ADVERTISEMENT

ಕೇಂದ್ರ ಸರ್ಕಾರದ ಕುತಂತ್ರ: ಎಸ್.ಆರ್.ಹಿರೇಮಠ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 7:18 IST
Last Updated 2 ಅಕ್ಟೋಬರ್ 2017, 7:18 IST

ಹುಬ್ಬಳ್ಳಿ: ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ (ನಂ.2) ಜಯಂತ ಪಟೇಲ್ ಅವರನ್ನು ಅಲಹಾಬಾದ್ ಹೈಕೋರ್ಟ್ ನ ಮೂರನೇ ನ್ಯಾಯಮೂರ್ತಿಯನ್ನಾಗಿ ವರ್ಗಾಯಿಸಿರುವುದನ್ನು ಧಾರವಾಡದ ಸಮಾಜ ಪರಿವರ್ತನ ಸಮಾಜದ ಮುಖ್ಯಸ್ಥ ಎಸ್.ಆರ್.ಹಿರೇಮಠ ತೀವ್ರವಾಗಿ ಖಂಡಿಸಿದರು.

ಸುಪ್ರಿಂಕೋರ್ಟ್ ನ ಕೊಲಿಜಿಯಂನ ಈ ನಿರ್ಣಯದ ಹಿಂದೆ ಕೇಂದ್ರ ಸರ್ಕಾರದ ಕುತಂತ್ರ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

2004ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಅವಧಿಯಲ್ಲಿ ನಡೆದಿದ್ದ ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣವನ್ನು ನ್ಯಾಯಮೂರ್ತಿ ಜಯಂತ್ ಪಟೇಲ್ ಸಿಬಿಐಗೆ ವಹಿಸಿದ್ದ ಕಾರಣಕ್ಕೆ ಪ್ರತೀಕಾರವಾಗಿ ಇದೀಗ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಅವರು ದೂರಿದರು.

ADVERTISEMENT

ನ್ಯಾಯಾಂಗದ ಸ್ವತಂತ್ರಕ್ಕೆ ಈ ನಿರ್ಣಯ ಕೊಡಲಿ ಪೆಟ್ಟು ನೀಡಿದಂತಾಗಿದೆ. ದೇಶಕ್ಕೆ ತುರ್ತು ಪರಿಸ್ಥಿತಿಯ ಕಾರ್ಮೋಡ ಆವರಿಸುವ ಲಕ್ಷಣ ಗೋಚರಿಸುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕ್ರಮಕ್ಕೆ ಆಗ್ರಹ: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜನೀರು ಬ್ಲಾಕ್ ಅರಣ್ಯ ಪ್ರದೇಶವನ್ನು 2015ರಲ್ಲಿ ಕಾನೂನುಬಾಹಿರವಾಗಿ ಕಂದಾಯ ಭೂಮಿಯನ್ನಾಗಿ ಪರಿವರ್ತಿಸಿರುವ ರಾಜ್ಯ ಸರ್ಕಾರದ ಅಂದಿನ ಹೆಚ್ಚುವರಿ ಕಾರ್ಯದರ್ಶಿ ಎಂ.ಮದನಗೋಪಾಲ್ ಅವರ ಆದೇಶ ಪ್ರಶ್ನಾರ್ಹವಾಗಿದೆ ಎಂದು ಎಸ್.ಆರ್.ಹಿರೇಮಠ ಹೇಳಿದರು.

ಜನೀರು ಗ್ರಾಮದ ಸರ್ವೆ ನಂ. 41, 42 ಮತ್ತು 43ರಲ್ಲಿ ಒಟ್ಟು 321.81 ಹೆಕ್ಟೇರ್ ಭೂಮಿಯನ್ನು ಸುಪ್ರಿಂಕೋರ್ಟ್ ನ ಆದೇಶವನ್ನು ದಿಕ್ಕರಿಸಿ ತಮ್ಮ ನಿವೃತ್ತಿ ಅವಧಿ(31.12.2015) ಎರಡು ವಾರ ಬಾಕಿ ಇರುವಾಗ ಪ್ರಭಾವಿ ವ್ಯಕ್ತಿಗಳಿಗೆ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲು ಕಂದಾಯ ಭೂಮಿಯನ್ನಾಗಿ ಪರಿವರ್ತಿಸಿ (21.12.2015) ಆದೇಶಿಸಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ತಕ್ಷಣ ಈ ಅರಣ್ಯ ಭೂಮಿಯನ್ನು ಸಂರಕ್ಷಿಸಬೇಕು ಹಾಗೂ ಮದನಗೋಪಾಲ್ ಕಾನೂನುಬಾಹಿರವಾಗಿ ಮಾಡಿರುವ ಆದೇಶ ರದ್ದುಗೊಳಿಸಿ ಅವರು ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.

ಈ ಪ್ರಕರಣದ ಹಿಂದೆ ಕಾನೂನು ಸಚಿವ ಡಿ.ಬಿ.ಜಯಚಂದ್ರ ಅವರ ಕೈವಾಡ ಇರುವ ಬಲವಾದ ಶಂಕೆ ಇದೆ. ಅಲ್ಲದೇ, ಈ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿರುವ ರಾಜ್ಯ ಸರ್ಕಾರದ ನಡೆ ಸರಿ ಇಲ್ಲ ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.