ADVERTISEMENT

ಒಂಟೆತ್ತಿನಿಂದ ಹೊಲ ಬಿತ್ತಿದ ರೈತರು!

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 7:00 IST
Last Updated 19 ಜೂನ್ 2013, 7:00 IST

ಧಾರವಾಡ: ಜೋಡೆತ್ತಿನ ಸಹಾಯದಿಂದ ಚಕ್ಕಡಿ ಹೂಡುವುದು, ಬಿತ್ತನೆ ಮಾಡುವುದು ಹಾಗೂ ಉಳುಮೆ ಮಾಡುವುದನ್ನು ನಾವು ಕಂಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ, ಕೇವಲ ಒಂದೇ ಎತ್ತಿನ ಸಹಾಯದಿಂದ ಬಿತ್ತನೆ ಕಾರ್ಯ ಮಾಡಿದ ಸಾಹಸವನ್ನು ಎಲ್ಲಾದರೂ ಕೇಳಿದ್ದೀರಾ?

ಹೌದು. ಅಂಥದೊಂದು ಅಪರೂಪದ ಸಾಧನೆಯನ್ನು ಇಲ್ಲಿಯ ಹೆಬ್ಬಳ್ಳಿ ಅಗಸಿಯ ರೈತ ಸಿದ್ದಪ್ಪ ವಾಡಕರ ಎಂಬುವವರು ಸಾಧಿಸಿ ತೋರಿಸಿದ್ದಾರೆ. ನಗರದ ಹೊರವಲಯದಲ್ಲಿರುವ ಕಲ್ಲಪ್ಪ ಪಟ್ಟಣಶೆಟ್ಟರ ಎಂಬುವವರಿಗೆ ಸೇರಿದ ಸುಮಾರು ಮೂರು ಎಕರೆ ಇಪ್ಪತ್ತು ಗುಂಟೆ ಹೊಲದಲ್ಲಿ ಒಂದೇ ಎತ್ತಿನ ಸಹಾಯದಿಂದ ಎರಡು ಗಂಟೆ ಸಮಯ ತೆಗೆದುಕೊಂಡು ಸೋಯಾಬಿನ್ ಬಿತ್ತುವುದರ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.

ಒಂಟಿ ಎತ್ತಿಗೆ ಹಾಕಲಾಗಿದ್ದ ಒಂದು ನೊಗಕ್ಕೆ ಎರಡು ಕೂರಿಗೆಗಳನ್ನು ಜೋಡಿಸಿ ಬಿತ್ತನೆ ಕಾರ್ಯ ಮಾಡಲಾಯಿತು. ಇನ್ನೂ ವಿಶೇಷವೆಂದರೆ ಎತ್ತಿಗೆ ಹಗ್ಗದ ಸಹಾಯವಾಗಲಿ ಹಾಗೂ ಜತ್ತಿಗೆಯನ್ನು ಕಟ್ಟಲಾಗಿರಲಿಲ್ಲ. ಮಂಗಳವಾರ ಬೆಳಿಗ್ಗೆ ಸರಿಯಾಗಿ 8ಕ್ಕೆ ಬಿತ್ತನೆ ಕಾರ್ಯ ಪ್ರಾರಂಭಿಸಲಾಗಿತ್ತು. ಕೇವಲ ಎರಡು ತಾಸಿನಲ್ಲಿ ಅಂದರೆ, ಸರಿಯಾಗಿ 10ಕ್ಕೆ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಕೇವಲ ನೊಗವನ್ನು ಮಾತ್ರ ಎತ್ತಿನ ಮೇಲೆ ಇಡಲಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ಬಿತ್ತನೆ ಕಾರ್ಯ ಮಾಡಿದ ನಂತರವೇ ಎತ್ತಿನ ಮೇಲೆ ಇದ್ದ ನೊಗವನ್ನು ಕೆಳಗಿಳಿಸಲಾಯಿತು. ಎತ್ತಿಗೆ ಸಹಾಯಕರಾಗಿ ಎಡಗಡೆ ಮತ್ತು ಬಲಗಡೆ ಇಬ್ಬರು ನೊಗವನ್ನು ಹಿಡಿದುಕೊಂಡು ಸಾಗುತ್ತಿದ್ದುದನ್ನು ಬಿಟ್ಟರೆ ಬೇರೆ ಯಾವ ಸಹಾಯವೂ ಇರದೇ ಈ ಬಿತ್ತನೆ ಕಾರ್ಯ ಮಾಡಲಾಗಿದೆ. ಕೇವಲ ಎರಡು ಗಂಟೆಗಳ ಕಾಲ ಒಂದೇ ಎತ್ತಿನಿಂದ ಬಿತ್ತನೆ ಮಾಡಲಾಗುತ್ತಿದೆ ಎಂಬ ಸುದ್ದಿ ತಿಳಿದ ಸ್ಥಳೀಯರು ಕಲ್ಲಪ್ಪ ಅವರ ಹೊಲಕ್ಕೆ ತೆರಳಿ ಬಿತ್ತನೆ ಕಾರ್ಯವನ್ನು ಕುತೂಹಲದಿಂದ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.