ADVERTISEMENT

ಎರಡು ಗಂಟೆ ಹೆದ್ದಾರಿ ತಡೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 7:00 IST
Last Updated 5 ಮಾರ್ಚ್ 2011, 7:00 IST

ಕಲಘಟಗಿ:  ಪಟ್ಟಣದ ಗ್ರಾಮ ದೇವಿಯ ದೇವಸ್ಥಾನಕ್ಕೆ ಸೇರಿದ ಅತಿಕ್ರಮಣ ಆಸ್ತಿಯನ್ನು ತೆರವು ಗೊಳಿಸಿಕೊಡಬೇಕೆಂದು ಒತ್ತಾಯಿಸಿ, ಸಾವಿರಾರು ಸಂಖ್ಯೆಯಲ್ಲಿ ಸೇರಿದ ನಾಗರಿಕರು ಇಲ್ಲಿಯ ಎಪಿಎಂಸಿ ಎದುರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.ವಸತಿ ಬಡಾವಣೆಯ ನಿರ್ಮಾಣ ಕ್ಕಾಗಿ ಭೂಮಿ ಖರೀದಿಸಿದವರು, ಅದಕ್ಕೆ ಹೊಂದಿಕೊಂಡಿರುವ ಅರ್ಬನ್ ಬ್ಯಾಂಕ್ ಎದುರಿಗಿನ ಪಟ್ಟಣದ ಗ್ರಾಮದೇವಿಯ ಜಾತ್ರಾಮಹೋತ್ಸವ ನಡೆಯುವ ಜಾಗೆಯನ್ನು ಅತಿಕ್ರಮಿಸಿ ದ್ದಾರೆ ಎಂದು ಗ್ರಾಮದೇವಿ ಆಡಳಿತ ಮಂಡಳಿಯ ಸದಸ್ಯರು ಭಕ್ತರೊಂದಿಗೆ ಕಾರವಾರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯನ್ನು ಬೆಳಿಗ್ಗೆ 11ರಿಂದ ಎರಡು ತಾಸಿಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು.

ಜಿಲ್ಲಾಧಿಕಾರಿ ದರ್ಪಣ್ ಜೈನ್ ಸ್ಥಳಕ್ಕೆ ಭೇಟಿ ನೀಡಬೇಕು, ಅತಿಕ್ರಮಿತ ಜಾಗವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು. ಪರಿಸ್ಥಿತಿಯ ಗಂಭೀರತೆ ಅರಿತ ತಾಲ್ಲೂಕು ದಂಡಾಧಿಕಾರಿ ಇಸ್ಲಾವುದ್ದಿನ್ ಮತ್ತು ಡಿ.ವೈ.ಎಸ್.ಪಿ. ಸ್ಥಳಕ್ಕೆ ಭೇಟಿ ನೀಡಿ, ರಸ್ತೆತಡೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ವಿವರವನ್ನು ದೂರವಾಣಿ ಯಲ್ಲಿ ಪಡೆದ ಜಿಲ್ಲಾಧಿಕಾರಿಗಳು, ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ ನಂತರ  ಪ್ರತಿಭಟನೆ ಯನ್ನು ಹಿಂದಕ್ಕೆ ಪಡೆಯಲಾಯಿತು.ಈ ಸಂದರ್ಭದಲ್ಲಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. 

ಪ್ರತಿಭಟನೆಯಲ್ಲಿ, ದೇವಸ್ಥಾನದ ಆಡಳಿತ ಕಮಿಟಿಯ ಮಹದೇವಪ್ಪ ಬಳಿಗೇರ, ಮಹಾವೀರ ಪಾಟೀಲ, ಎಂ.ಐ. ಕಟ್ಟಿ, ಶಶಿಧರ ನಿಂಬಣ್ಣವರ, ಸದಾನಂದ ಚಿಂತಾಮಣಿ, ಹನುಮಂತ ಚವರಗುಡ್ಡ, ಸಂಜಯ ಗೌಳಿ, ಪಿ.ಜಿ. ಬಾಳಿಕಾಯಿ, ಸುಧೀರ ಬೋಳಾರ, ಶ್ರೀಕಾಂತ ಕಟಾವಕರ, ಪುಟ್ಟು ಉಪಾಧ್ಯಾಯ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.