಗೋಡೆ ನಿರ್ಮಿಸಲಾಯಿತು. ಬಳಿಕ ಮೈದಾನದ ಒಳಗಿನಿಂದ ಹೋಗುವುದಕ್ಕೆ ಅನುಮತಿ ನಿರಾಕರಿಸಲಾಯಿತು. ಈಗ ರೈಲ್ವೆ ಹಳಿವರೆಗೆ ಹೋಗಲು ಆವರಣಗೋಡೆಯ ಪಕ್ಕದಿಂದಾಗಿ ಹೋಗಬೇಕಾಗಿದೆ’ ಎನ್ನುತ್ತಾರೆ.

ಅಂಡರ್‌ ಪಾಸ್‌ ರಸ್ತೆ ಮೂಲಕ ಸಂಚರಿಸಲು ಸಾಧ್ಯವಾಗುವಂತೆ ರೈಲ್ವೆ ಹಳಿವರೆಗೆ ಹೋಗಲು ಸಂಪರ್ಕ ರಸ್ತೆ ನಿರ್ಮಿಸಲು ಗಾಲ್ಫ್ ಮೈದಾನದ ಜಾಗದಲ್ಲಿ ಸ್ವಲ್ಪ ಭಾಗವನ್ನು ನೈರುತ್ಯ ರೈಲ್ವೆ ಬಿಟ್ಟುಕೊಡಬೇಕು. ಗಾಲ್ಫ್‌ ಮೈದಾನಕ್ಕೆ ಹೊಂದಿಕೊಂಡಂತೆ ಇರುವ ಮನೆಗಳ ಮೇಲೂ ಗಾಲ್ಫ್‌ ಬಾಲ್‌ ಬಂದು ಬೀಳುವುದು ಸಾಮಾನ್ಯ­ವಾಗಿದೆ. ‘ಮೈದಾನದಿಂದ ಹಾರಿ ಹೊರಗೆ ಬರುವ ಬಾಲ್‌ ತಾಗಿ ಹಲವರು ಗಾಯಗೊಂಡ ಘಟನೆಯೂ ನಡೆದಿದೆ’ ಎನ್ನುತ್ತಾರೆ ಭವಾನಿ ನಗರದ ನಿವಾಸಿ ಮುರುಗೇಶ ಹೀರೆಮನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT