ADVERTISEMENT

ಎಟಿಎಂಗಳಲ್ಲಿ ಭದ್ರತೆ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 7:13 IST
Last Updated 11 ಅಕ್ಟೋಬರ್ 2017, 7:13 IST

ಸುರಕ್ಷತೆ ದೃಷ್ಟಿಯಿಂದ ಅವಳಿ ನಗರದಲ್ಲಿ ಇರುವ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳ ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ನೇಮಕ ಮಾಡುವಂತೆ ಪೊಲೀಸರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ ಅದನ್ನು ಕೆಲ ಬ್ಯಾಂಕಿನವರು ಪಾಲಿಸುತ್ತಿಲ್ಲ. ಅಲ್ಲದೆ ಸುರಕ್ಷತಾ ಕ್ರಮಗಳನ್ನು ಪಾಲಿಸಿಲ್ಲ. ಹೀಗಾಗಿ, ನಿರ್ಲಕ್ಷ್ಯ ತೋರಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಪೊಲೀಸ್‌ ಕಮಿಷನರ್‌ ಎಂ.ಎನ್‌. ನಾಗರಾಜ ಅವರು ಕಡಕ್‌ ಸಂದೇಶ ರವಾನೆ ಮಾಡಿದ್ದಾರೆ.

ಎಟಿಎಂ ಕೇಂದ್ರಗಳಿಗೆ ದಿನದ 24 ಗಂಟೆ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಎಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿರುವುದಿಲ್ಲ ಅಂತಹ ಎಟಿಎಂ ಕೇಂದ್ರಗಳನ್ನು ಮುಚ್ಚಬೇಕು ಎಂದು ಬ್ಯಾಂಕ್‌ ಅಧಿಕಾರಿಗಳ ಸಭೆ ಕರೆದು ಪೊಲೀಸರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಆದರೂ, ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ನಗದು ದರೋಡೆ ಮತ್ತು ದರೋಡೆ ಯತ್ನ ಪ್ರಕರಣಗಳು ಅವಳಿ ನಗರದಲ್ಲಿ ಆಗಾಗ್ಗೆ ನಡೆಯುತ್ತಿವೆ.

ಹುಬ್ಬಳ್ಳಿಯ ದೇಶಪಾಂಡೆನಗರ ರೋಟರಿ ಶಾಲೆ ಎದುರು ಇರುವ ಎಸ್‌ಬಿಐ ಎಟಿಎಂ ಕೇಂದ್ರದಲ್ಲಿ ಈಚೆಗೆ ₹ 20 ಲಕ್ಷ ನಗದು ಕಳವು ಮಾಡಿದ್ದೇ ಇದಕ್ಕೆ ತಾಜಾ ಉದಾಹರಣೆ. ಕಳವು ನಡೆದು ತಿಂಗಳಾದರೂ ಆರೋಪಿಗಳ ಸುಳಿವು ಇನ್ನೂ ಸಿಕ್ಕಿಲ್ಲ.

ADVERTISEMENT

ಸುರಕ್ಷತಾ ಕ್ರಮಗಳಿಲ್ಲ: ಎಟಿಎಂ ಕೇಂದ್ರಗಳಿಗೆ ಕಡ್ಡಾಯವಾಗಿ ದಿನದ 24 ಗಂಟೆ ಭದ್ರತಾ ಸಿಬ್ಬಂದಿ ನೇಮಿಸುವುದು, ಬ್ಯಾಂಕಿನ ಒಳ ಮತ್ತು ಹೊರಗೆ ಚಿತ್ರೀಕರಣ ಆಗುವಂತಹ ಉತ್ತಮ ಗುಣಮಟ್ಟದ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ, ಎಚ್ಚರಿಕೆ ಗಂಟೆ (ಬರ್ಗಲರ್‌ ಅಲಾರಾಂ), ಎಟಿಎಂ ಕೇಂದ್ರಗಳಿಗೆ ಹಣ ತುಂಬುವಾಗ ಆರ್ಮ್‌ ಗಾರ್ಡ್‌ ನೇಮಿಸಬೇಕು ಎಂಬ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ ಅದನ್ನು ಯಾರೂ ಪಾಲಿಸುತ್ತಿಲ್ಲ.

ಬಹುತೇಕ ಬ್ಯಾಂಕಿನವರು ಎಟಿಎಂ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಿಲ್ಲ ಎಂಬುದು ಪೊಲೀಸರ ಪರಿಶೀಲನೆಯಿಂದ ಗೊತ್ತಾಗಿದೆ. ಅಕ್ಟೋಬರ್‌ 31ರ ಒಳಗೆ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಎಚ್ಚರಿಕೆ ಸಂದೇಶ ನೀಡಿ, ಬ್ಯಾಂಕಿನ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಸಹ ಮಾಡಲಾಗಿದೆ.

ಸುರಕ್ಷತಾ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿ ಆಗಾಗ್ಗೆ ಎಟಿಎಂ ಕೇಂದ್ರಗಳಲ್ಲಿ ದರೋಡೆ, ನಗದು ಕಳವು ಪ್ರಕರಣ ನಡೆಯುತ್ತಲೇ ಇವೆ. ರಾಜಧಾನಿ ಬೆಂಗಳೂರಿನಲ್ಲಿ ಎಟಿಎಂನಲ್ಲಿ ಹಣ ತೆಗೆಯುವವರ ಕೊಲೆ, ಕೊಲೆ ಯತ್ನ ಪ್ರಕರಣಗಳು ನಡೆದು ಇಡೀ ದೇಶವನ್ನೇ ಬಿಚ್ಚಿಬೀಳಿಸಿದೆ. ಇದಾದ ನಂತರ ಎಟಿಎಂ ಕೇಂದ್ರಗಳಿಗೆ ದಿನದ 24 ಗಂಟೆ ಕಡ್ಡಾಯವಾಗಿ ಭದ್ರತಾ ಸಿಬ್ಬಂದಿ ನೇಮಕ ಮಾಡಬೇಕು ಎಂಬ ಆದೇಶವನ್ನು ರಾಜ್ಯ ಪೊಲೀಸರು ಈ ಹಿಂದೆ ಹೊರಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.