ADVERTISEMENT

ಕೃಷಿ ಮಾರುಕಟ್ಟೆ: ಪ್ರಸ್ತಾವಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 8:05 IST
Last Updated 3 ಮಾರ್ಚ್ 2011, 8:05 IST

ಧಾರವಾಡ: “ಹುಬ್ಬಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗಾಗಿ ವಿಸ್ತೃತ ಯೋಜನೆಯೊಂದನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾ ಆಡಳಿತಕ್ಕೆ ಈಗಾಗಲೇ ಸೂಚಿಸಲಾಗಿದೆ” ಎಂದು ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು. ಸಂಪೂರ್ಣವಾಗಿ ಸ್ಥಳಾಂತರಗೊಂಡಿರುವ ಇಲ್ಲಿನ ಮಹಾಂತಸ್ವಾಮಿ ಮಾರುಕಟ್ಟೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಹುಬ್ಬಳ್ಳಿ ಮಾರುಕಟ್ಟೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಆ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.

ಹುಬ್ಬಳ್ಳಿ ಹಾಗೂ ಧಾರವಾಡದ ಕೃಷಿ ಉತ್ಪನ್ನ ಮಾರುಕಟ್ಟೆಗಳ ಸುಧಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಎರಡೂ ಮಾರುಕಟ್ಟೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲು ಎಪಿಎಂಸಿ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಕೃಷಿ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಯೂ ಮಹತ್ವದ್ದಾಗಿದೆ. ಎಪಿಎಂಸಿ ನಿರ್ದೇಶಕರು, ಹಿರಿಯ ವರ್ತಕರನ್ನೊಳಗೊಂಡ ನಿಯೋಗವೊಂದು ಬೆಂಗಳೂರಿಗೆ ಆಗಮಿಸಿದರೆ, ಎಪಿಎಂಸಿ ಸಚಿವ ಲಕ್ಷ್ಮಣ ಸವದಿ ಅವರ ಜೊತೆಗೆ ಮಾತುಕತೆಗೆ ಏರ್ಪಾಡು ಮಾಡಲಾಗುವುದು. ಮಾರುಕಟ್ಟೆ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ದಲಾಲ ಮತ್ತು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ದೀಪಕ ಚಿಂಚೋರೆ ಅಧ್ಯಕ್ಷತೆ ವಹಿಸಿ, ಹಲವು ಸಮಸ್ಯೆಗಳ ನಡುವೆ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿದೆ. ಮಾರುಕಟ್ಟೆ ಅಭಿವೃದ್ಧಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗ ಯಾವುದೇ ಸೌಕರ್ಯವಿಲ್ಲದೇ ಹಸ್ತಾಂತರ ಮಾಡಿದ್ದು, ಈ ಮಾರುಕಟ್ಟೆ ಅಭಿವೃದ್ಧಿಗೆ ಸಚಿವರು ಹಾಗೂ ಶಾಸಕರು ಮುತವರ್ಜಿ ವಹಿಸಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಶತಾಯುಷಿ ಜಿ.ಜಿ.ದೊಡವಾಡ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಮಾರುಕಟ್ಟೆಯ ಹಿರಿಯ ವರ್ತಕರಾದ ಶಿವಪುತ್ರಯ್ಯ ಗುಡ್ಡದಮಠ. ಅಣ್ಣಪ್ಪ ಕುಂದಗೋಳ, ಸಿ.ಜಿ.ಹಿರೇಮಠ ಸೇರಿ24 ಜನರನ್ನು ಸನ್ಮಾನಿಸಲಾಯಿತು. ನಿಜಗುಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಚಂದ್ರಕಾಂತ ಬೆಲ್ಲದ, ತವನಪ್ಪ ಅಷ್ಟಗಿ, ಯಾಸೀನ ಹಾವೇರಿಪೇಟ, ಮಲ್ಲಿಕಾರ್ಜುನ ಬೆಂಡಿಗೇರಿ, ಮುತ್ತಣ್ಣ ಬಳ್ಳಾರಿ, ರಾಜು ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. ವಸಂತ ಅರ್ಕಾಚಾರ್ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.