ADVERTISEMENT

ಕೃಷಿ ಆಧಾರಿತ ಉದ್ದಿಮೆಗೆ ರೈತರ ಒಲವು: ಶೆಟ್ಟರ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 5:55 IST
Last Updated 11 ಸೆಪ್ಟೆಂಬರ್ 2011, 5:55 IST

ಧಾರವಾಡ:  ಆಹಾರ ಉತ್ಪಾದನಾ ಉದ್ದಿಮೆಗಳು ಸೇರಿದಂತೆ ಕೃಷಿಗೆ ಸಂಬಂಧಪಟ್ಟ ಉದ್ದಿಮೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ವಿಶ್ವ ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು ಎಂದು ಪಂಚಾಯತ್‌ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ ಹೇಳಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳ ಹಾಗೂ ದಕ್ಷಿಣ ಪ್ರಾಂತೀಯ ಕೃಷಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಸಂಬಂಧಿತ ಉದ್ದಿಮೆಗಳು ಸ್ಥಾಪನೆಯಾಗುವುದರಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಈ ಹಿನ್ನೆಲೆಯಲ್ಲಿ ಸಮಾವೇಶ ನಡೆಸಲಾಗುತ್ತಿದ್ದು, ದೇಶದಲ್ಲಿ ಕೃಷಿ ಉದ್ಯಮಕ್ಕೆ ಸಂಬಂಧಿಸಿದ ಪ್ರಥಮ ಸಮಾವೇಶ ಇದಾಗಲಿದೆ ಎಂದರು.

ಕೃಷಿಗೆ ಸಂಬಂಧಿಸಿದ ಉದ್ದಿಮೆ ಸ್ಥಾಪನೆಗೆ ಭೂಮಿ ಒದಗಿಸಲು ರೈತರು ಸಹ ಒಲವು ತೋರಿಸುತ್ತಿದ್ದಾರೆ. ಗದಗದಲ್ಲಿ ಪೋಸ್ಕೋ ಕಂಪೆನಿಗೆ ಭೂಮಿ ನೀಡಲು ನಿರಾಕರಿಸಿದ ರೈತರು ಹಾಗೂ ಡಾ, ತೋಂಟದ ಸಿದ್ಧಲಿಂಗ ಸ್ವಾಮೀಜಿ, ಕೃಷಿ ಸಂಬಂಧಿತ ಉದ್ದಿಮೆ ಬಂದರೆ ಸ್ವಾಗತಿಸುವುದಾಗಿ ಹೇಳಿದ್ದಾರೆ ಎಂದ ಅವರು, ಆಹಾರ ಉತ್ಪನ್ನಗಳ ಶೇಖರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶೀತಲಗೃಹ ನಿರ್ಮಿಸುವ ಅಗತ್ಯವಿದೆ ಎಂದು ಹೇಳಿದರು.
 
ಗೊಬ್ಬರದ ಕೊರತೆ ಇಲ್ಲ: ಕೃಷಿ ಇಲಾಖೆ ಸಚಿವ ಉಮೇಶ ಕತ್ತಿ ಅಧ್ಯಕ್ಷತೆ ವಹಿಸಿ, ರಾಜ್ಯದಲ್ಲಿ ಯೂರಿಯಾ ಹೊರತುಪಡಿಸಿ ಯಾವುದೇ ಗೊಬ್ಬರದ ಕೊರತೆ ಇಲ್ಲ. 2-3 ದಿನಗಳೊಳಗೆ ಗೊಬ್ಬರದ ವಿತರಣೆ ಆರಂಭಿಸಲಾಗುವುದು. ಕೇಂದ್ರದಿಂದ 1.94 ಲಕ್ಷ ಟನ್ ಯೂರಿಯಾ ಗೊಬ್ಬರ ಬರಲಿದ್ದು, ಈ ತಿಂಗಳಿನ ಅಂತ್ಯದೊಳಗೆ ಪೂರೈಕೆ ಮುಗಿಯಲಿದೆ. ಸೆ. 15 ರೊಳಗೆ ಹಿಂಗಾರು ಹಂಗಾಮಿಗೆ ಬಿತ್ತನೆ ಬೀಜ ವಿತರಣೆ ನಡೆಯಲಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳು ದೊರೆಯಲಿವೆ ಎಂದರು.

ಕೃಷಿ, ನೀರಾವರಿ ಹಾಗೂ ವಿದ್ಯುತ್ ಇಲಾಖೆಗಳ ಅಧಿಕಾರಿಗಳು ಹಾಗೂ ಸಚಿವರು ಸೇರಿಕೊಂಡು ಇತ್ತೀಚೆಗೆ ಸಭೆ ನಡೆಸಲಾಗಿದೆ. ರಾಜ್ಯದಲ್ಲಿ 1.23 ಲಕ್ಷ ಹೆಕ್ಟೇರ್ ಕೃಷಿ ಜಮೀನಿನ ಪೈಕಿ ಕೇವಲ ಶೇ. 28 ರಷ್ಟು ಮಾತ್ರ ನೀರಾವರಿ ಇದೆ. ಶೇ. 60 ರಷ್ಟು ನೀರಾವರಿ ಪ್ರದೇಶ ಮಾಡುವ ಬಗ್ಗೆ ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿದ್ದು, ಎರಡು ವರ್ಷಗಳಲ್ಲಿ ತುಂತುರು ನೀರಾವರಿಯನ್ನು ಜಾರಿಗೆ ಉದ್ದೇಶಿಸಲಾಗಿದೆ ಎಂದು ಹೇಳಿದರು.

ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಚಂದ್ರಕಾಂತ ಬೆಲ್ಲದ, ವೀರಣ್ಣ ಮತ್ತಿಕಟ್ಟಿ, ಶಂಕರ ಪಾಟೀಲ ಮುನೇನಕೊಪ್ಪ, ಸೀಮಾ ಮಸೂತಿ, ಶ್ರೀನಿವಾಸ ಮಾನೆ, ಸುನೀಲ ಹೆಗಡೆ, ಮೇಯರ್ ಪೂರ್ಣಾ ಪಾಟೀಲ, ಹುಡಾ ಅಧ್ಯಕ್ಷ ದತ್ತಾ ಡೋರ್ಲೆ, ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಸಾವುಕಾರ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ರಾಜ್ಯ ಅಗ್ರೋ ಕಾರ್ನ್ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ, ಡಾ, ಬಾಬುರಾವ್ ಮುಡಬಿ ಮತ್ತಿತರರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.