ADVERTISEMENT

ಇನ್ನೂ ಬರಬೇಕಿದೆ ಶೇ 15ರಷ್ಟು ಪಠ್ಯಪುಸ್ತಕ

ಶಾಲೆ ಆರಂಭವಾಗಿ ವಾರ ಕಳೆದರೂ ಉರ್ದು, ತಮಿಳು, ತೆಲುಗು ಪಠ್ಯ ಪುಸ್ತಕಗಳೇ ಬಂದಿಲ್ಲ

ಬಸವರಾಜ ಹವಾಲ್ದಾರ
Published 9 ಜೂನ್ 2018, 6:13 IST
Last Updated 9 ಜೂನ್ 2018, 6:13 IST
ಹುಬ್ಬಳ್ಳಿಯ ಗೋಡೌನ್‌ನಲ್ಲಿರುವ ಪಠ್ಯಪುಸ್ತಕಗಳು
ಹುಬ್ಬಳ್ಳಿಯ ಗೋಡೌನ್‌ನಲ್ಲಿರುವ ಪಠ್ಯಪುಸ್ತಕಗಳು   

ಹುಬ್ಬಳ್ಳಿ: ಶಾಲೆಗಳು ಆರಂಭವಾಗಿ ಒಂದು ವಾರ ಕಳೆದಿದೆ. ಕನ್ನಡ ಹಾಗೂ ಇಂಗ್ಲಿಷ್‌ ಮಾಧ್ಯಮದ ಬಹುತೇಕ ಪಠ್ಯಪುಸ್ತಕಗಳು ಬಂದಿದ್ದರೂ, ಇನ್ನು ಕೆಲವು ಬಂದಿಲ್ಲ.  ಉರ್ದು, ತೆಲುಗು, ತಮಿಳು ಮಾಧ್ಯಮದ ಪಠ್ಯ ಪುಸ್ತಕಗಳು ಇನ್ನೂ ಬಂದೇ ಇಲ್ಲ. ಹಾಗಾಗಿ, ಪುಸ್ತಕಗಳಿಲ್ಲದೇ ವಿದ್ಯಾರ್ಥಿಗಳು ಶಾಲೆಗೆ ಹೋಗುವಂತಾಗಿದೆ.

ರಾಜ್ಯ ಸರ್ಕಾರವು 1 ರಿಂದ 10ನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ಉಚಿತವಾಗಿ ಪೂರೈಸುತ್ತದೆ. ಅನುದಾನ ರಹಿತ ಶಾಲೆಗಳೂ ಪುಸ್ತಕಗಳ ಬೇಡಿಕೆ ಪಟ್ಟಿಯೊಂದಿಗೆ ಹಣವನ್ನೂ ಪಾವತಿಸಿರುತ್ತವೆ. ಅವುಗಳಿಗೂ ಸರ್ಕಾರದ ವತಿಯಿಂದಲೇ ಪೂರೈಸಲಾಗುತ್ತದೆ.

ಜಿಲ್ಲೆಯಲ್ಲಿ ಒಟ್ಟು 20,07,290 ಪಠ್ಯಪುಸ್ತಕಗಳು ಬೇಕಾಗಿದ್ದರೆ, ಅದರಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 14,09,524 ಹಾಗೂ ಅನುದಾನ ರಹಿತ ಶಾಲೆಗಳಿಗೆ 5,97,766 ಪಠ್ಯಪುಸ್ತಕಗಳು ಬೇಕಿವೆ. ಅವುಗಳ ಪೈಕಿ ಇನ್ನೂ 2,88,477 ಪುಸ್ತಕಗಳ ಪೂರೈಕೆ ಬಾಕಿ ಇದೆ.

