ಹುಬ್ಬಳ್ಳಿ: ದೇಶದಲ್ಲಿ ಸಮಗ್ರವಾದ `ಕ್ರೀಡಾ ನೀತಿ~ಯೊಂದನ್ನು ಇನ್ನೂ ಜಾರಿಗೆ ತರಲಾಗದೆ ಒಂದೆಡೆ ಕೇಂದ್ರ ಸರ್ಕಾರ ಒದ್ದಾಡುತ್ತಿದ್ದರೆ, ಇನ್ನೊಂದೆಡೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಆಟದ ಮಹತ್ವವನ್ನು ಮನಗಂಡು ಸದ್ದಿಲ್ಲದೆ `ಕ್ರೀಡಾ ಸಂಹಿತೆ~ಯನ್ನು ಅನುಷ್ಠಾನಕ್ಕೆ ತಂದಿದೆ.
ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಎಲ್ಲ ಕಾನೂನು ಕೋರ್ಸ್‌ಗಳಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳಿಗೆ ಶೇ 15ರಷ್ಟು ಕೃಪಾಂಕ ನೀಡಬೇಕು. ಜಗತ್ತಿನ ವಿವಿಧ ಕ್ರೀಡಾ ಸಂಘಟನೆಗಳ ಜೊತೆ ಸಂಬಂಧ ಬೆಳೆಸಲು ವಿವಿಯಲ್ಲಿ ಒಂದು ಅಂತರರಾಷ್ಟ್ರೀಯ ಕ್ರೀಡಾ ಘಟಕವನ್ನು ಸ್ಥಾಪಿಸಬೇಕು ಎಂಬ ಅಂಶಗಳು ಕಾನೂನು ವಿವಿ ಕ್ರೀಡಾ ನೀತಿಯಲ್ಲಿ ಅಡಕವಾಗಿದೆ.
ಕಾನೂನು ವಿವಿ ವ್ಯಾಪ್ತಿಯ ಪ್ರತಿಯೊಂದು ಕಾಲೇಜಿನಲ್ಲೂ ದೈಹಿಕ ಶಿಕ್ಷಣ ನಿರ್ದೇಶಕರು ಇರಬೇಕು. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಎಲ್ಲ ಆಟಗಾರರಿಗೆ ಟಿ-ಶರ್ಟ್, ಶಾರ್ಟ್ ಮತ್ತು ಕ್ಯಾಪ್ ಕೊಡಬೇಕು. ಅಂತರ ವಿವಿ ಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಬ್ಲೆಸರ್ ಮತ್ತು ಶೂಗಳನ್ನು ಒದಗಿಸಬೇಕು.
ಕ್ರೀಡಾಕೂಟ ನಡೆಯುವ ಸ್ಥಳಕ್ಕೆ ಹೋಗಿ ಬರುವ ಕ್ರೀಡಾಪಟುಗಳ ವೆಚ್ಚವನ್ನು ವಿವಿಯೇ ಭರಿಸಬೇಕು. ಸ್ಪರ್ಧಾ ದಿನಗಳಲ್ಲಿ ಪ್ರತಿ ಆಟಗಾರನಿಗೆ ರೂ 400 ದಿನಭತ್ಯೆ ಪಾವತಿಸಬೇಕು ಎಂಬುದಾಗಿಯೂ ಕ್ರೀಡಾ ನೀತಿಯಲ್ಲಿ ಸ್ಪಷ್ಟವಾದ ನಿರ್ದೇಶನ ನೀಡಲಾಗಿದೆ.
`ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಲ್ಲಿ ದೃಢವಾದ ಚಿತ್ತ ಸಿದ್ಧಿಸುತ್ತದೆ. ಅಂತಹ ಯುವಕರಿಗೆ ಯಾವ ಸಮಸ್ಯೆಯೂ ದೊಡ್ಡದಲ್ಲ. ಕಾನೂನಿನ ಎಂತಹ ಕ್ಲಿಷ್ಟ ಅಂಶಗಳನ್ನೂ ಅವರು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲರು. ಆದ್ದರಿಂದಲೇ ಕಾನೂನು ವಿವಿ ಕ್ರೀಡಾ ಸಂಸ್ಕೃತಿ ಬೆಳೆಸಲು ಸಾಕಷ್ಟು ಮುತುವರ್ಜಿ ವಹಿಸುತ್ತಿದೆ~ ಎನ್ನುತ್ತಾರೆ ಕುಲಪತಿ ಡಾ. ಜೆ.ಎಸ್. ಪಾಟೀಲ.
`ವಿದ್ಯಾರ್ಥಿ ವೃಂದದ ಶಕ್ತಿ ಕ್ರೀಡಾರಂಗದಲ್ಲಿ ವಿನಿಯೋಗವಾದರೆ ಅಂಥವರು ಹಾದಿತಪ್ಪುವ ಸಾಧ್ಯತೆ ಕಡಿಮೆ. ದೇಹ ಆರೋಗ್ಯದಿಂದ ನಳನಳಿಸುವುದರಿಂದ ಅಧ್ಯಯನದಲ್ಲೂ ಆಸಕ್ತಿ ತಾಳುತ್ತಾರೆ~ ಎನ್ನುವ ವಿಶ್ವಾಸ ಅವರದ್ದಾಗಿದೆ.
