ADVERTISEMENT

ಕನ್ನಡ ಹಬ್ಬದಲ್ಲಿ ಹುಬ್ಬಳ್ಳಿ ಮಕ್ಕಳಿಂದ ನಿತ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 10:10 IST
Last Updated 6 ಮಾರ್ಚ್ 2011, 10:10 IST
ಕನ್ನಡ ಹಬ್ಬದಲ್ಲಿ ಹುಬ್ಬಳ್ಳಿ ಮಕ್ಕಳಿಂದ ನಿತ್ಯೋತ್ಸವ
ಕನ್ನಡ ಹಬ್ಬದಲ್ಲಿ ಹುಬ್ಬಳ್ಳಿ ಮಕ್ಕಳಿಂದ ನಿತ್ಯೋತ್ಸವ   

ಹುಬ್ಬಳ್ಳಿ: ಆ ಬಾಲಕಿಯರ ಕಂಗಳಲ್ಲಿ ಹೊಚ್ಚಹೊಸ ಬೆಳಕು ಪ್ರಕಾಶಿಸುತ್ತಿತ್ತು. ಜೀವನದಲ್ಲಿ ಸಿಕ್ಕ ಒಂದು ಅಪರೂಪದ ಅವಕಾಶದಲ್ಲಿ ಇಡೀ ವಿಶ್ವಕ್ಕೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಛಲವಿತ್ತು!

ಮಾರ್ಚ್ 11ರಂದು ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ನೃತ್ಯ ಪ್ರದರ್ಶನ ನೀಡಲಿರುವ ಹುಬ್ಬಳ್ಳಿಯ ತಂಡದಲ್ಲಿ ಸ್ಥಾನ ಪಡೆದಿರುವ ಸರ್ಕಾರಿ ಬಾಲಕಿಯರ ಬಾಲಮಂದಿರದ ಮಕ್ಕಳಿಗೆ ಈಗ ‘ನಿತ್ಯೋತ್ಸವ’ ಸಂಭ್ರಮ.

ಮಕ್ಕಳು ವಿಶ್ವಕನ್ನಡ ಸಮ್ಮೇಳನದ ವೇದಿಕೆಯಲ್ಲಿ ಮಾರ್ಚ್ 12ರಂದು ‘ನಿತ್ಯೋತ್ಸವ’ ಹಾಡಿಗೆ ಹೆಜ್ಜೆ ಹಾಕಲು ಹುಬ್ಬಳ್ಳಿಯ 250 ಮಕ್ಕಳು ಪ್ರತಿನಿತ್ಯ ಅಭ್ಯಾಸ ಆರಂಭಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲಕಿಯರ ಬಾಲಮಂದಿರದ 42 ಬಾಲಕಿಯರೂ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳು ಈ ತಂಡದಲ್ಲಿದ್ದಾರೆ. ನೃತ್ಯಪಟುಗಳಾದ ಸಹನಾ ಭಟ್ ಮತ್ತು ಸೀಮಾ ಉಪಾಧ್ಯೆ ಕಳೆದ 15 ದಿವಸಗಳಿಂದ ಈ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.

ADVERTISEMENT

ಅಪ್ಪ-ಅಮ್ಮನಿಂದ ‘ಬಹುದೂರ’ ಇರುವ ಬಾಲಮಂದಿರದ ಬಾಲೆಯರಿಗೆ ಈಗ ಹಬ್ಬದ ಸಂಭ್ರಮ. ವಿವಿಧ ಶಾಲೆಗಳ ಮಕ್ಕಳೊಂದಿಗೆ ನಾಡಿನ ಸೊಬಗು ತೋರಿಸುವ ಗೀತೆಗಳಿಗೆ ಇವರು ಹೆಜ್ಜೆ ಹಾಕುತ್ತಿದ್ದಾರೆ.

ದೇಶಪಾಂಡೆನಗರದ ಗರ್ಲ್ಸ್ ಹೈಸ್ಕೂಲ್ ಆವರಣದಲ್ಲಿ ಕಳೆದ ಹದಿನೈದು ದಿನಗಳಿಂದ 70 ಬಾಲಕರು ಮತ್ತು 180 ಬಾಲಕಿಯರು ‘ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ಸಿರಿ ಮೊಳಕೆಯಲ್ಲಿ. ಸಹ್ಯಾದ್ರಿಯ ಸಿರಿ..’ ಮತ್ತು ‘ವಿಶ್ವ ವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ..’ ಹಾಡುಗಳಿಗೆ ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ.

