ADVERTISEMENT

ಕಿಮ್ಸ್ ನಲ್ಲಿ ಹೊಸ ಅತಿಥಿಗಳ ಸ್ವಾಗತ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:46 IST
Last Updated 2 ಜನವರಿ 2014, 6:46 IST

ಹುಬ್ಬಳ್ಳಿ: ಮಂಗಳವಾರ ಮಧ್ಯರಾತ್ರಿ ನಗರದ ಮಂದಿಯೆಲ್ಲ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮದಲ್ಲಿದ್ದರೆ, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಆಸ್ಪತ್ರೆಯಲ್ಲಿನ ಹೆರಿಗೆ ವಾರ್ಡಿನಲ್ಲಿ ಮಹಿಳೆಯೊಬ್ಬರು ಪ್ರಸವ ವೇದನೆಯಿಂದ ಬಳಲತೊಡಗಿದ್ದರು. ಸರಿಯಾಗಿ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಆಕೆ ಹೆಣ್ಣುಮಗುವಿಗೆ ಜನ್ಮ ನೀಡಿದರು. ಆ ಮಗುವಿನ ಅಳುವಿನೊಂದಿಗೆ ಕಿಮ್ಸ್‌ ಅಂಗಳವು ಹೊಸ ವರ್ಷವನ್ನು ಸ್ವಾಗತಿಸಿತು.

ಹೀಗೆ ಹೊಸ ವರ್ಷಕ್ಕೆ ಕೂಸು ಹೆತ್ತವರು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹಳ್ಳದಕೇರಿಯ ನಿವಾಸಿ ಮೀನಾಕ್ಷಿ. ಎರಡು ದಿನದ ಹಿಂದಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ಅವರು ಶಸ್ತ್ರಚಿಕಿತ್ಸೆಯ ಮೂಲಕ ಮಗುವಿಗೆ ಜನ್ಮ ನೀಡಿದರು. ಮೀನಾಕ್ಷಿ ಅವರ ಪತಿ ರಾಚಪ್ಪ ಕೊಂಡಿಕೊಪ್ಪ ಕೃಷಿ ಕಾರ್ಮಿಕರಾಗಿದ್ದು ಇದು ಈ ದಂಪತಿಯ ಮೊದಲ ಮಗು. ‘ಹೊಸ ವರ್ಷಕ್ಕೆ ಸರಿಯಾಗಿ ಮಗು ಜನಿಸುತ್ತದೆ ಎಂದುಕೊಂಡಿರಲಿಲ್ಲ. ವೈದ್ಯರು ಹೇಳಿದ ಮೇಲಷ್ಟೇ ವಿಷಯ ತಿಳಿದು ಖುಷಿಯಾಯಿತು’ ಎಂದು ಮೀನಾಕ್ಷಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

12.15ಕ್ಕೆ ಮತ್ತೊಂದು: ಆ ಮಗುವಿನ ಅಳು ಸಣ್ಣಗಾಗುವ ಹೊತ್ತಿಗೆ, ಆಸ್ಪತ್ರೆಯಲ್ಲಿ ಮತ್ತೊಂದು ಅತಿಥಿ ಬಂದಾಯಿತು. ಹುಬ್ಬಳ್ಳಿಯ ಗಣೇಶಪೇಟೆಯ ಮಧು ಪಟಗೇರಿ ರಾತ್ರಿ 12.15ರ ಸುಮಾರಿಗೆ ಗಂಡುಮಗುವಿಗೆ ಜನ್ಮ ನೀಡಿದರು. ‘ಹೆರಿಗೆ ದಿನಾಂಕ ಇನ್ನೂ ಮುಂದಿತ್ತು. ಆದರೂ ಈ ಹೊತ್ತಿನಲ್ಲೇ ಹೆರಿಗೆ ಆಗುತ್ತದೆ ಎಂದುಕೊಂಡಿರಲಿಲ್ಲ’ ಎಂದು ವಿನೋದ ಪಟಗೇರಿ ಅವರ ಪತ್ನಿ ಮಧು ಹೇಳಿದರು.

ಒಂಬತ್ತು ಸಾವಿರ ಹೆರಿಗೆ: ಉತ್ತರ ಕರ್ನಾಟಕ ಭಾಗದ ‘ಬಡವರ ಆಸ್ಪತ್ರೆ’ ಎಂದೇ ಹೆಸರಾಗಿರುವ ಕಿಮ್ಸ್‌ನಲ್ಲಿ ಕಳೆದ ಡಿಸೆಂಬರ್‌ನಲ್ಲಿ 776 ಮಕ್ಕಳ ಜನನವಾಗಿದೆ. ಸಾಮಾನ್ಯ ಹೆರಿಗೆ ಹಾಗೂ ಸಿಜೇರಿಯನ್ ಮೂಲಕವೂ ಮಕ್ಕಳ ಜನನವಾಗು­ತ್ತದೆ. ಸಾಮಾನ್ಯ ಹೆರಿಗೆಯ ಪ್ರಮಾಣವೇ ಹೆಚ್ಚು.