ವಿ.ವಿ ಪರ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳಿಗೆ ವಿಮಾ ಸೌಲಭ್ಯ ಕಲ್ಪಿಸಬೇಕು ಮತ್ತು ಅಖಿಲ ಭಾರತ ಇಲ್ಲವೆ ವಲಯಮಟ್ಟದ ಅಂತರ ವಿವಿ ಕೂಟಗಳಲ್ಲಿ ಪದಕ ಗೆಲ್ಲುವ ಆಟಗಾರರಿಗೆ ರೂ 10 ಸಾವಿರ ಬಹುಮಾನ ನೀಡಬೇಕು ಎನ್ನುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ.
`ವಿಶ್ವವಿದ್ಯಾಲಯದ ಯಾವುದೇ ಕ್ರೀಡಾಕೂಟಕ್ಕೆ ಪ್ರವೇಶ ಧನವನ್ನು ಪಡೆಯಬಾರದು ಮತ್ತು ಕೂಟ ಸಂಘಟಿಸಲು ಮುಂದಾಗುವ ಕಾಲೇಜುಗಳಿಗೆ ಸಹಾಯಧನ ನೀಡಬೇಕು ಎಂಬ ನಿಯಮವನ್ನೂ ಅಳವಡಿಸಲಾಗಿದ್ದು, ಕ್ರೀಡಾ ಸಮಿತಿ ಒಪ್ಪಿಗೆ ಸಿಕ್ಕಿದೆ~ ಎಂದು ವಿವರಿಸುತ್ತಾರೆ ಕಾನೂನು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಖಾಲೀದ್ ಖಾನ್.
ಕಾಲೇಜುಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ಪಾಯಿಂಟ್ ಪದ್ಧತಿಯನ್ನು ಅನುಷ್ಠಾನಕ್ಕೆ ತರಲಾಗಿದೆ. ಆಯಾ ಕಾಲೇಜಿನ ಕ್ರೀಡಾಪಟುಗಳು ತೋರುವ ಸಾಧನೆಗೆ ಅನುಗುಣವಾಗಿ ನಿಗದಿಪಡಿಸಿದ ಪಾಯಿಂಟ್‌ಗಳನ್ನು ಕೊಡುತ್ತಾ ಹೋಗಲಾಗುತ್ತದೆ.
ಆಯಾ ಶೈಕ್ಷಣಿಕ ವರ್ಷದಲ್ಲಿ ಅತಿಹೆಚ್ಚು ಪಾಯಿಂಟ್ ಪಡೆದ ಕಾಲೇಜು ಲಕ್ಷ ರೂಪಾಯಿ ಪ್ರೋತ್ಸಾಹ ಧನ ಪಡೆಯುತ್ತದೆ. 2ರಿಂದ 6ನೇ ಸ್ಥಾನ ಪಡೆಯುವ ಕಾಲೇಜುಗಳು ಕ್ರಮವಾಗಿ ರೂ 75,000, 50,000, 30,000, 20,000 ಮತ್ತು ರೂ 10,000 ಬಹುಮಾನ ಜೇಬಿಗಿಳಿಸುತ್ತವೆ ಎಂದು ಅವರು ಹೇಳುತ್ತಾರೆ.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜು ಲಕ್ಷ ರೂಪಾಯಿ ಬಹುಮಾನ ಪಡೆದ ಮೊದಲ ಕಾಲೇಜು ಎಂಬ ಹಿರಿಮೆಗೆ ಪಾತ್ರವಾಗಿದೆ. ಅಂದಹಾಗೆ, ತನ್ನ ಮೊದಲ ಅಂತರಕಾಲೇಜು ಅಥ್ಲೆಟಿಕ್ಸ್ ಸ್ಪರ್ಧೆಯನ್ನು ಹೊನಲು-ಬೆಳಕಿನಲ್ಲಿ ನಡೆಸುವ ಮೂಲಕ ಹೊಸ ದಾಖಲೆ ಬರೆದ ಹಿರಿಮೆ ಕೂಡ ಇದೇ ವಿಶ್ವವಿದ್ಯಾಲಯದ್ದಾಗಿದೆ. ಆಗ ಮಂಗಳೂರಿನ ಎಸ್‌ಡಿಎಂ ಕಾಲೇಜು ಆಗ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಕ್ರೀಡಾಪಟುವೊಬ್ಬ ಅಖಿಲ ಭಾರತ ಮಟ್ಟದಲ್ಲಿ ವಿ.ವಿಯನ್ನು ಎಷ್ಟು ಸಲ ಪ್ರತಿನಿಧಿಸುತ್ತಾನೋ ಅಷ್ಟು ಸಲ ಕ್ರೀಡಾ ಶಿಷ್ಯ ವೇತನವನ್ನೂ ಪಡೆಯಲಿದ್ದಾನೆ. ಮೊದಲ ಸಲ ಪ್ರತಿನಿಧಿಸಿದರೆ ರೂ 10,000 ಸಿಕ್ಕರೆ, ಐದನೇ ಸಲ ಪ್ರತಿನಿಧಿಸಿದರೆ ರೂ 50,000 ಶಿಷ್ಯವೇತನ ದೊರೆಯಲಿದೆ. ಕಾಲಕಾಲಕ್ಕೆ ಸಭೆ ಸೇರಿ, ಕ್ರೀಡಾ ನೀತಿಯಲ್ಲಿ ಅಗತ್ಯ ಮಾರ್ಪಾಡು ಮಾಡಲು ಸಮಿತಿ ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.