ನಗರದ ಘಂಟಿಕೇರಿ ಸರ್ಕಾರಿ ಶಾಲೆ, ಬಿಡನಾಳ ಸರ್ಕಾರಿ ಶಾಲೆ, ಪರಿವರ್ತನ ಗುರುಕುಲ, ಸಂಸ್ಕಾರ ಶಾಲೆ, ಸೇಂಟ್ ಆ್ಯನ್ಸ್ ಶಾಲೆ, ಬಾಲಕಿಯರ ಬಾಲಮಂದಿರದ ಮಕ್ಕಳು ಇದರಲ್ಲಿ ಭಾಗವಹಿಸಿದ್ದಾರೆ. ಪ್ರತಿನಿತ್ಯ ಸಂಜೆ ಶಾಲೆ ಮುಗಿದ ಕೂಡಲೇ ಈ ಮಕ್ಕಳನ್ನು ವಿಶೇಷ ವಾಹನದಲ್ಲಿ ಗರ್ಲ್ಸ್ ಹೈಸ್ಕೂಲಿಗೆ ಕರೆತರುವ ವ್ಯವಸ್ಥೆ ಮಾಡಲಾಗಿದೆ. ಅವರಿಗೆ ಉಪಹಾರ ನೀಡಿ ನಂತರ ಸಂಜೆ 7ರವರೆಗೆ ತರಬೇತಿ ಕೊಡಲಾಗುತ್ತಿದೆ. ನಂತರ ಎಲ್ಲ ಮಕ್ಕಳನ್ನು ಅವರವರ ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರವೇ ವಹಿಸಿಕೊಂಡಿದೆ.

‘ಉತ್ತಮವಾಗಿ ನೃತ್ಯ ಸಂಯೋಜಿಸಿದ್ದೇವೆ. ಧಾರವಾಡದಲ್ಲಿ 250 ಮಕ್ಕಳು ಮತ್ತು ಬೆಳಗಾವಿಯಲ್ಲಿ 750 ಮಕ್ಕಳಿಗೆ ಬೇರೆ ಬೇರೆ ಹಾಡುಗಳಿಗೆ ತರಬೇತಿ ನೀಡಲಾಗುತ್ತಿದೆ. ನಾಡು ಬಿಂಬಿಸುವ ಐದು ಗೀತೆಗಳಿಗೆ ನೃತ್ಯಗಳನ್ನು ಸಂಯೋಜಿಸಲಾಗಿದೆ. ನಮ್ಮ (ಹುಬ್ಬಳ್ಳಿ) ತಂಡವು ಜೋಗದ ಸಿರಿಯನ್ನು ಪ್ರದರ್ಶಿಸಲಿದೆ. ವಿಶ್ವ ವಿನೂತನ ಹಾಡನ್ನು ಧಾರವಾಡದ ತಂಡದೊಂದಿಗೆ ಪ್ರದರ್ಶಿಸಲಿದೆ. ಧಾರವಾಡದಲ್ಲಿ ಕುಮುದಿನಿ ರಾವ್ ನೃತ್ಯ ಸಂಯೋಜಿಸುತ್ತಿದ್ದಾರೆ’ ಎಂದು ಸಹನಾ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು. ಬೆಳಗಾವಿಯ ವೇದಿಕೆಯಲ್ಲಿ ವಿವಿಧ ನೃತ್ಯಗಳ ಮೂಲಕ ನಾಡಿನ ಭವ್ಯ ಪರಂಪರೆಯನ್ನು ಅನಾವರಣಗೊಳಿಸಿರುವ ಒಟ್ಟು 1200 ಮಕ್ಕಳಲ್ಲಿ ಅವಳಿನಗರದ 500 ನೃತ್ಯಪಟುಗಳೂ ಗಮನ ಸೆಳೆಯಲಿದ್ದಾರೆ.

ಮಾರ್ಚ್ 12ರಂದು ಬೆಳಿಗ್ಗೆ ಇಲ್ಲಿಂದ ತಂಡವು ಹೊರಡಲು ಸಿದ್ಧವಾಗಿದೆ. ಇದಕ್ಕಾಗಿ ವಿಶೇಷ ವಾಹನಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಬೆಳಗಾವಿ ತಲುಪಿದ ನಂತರ ಅವರ ನೃತ್ಯಗಳಿಗೆ ತಕ್ಕಂತೆ ಸಮವಸ್ತ್ರಗಳು ಮತ್ತು ಭಿತ್ತಿಚಿತ್ರಗಳನ್ನು ನೀಡಲಾಗುವುದು.

ಸಂಜೆ ನಡೆಯಲಿರುವ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶ, ವಿದೇಶಗಳಿಂದ ಬಂದಿರುವ ಕನ್ನಡಿಗರು ಮತ್ತು ಗಣ್ಯರ ಮುಂದೆ ಈ ಮಕ್ಕಳು ತಮ್ಮ ಪ್ರತಿಭೆಯ ಮೂಲಕ ಕನ್ನಡನಾಡಿನ ಪರಂಪರೆಯನ್ನು ಅನಾವರಣಗೊಳಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.