ADVERTISEMENT

ಕರ್ನಾಟಕ ಸಂಘಗಳ ಒಕ್ಕೂಟ ರಚನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2011, 9:00 IST
Last Updated 18 ಏಪ್ರಿಲ್ 2011, 9:00 IST
ಕರ್ನಾಟಕ ಸಂಘಗಳ ಒಕ್ಕೂಟ ರಚನೆ
ಕರ್ನಾಟಕ ಸಂಘಗಳ ಒಕ್ಕೂಟ ರಚನೆ   

ಧಾರವಾಡ: ಕಳೆದ ವರ್ಷ ಇಲ್ಲಿ ನಡೆದ ಹೊರನಾಡು ಕನ್ನಡ ಸಂಘಟನೆಗಳ ಮಹಾಮೇಳದಲ್ಲಿ ತೆಗೆದುಕೊಂಡ ನಿರ್ಣಯದಂತೆ ಹೊರನಾಡು ಕನ್ನಡ ಸಂಘಗಳ ಒಕ್ಕೂಟವನ್ನು ಭಾನುವಾರ ರಚಿಸಲಾಯಿತು. ಮಹಾಮೇಳದ ನಿರ್ಣಯವನ್ನು ಜಾರಿಗೆ ತರುವ ಸಲುವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘಗಳ ಆಶ್ರಯದಲ್ಲಿ ಭಾನುವಾರ ನಡೆದ ಹೊರನಾಡು ಕನ್ನಡ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ಒಕ್ಕೂಟದ ಕಾರ್ಯಸೂಚಿಗಳ ಬಗ್ಗೆ ಚರ್ಚಿಸಲಾಯಿತು.

ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ವಿವಿಧ ಮೂಲೆಯಲ್ಲಿರುವ ಕನ್ನಡಿಗರನ್ನು ಒಂದು ವೇದಿಕೆಯಡಿಗೆ ತರುವುದಕ್ಕಾಗಿ ಈ ಒಕ್ಕೂಟವನ್ನು ರಚಿಸಲಾಗಿದೆ ಎಂದು ತಿಳಿಸಿದರು.ಕನ್ನಡಿಗರು ದೇಶದ ಎಲ್ಲೇ ಇರಲಿ, ಕಷ್ಟ-ಸುಖವನ್ನು ಹಂಚಿಕೊಂಡು ಮುನ್ನಡೆಯುವ ಗುಣ ಉಳಿಸಿಕೊಳ್ಳಬೇಕು, ಕೊಡು-ಕೊಳ್ಳುವ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು, ಆ ಮೂಲಕ ಹೊಸ ಚೈತನ್ಯ ಪಡೆದುಕೊಳ್ಳಬೇಕು, ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಮಾರ್ಗದರ್ಶನ ಮಾಡಬೇಕು. ಇದೇ ವೇಳೆ ಹೊರನಾಡು ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಲು ಇಲ್ಲಿನ ಕನ್ನಡಿಗರು ಮುಂದಾಗಬೇಕು ಎಂದು ಸಲಹೆ ನೀಡಿದರು.
 

ಅಖಿಲ ಭಾರತ ಕರ್ನಾಟಕ ಸಂಘಗಳ ಒಕ್ಕೂಟ ಎಂಬ ಹೆಸರಿನಲ್ಲಿ ಧಾರವಾಡದಲ್ಲಿ ಸಂಘವನ್ನು ನೋಂದಾಯಿಸಲು ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ನಿಯಂತ್ರಣದಲ್ಲಿ ಒಕ್ಕೂಟ ಕೆಲಸ ಮಾಡಲು ಕ್ರಮ ಕೈಗೊಳ್ಳಲಾಗುವುದು. ಒಕ್ಕೂಟದಲ್ಲಿ 15 ಮಂದಿ ಕಾರ್ಯಕಾರಿ ಸದಸ್ಯರಿರುತ್ತಾರೆ ಎಂದು ಅವರು ತಿಳಿಸಿದರು.
 

ಹೊರನಾಡ ಕನ್ನಡಿಗರ ಎರಡನೇ ಮಹಾಮೇಳವನ್ನು ವಾರಣಾಸಿ ಅಥವಾ ಮುಂಬೈಯಲ್ಲಿ ಅಕ್ಟೋಬರ್ 29            ಹಾಗೂ 30ರಂದು ನಡೆಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಹೊರನಾಡ ಕನ್ನಡಿಗರಾದ ಭರತ್ ಕುಮಾರ್, ರಾ.ಬಿ. ಹೆಬ್ಬಳ್ಳಿ, ನಂದಾ ಅನಂತ ಶೆಟ್ಟಿ, ಪಿ.ಎಸ್. ಕಾರಂತ, ಬಾಲಕೃಷ್ಣ ಶೆಟ್ಟಿ, ಎಸ್.ಕೆ. ಸುಬ್ರಹ್ಮಣ್ಯ, ಎಸ್.ಕೆ. ಪ್ರಕಾಶ, ಅನಿತಾ ಆಚಾರ್ಯ, ಪ್ರಮೋದ ತಮ್ಮಣ್ಣವರ, ಆರ್.ಕೆ. ಪಾಟೀಲ, ವೀರನಗೌಡ ಪಾಟೀಲ, ಡಾ. ಕೆ.ಕೆ. ಪತ್ತಾರ ಮುಂತಾದವರು ಭಾಗವಹಿಸಿದ್ದರು.
 

ADVERTISEMENT

ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಜಿ.ಜಿ. ದೊಡವಾಡ, ಬಸವಪ್ರಭು ಹೊಸಕೇರಿ, ಸಿದ್ದಲಿಂಗ ದೇಸಾಯಿ, ಗುರು ಹಿರೇಮಠ, ಮೋಹನ ನಾಗಮ್ಮನವರ, ವಿಶ್ವೇಶ್ವರ ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.