ADVERTISEMENT

ಧಾರವಾಡ ಗ್ರಾಮೀಣಕ್ಕೆ ಶೇ 91, ಧಾರವಾಡ ಗ್ರಾಮೀಣಕ್ಕೆ ಶೇ 93, ಕಲಘಟಗಿಗೆ ಶೇ 97 ಹಾಗೂ ನವಲಗುಂದ ತಾಲ್ಲೂಕಿಗೆ ಶೇ 91 ರಷ್ಟು ಪುಸ್ತಕಗಳನ್ನು ಈಗಾಗಲೇ ಪೂರೈಸಲಾಗಿದೆ. ಕೆಲವಷ್ಟೇ ಬಾಕಿ ಉಳಿದಿವೆ. ಧಾರವಾಡ ನಗರಕ್ಕೆ ಶೇ 87, ಹುಬ್ಬಳ್ಳಿ ನಗರಕ್ಕೆ ಶೇ 79, ಕುಂದಗೋಳಕ್ಕೆ ಶೇ 60 ರಷ್ಟು ಮಾತ್ರ ಪುಸ್ತಕಗಳು ಪೂರೈಕೆಯಾಗಿವೆ. ಉಳಿದ ಪುಸ್ತಕಗಳಿಗಾಗಿ ಇನ್ನೂ ಪೂರೈಕೆಯಾಗಿಲ್ಲ.

ಕರ್ನಾಟಕ ಪಠ್ಯ ಪುಸ್ತಕಗಳ ಸಂಘವು ಬಹುತೇಕ ಪಠ್ಯಪುಸ್ತಕಗಳನ್ನು ಈಗಾಗಲೇ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಕಳುಹಿಸಿದೆ. ಶಾಲಾ ಮುಖ್ಯ ಶಿಕ್ಷಕರು, ನಿತ್ಯ ಅಲ್ಲಿಂದ ಅವುಗಳನ್ನು ಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಬಾಕಿ ಉಳಿದಿರುವ ಪುಸ್ತಕಗಳಿಗಾಗಿ ನಿತ್ಯ ಪುಸ್ತಕ ಗೋಡೌನ್‌ಗೆ ಅಲೆಯುವಂತಾಗಿದೆ.

ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಹಲವಾರು ಉರ್ದು, ತೆಲುಗು, ತಮಿಳು ಶಾಲೆಗಳಿವೆ. ಆ ಶಾಲೆಗಳಿಗೆ ಇನ್ನೂ ಪುಸ್ತಕಗಳು ಬಂದೇ ಇಲ್ಲ. ಅಲ್ಲಿನ ವಿದ್ಯಾರ್ಥಿಗಳು, ಹಿಂದಿನ ವರ್ಷದ ವಿದ್ಯಾರ್ಥಿಗಳಿಂದ ಪಠ್ಯ ಪುಸ್ತಕ ಇಸಿದುಕೊಂಡು ಬಂದು ಓದುವಂತಾಗಿದೆ. ಕೆಲ ಮಕ್ಕಳು ಬರಿಗೈಯಲ್ಲಿ ಶಾಲೆಗೆ ಹೋಗುವಂತಾಗಿದೆ.

ಕನ್ನಡ ಹಾಗೂ ಇಂಗ್ಲಿಷ್‌ ಮಾಧ್ಯಮದ 1 ರಿಂದ 10ನೇ ತರಗತಿಯ ಬಹುತೇಕ ಪಠ್ಯಪುಸ್ತಕಗಳು ಬಂದಿವೆ. ಎರಡನೇ ಹಂತದಲ್ಲಿ ಬಂದಿರುವ ಕೆಲವು ಪುಸ್ತಕಗಳನ್ನೂ ವಿತರಣೆ ಮಾಡಲಾಗುತ್ತಿದೆ. ಉರ್ದು ಮಾಧ್ಯಮದ ಪುಸ್ತಕಗಳು ಬಂದಿಲ್ಲ. ಶೀಘ್ರದಲ್ಲಿಯೇ ಅವುಗಳೂ ಬರಲಿವೆ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್‌.ಎಚ್. ನಾಗೂರ.

ಬಹುತೇಕ ಪಠ್ಯ ಪುಸ್ತಕಗಳನ್ನು ಈಗಾಗಲೇ ಪೂರೈಸಲಾಗಿದೆ. ಉಳಿದವುಗಳ ಪೂರೈಕೆಗೂ ಕ್ರಮ ಕೈಗೊಳ್ಳಲಾಗಿದೆ
ಎನ್.ಎಚ್‌. ನಾಗೂರ, ಡಿಡಿಪಿಐ ಧಾರವಾಡ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.