ADVERTISEMENT

`ಎಚ್ಚರವಾಗುವಷ್ಟರಲ್ಲಿ ಬಸ್ ಉರುಳಿ ಬಿದ್ದಿತ್ತು'

ಇಟಿಗಟ್ಟಿ ಬಳಿ ದುರಂತ: ಬದುಕುಳಿದವರಲ್ಲಿ ಮಾಯವಾಗಿಲ್ಲ ಭೀತಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 6:30 IST
Last Updated 15 ಜೂನ್ 2013, 6:30 IST

ಹುಬ್ಬಳ್ಳಿ: `ನಿದ್ದೆ ಮಂಪರಿನಲ್ದ್ದ್‌ದೆ. ಇದ್ದಕ್ಕಿದ್ದಂತೆ ಬಸ್ ಬಲಭಾಗಕ್ಕೆ ವಾಲುತ್ತಿದ್ದಂತೆ ಎಚ್ಚರವಾಯಿತು. ಏನಾಗುತ್ತಿದೆ ಎಂದು ಅಂದುಕೊಳ್ಳುವಷ್ಟರಲ್ಲಿ ಬಸ್ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಬಸ್ಸಿನಲ್ಲಿದ್ದ ಸುಮಾರು 25ಕ್ಕೂ ಹೆಚ್ಚು ಮಂದಿ ಒಮ್ಮೆಗೆ ಕಿರುಚಿಕೊಂಡೆವು. ಬಿದ್ದ ರಭಸಕ್ಕೆ ಬಸ್ಸಿನ ಮೇಲ್ಭಾಗ ತೆರೆದುಕೊಂಡದ್ದರಿಂದ ನಾವು ಹೊರಬಂದೆವು...'

ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಇಟಿಗಟ್ಟಿ ಬಳಿ ಶುಕ್ರವಾರ ನಸುಕಿನಲ್ಲಿ ಖಾಸಗಿ ಬಸ್ ಉರುಳಿಬಿದ್ದು ಸಂಭವಿಸಿ ದುರಂತದಲ್ಲಿ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗೊಂಡು ಜೀವಾಪಾಯದಿಂದ ಪಾರಾದ ಪುಣೆ ಮೂಲದ ಟೈಲ್ಸ್ ಕಾರ್ಮಿಕ ಮನೋಜ್ ಮೀನಾ, ದುರ್ಘಟನೆಯನ್ನು ವಿವರಿಸಿದ್ದು ಹೀಗೆ. ಈ ದುರಂತದಲ್ಲಿ ಐದು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದರು.

ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮನೋಜ್, ಈ ಬಸ್ಸಿನಲ್ಲಿ ಪುಣೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ನಾಲ್ವರ ತಂಡದ ಪೈಕಿ ಒಬ್ಬ. ತಂಡದ ನೇತೃತ್ವ ವಹಿಸಿದ್ದ ಕಯಾಲಿರಾಮ್ ಅರ್ಜುನ್ ಪ್ರಜಾಪತಿ ಎಂಬವರು ದುರ್ಘಟನೆಯಲ್ಲಿ ಬಲಕಾಲು ಮುರಿತಕ್ಕೆ ಒಳಗಾಗಿದ್ದಾರೆ.

`ಘಟನೆ ನಡೆದ ತಕ್ಷಣ ಬಸ್ಸಿನ ಇಬ್ಬರು ಚಾಲಕರು ಪರಾರಿಯಾಗ್ದ್ದಿದಾರೆ. ಬೆನ್ನಿನ ಭಾಗಕ್ಕೆ ಗಂಭೀರ ಗಾಯಗೊಂಡಿರುವ ಕ್ಲೀನರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಂತದಲ್ಲಿ ಸಾವಿಗೀಡಾದವರು ಮತ್ತು ಗಂಭೀರ ಗಾಯಗೊಂಡವರು ಬಸ್ಸಿನ ಬಲಭಾಗದಲ್ಲಿ ಸೀಟುಗಳಲ್ಲಿ ಕುಳಿತವರು. ಘಟನೆ ನಡೆದ15 ನಿಮಿಷದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಜೊತೆಯಲ್ಲೇ ಅಂಬುಲೆನ್ಸ್ ಕೂಡಾ ತಲುಪಿದೆ' ಎಂದು ಮನೋಜ್ ವಿವರಿಸಿದರು. 

ಗಾಯಾಳುಗಳ ಪೈಕಿ 22 ಮಂದಿ ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಕೆಲವರು ಎಲುಬು ಮುರಿತಕ್ಕೆ ಒಳಗಾಗಿದ್ದು, ಸಣ್ಣಪುಟ್ಟ ಗಾಯಗೊಂಡವರು ಪ್ರಥಮ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರ ನಡೆದರು. ಬಾಲಕಿಯೊಬ್ಬಳನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಸ್ಥಳಾಂತರಿಸಲಾಗಿದೆ.

ರಜಾ ದಿನ ಕಳೆಯಲು ಪುಣೆಗೆ ತೆರಳಿದ್ದ ಬೆಂಗಳೂರಿನ ಆರ್‌ಎನ್‌ಎಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ, ಚಿಕ್ಕಮಗಳೂರು ನಿವಾಸಿ ನೂತನ್ ಈ ಬಸ್ಸಿನಲ್ಲಿ ಮರಳಿ ಹೋಗುತ್ತಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

`ಘಟನೆ ನಡೆದ ಸಂದರ್ಭದಲ್ಲಿ ಎಲ್ಲರಂತೆ ನಾನೂ ಕೂಡಾ ನಿದ್ದೆಯಲ್ಲಿದ್ದೆ. ಹೀಗಾಗಿ ಘಟನೆ ಹೇಗಾಯಿತು ಎಂದು ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ' ಎಂದರು.

ಗಾಯಾಳುಗಳ ಪೈಕಿ ಹೆಚ್ಚಿನವರು ಮುಂಬೈ, ಬೆಂಗಳೂರು, ಚಿತ್ರದುರ್ಗ, ಕೊಚ್ಚಿ, ಮಧುರೈ ನಿವಾಸಿಗಳು. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.