‘ದಿನಕ್ಕೆ ಸರಾಸರಿ ಇಪ್ಪತ್ತು ಹೆರಿಗೆಗಳಾಗುತ್ತವೆ. ಹತ್ತರಲ್ಲಿ ಆರು ಹೆರಿಗೆಗಳು ಸಾಮಾನ್ಯವಾಗಿ ಆಗುತ್ತವೆ. ಗರ್ಭಿಣಿಯ ಪರಿಸ್ಥಿತಿ ಅರಿತು ಶಸ್ತ್ರಚಿಕಿತ್ಸೆ ಮಾಡಬೇಕೋ ಬೇಡವೋ ಎಂದು ವೈದ್ಯರು ನಿರ್ಧರಿಸುತ್ತಾರೆ’ ಎನ್ನುತ್ತಾರೆ ಪ್ರಸೂತಿ ವೈದ್ಯೆ ಪಿ.ಜಿ. ಸುನೀತಾ. ‘ಹುಬ್ಬಳ್ಳಿ–ಧಾರವಾಡ ಮಾತ್ರವಲ್ಲ ನೆರೆಯ ಜಿಲ್ಲೆಗಳಿಂದಲೂ ಜನ ಹೆರಿಗೆಗಾಗಿ ಮಹಿಳೆಯರನ್ನು ಕರೆತರುತ್ತಾರೆ. ತಿಂಗಳಿಗೆ ಸರಾಸರಿ 800 ಹೆರಿಗೆಗಳು ಕಿಮ್ಸ್‌ನಲ್ಲಿ ಆಗುತ್ತಿವೆ.

ವರ್ಷಕ್ಕೆ ಎಂಟರಿಂದ ಒಂಬತ್ತು ಸಾವಿರ ಹೆರಿಗೆಗಳನ್ನು ಮಾಡಿಸಲಾಗುತ್ತಿದೆ. ಒಟ್ಟು 250 ಹಾಸಿಗೆಯುಳ್ಳ ವಾರ್ಡುಗಳನ್ನು ಗರ್ಭಿಣಿಯರು ಹಾಗೂ ಬಾಣಂತಿಯರಿಗಾಗಿ ಮೀಸಲಿಡಲಾಗಿದೆ. ಹೊಸ ಕಟ್ಟಡದ ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದ್ದು, ಅದು ಪೂರ್ಣಗೊಂಡ ಬಳಿಕ ಜನರಿಗೆ ಇನ್ನಷ್ಟು ಅನುಕೂಲವಾಗಲಿದೆ’ ಎಂದು ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ.ಎಂ.ಜಿ. ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ತಿಂಗಳಿಗೆ ನೂರು ಟ್ಯುಬೆಕ್ಟಮಿ ಚಿಕಿತ್ಸೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಯ ಅಡಿ ಆಸಕ್ತರಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನೀಡಲಾಗುತ್ತಿದೆ. ಈ ಚಿಕಿತ್ಸೆಗೆ ಒಳಗಾಗುವವರಿಗೆ ₨ 600 ಸಹಾಯ­ಧನ­ವನ್ನೂ ಸರ್ಕಾರದ ವತಿಯಿಂದ ನೀಡಲಾ­ಗುತ್ತಿದೆ.

ADVERTISEMENT

‘ಮಹಿಳೆಯರಿಗಾಗಿ ಟ್ಯುಬೆಕ್ಟಮಿ ಹಾಗೂ ಪುರುಷರಿಗಾಗಿ ವ್ಯಾಸೆಕ್ಟಮಿ ಚಿಕಿತ್ಸೆ ನೀಡಲಾಗುತ್ತದೆ. ತಿಂಗಳಿಗೆ ಸುಮಾರು 100 ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಇದರಲ್ಲಿ ಶೇ 99ರಷ್ಟು ಟ್ಯುಬೆಕ್ಟಮಿ ಚಿಕಿತ್ಸೆಯೇ ಆಗಿರುತ್ತದೆ. ವ್ಯಾಸೆಕ್ಟಮಿ ಚಿಕಿತ್ಸೆ ಪಡೆಯುವವರು ಅಪರೂಪ’ ಎನ್ನುತ್ತಾರೆ ಡಾ.ಎಂ.ಜಿ. ಹಿರೇಮಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.