ADVERTISEMENT

ಕರಿ ಹರಿದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 4:59 IST
Last Updated 25 ಜೂನ್ 2013, 4:59 IST

ಹುಬ್ಬಳ್ಳಿ: ಹೆದರಿಕೆ, ಆತಂಕ, ಸಿಟ್ಟು, ಛಲದಿಂದ ಎತ್ತುಗಳ ನಾಗಾಲೋಟ...ಎದೆಗುಂದದ ಯುವಕರೊಂದಿಗೆ ಮಕ್ಕಳ ಸಂಭ್ರಮ. ಎತ್ತುಗಳ ಕತ್ತು, ಕೋಡಿಗೆ ಕಟ್ಟಿದ ವಸ್ತುಗಳನ್ನು ಕಿತ್ತು ಸಾಹಸಿ ಎಂದೆನಿಸುವ ಉತ್ಸಾಹ. ಬದಿಯಲ್ಲಿ ನಿಂತ, ಕಟ್ಟಡಗಳ ಮೇಲಿನಿಂದ ನೋಡುತ್ತಿದ್ದ ಜನರ ಕೇಕೆ...

ನಗರದ ಜಂಗ್ಲಿಪೇಟೆಯ ಬಸವೇಶ್ವರ ವೃತ್ತದಲ್ಲಿ ಸೋಮವಾರ ಸಂಜೆ ಜಿಟಿಜಿಟಿ ಮಳೆಯ ನಡುವೆ ಕರಿ ಹರಿಯುವ ಸಂಭ್ರಮ ಮುಗಿಲು ಮುಟ್ಟಿತ್ತು.

ಕಾರ ಹುಣ್ಣಿಮೆ ಅಂಗವಾಗಿ ದಶಕಗಳಿಂದ ಜಂಗ್ಲಿಪೇಟೆ ಮತ್ತು ಸುತ್ತಮುತ್ತಲ ಜನರು ಕರಿ ಹರಿಯುವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಸೋಮವಾರ ಅಲ್ಲಿ ನಡೆದ ಕಾರ್ಯಕ್ರಮ ಮತ್ತು ಅದನ್ನು ನೋಡಲು ಸೇರಿದ ಜನರ ಸಂಖ್ಯೆ ಆಧುನಿಕತೆಯ ನಡುವೆಯೂ ರೈತಾಪಿ ಜನರ ಬದುಕನ್ನು ಬಿಂಬಿಸುವ ಸಂಪ್ರದಾಯ ಉಳಿದಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿತ್ತು.

ಸಂಜೆ ಸುಮಾರು 5.30 ವೇಳ ಆರಂಭವಾದ ಕರಿ ಹರಿಯುವ ಕಾರ್ಯಕ್ರಮ ಎರಡು ತಾಸಿಗಿಂತ ಹೆಚ್ಚು ಕಾಲ ನಡೆಯಿತು. ಬಣ್ಣಬಣ್ಣದಿಂದ ಸಿಂಗಾರಗೊಂಡ ಎತ್ತುಗಳ ಹಣೆಗೆ ಕೊಬ್ಬರು ಬಟ್ಲು, ಕೊಂಬಿಗೆ ಕೋಡುಬಳೆ, ಕೊರಳಿಗೆ ಬೇವಿನ ತಪ್ಪಲ ಕಟ್ಟಲಾಗಿತ್ತು.

ವಿವಿಧ ಓಣಿಗಳಿಂದ ತಮ್ಮ ಎತ್ತುಗಳನ್ನು ಹಿಡಿದುಕೊಂಡು ಬಂದ ಜನರು ಅವುಗಳನ್ನು ಬಿಟ್ಟು ಓಡಿಸುತ್ತಿದ್ದಂತೆ ಎದುರಿನಿಂದ ಬಂದ ಯುವಕರು ಮತ್ತು ಮಕ್ಕಳು ಅವುಗಳನ್ನು ಹಿಡಿದು ಕೋಡುಬಳೆ ಕಿತ್ತುಕೊಳ್ಳಲು ಪ್ರಯತ್ನಿಸಿದರು. ಕೆಲವು ಎತ್ತುಗಳು ಸುಲಭವಾಗಿ ಶರಣಾದರೆ ಇನ್ನು ಕೆಲವು ಜನರ ಗುಂಪನ್ನು ಸೀಳಿಕೊಂಡು ಮುಂದೆ ಸಾಗಿದವು.

ಎಲ್ಲ ಎತ್ತುಗಳ `ಓಟ' ಮುಗಿದ ನಂತರ ಶುಭ್ರವಾದ ಎತ್ತನ್ನು ಕರೆ ತಂದು ಎತ್ತರದಲ್ಲಿ ಕಟ್ಟಿದ್ದ ಕರಿಯನ್ನು ಹರಿಯಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.