ADVERTISEMENT

ಕೋಮುವಾದದ ವಿರುದ್ಧ ಹೋರಾಟ ಅಗತ್ಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 6:10 IST
Last Updated 21 ಫೆಬ್ರುವರಿ 2012, 6:10 IST

ಹುಬ್ಬಳ್ಳಿ: `ಇರಾನ್-ಅಮೆರಿಕದ ನಡುವೆ ಅಣು ಸಂಘರ್ಷ ಮೂರನೇ ಮಹಾಯುದ್ಧದ ಭೀತಿ ಎಬ್ಬಿಸಿದ್ದು, ಪ್ರಪಂಚ ಇಂದು ಸಂದಿಗ್ಧ ಕಾಲ ಘಟ್ಟದಲ್ಲಿದೆ. ಕೋಮುವಾದದ ವಿರುದ್ಧ ಹೋರಾಟ ಹಾಗೂ ಮಾನವೀಯತೆಯ ಜಾಗೃತಿ ಇದಕ್ಕೆ ಉತ್ತರ~ ಎಂದು ಗದಗ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗಸ್ವಾಮೀಜಿ ಅಭಿಪ್ರಾಯಪಟ್ಟರು.

ಸಿದ್ಧಾರೂಢಮಠದಲ್ಲಿ ನಡೆಯುತ್ತಿರುವ ವಿಶ್ವ ವೇದಾಂತ ಪರಿಷತ್‌ನಲ್ಲಿ ಅವರು ಮಾತನಾಡಿದರು.
`ರಾಜಕಾರಣಿಗಳ ಹಾವಳಿ ಅತಿಯಾಗಿದ್ದು, ನ್ಯಾಯಾಂಗ ವ್ಯವಸ್ಥೆ ಮಾತ್ರ ಜನಸಾಮಾನ್ಯರಿಗೆ ಆಶಾಕಿರಣವಾಗಿ ಕಾಣುತ್ತಿದೆ. ಇಂದು ಕೆಟ್ಟ ಮೌಲ್ಯಗಳು ವಿಜೃಂಭಿಸುತ್ತಿವೆ ಇದಕ್ಕೆ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ನೋಡಿ ಮೂವರು ಮಂತ್ರಿಗಳು ಮನೆಗೆ ಹೋಗಿರುವುದೇ ನಿದರ್ಶನ~ ಎಂದರು.

`ನ್ಯಾಯಾಂಗ ಚಾಟಿ ಬೀಸದಿದ್ದಲ್ಲಿ ದೇಶದಲ್ಲಿ ರಾಜಕಾರಣಿಗಳ ಹಾವಳಿ ಇನ್ನಷ್ಟು ಹೆಚ್ಚಾಗುತ್ತಿತ್ತು. ನ್ಯಾಯ ಮಾರ್ಗದಲ್ಲಿ ನಡೆದರೆ ಮಾತ್ರ ನ್ಯಾಯ ರಕ್ಷಿಸುತ್ತದೆ ಎಂಬುದನ್ನು ಎಲ್ಲರೂ ಅರಿಯಬೇಕಿದೆ. `ನಾನೇ~ ಎಂದವರನ್ನು ಜೈಲಿಗೆ ಕಳುಹಿಸಿ ನ್ಯಾಯ ಇನ್ನೂ ಜೀವಂತವಾಗಿದೆ ಎಂಬ ಸಂದೇಶ ನೀಡಿದೆ~ ಎಂದು ಹೇಳಿದರು.

`ಆಕಾಶದಲ್ಲಿ ನಕ್ಷತ್ರಗಳು ಒಂದೇ ಕಾಲಕ್ಕೆ ಕಾಣಿಸಿಕೊಳ್ಳುವ ರೀತಿ ಹುಬ್ಬಳ್ಳಿಯಲ್ಲಿ ಸಿದ್ಧಾರೂಢ ಸ್ವಾಮಿಗಳು, ಶಿಶುನಾಳದಲ್ಲಿ ಶರೀಫರು, ನವಲಗುಂದದಲ್ಲಿ ನಾಗಲಿಂಗಜ್ಜ, ಗರಗದ ಮಡಿವಾಳಪ್ಪ, ಮುಳಗುಂದದಲ್ಲಿ ಬಾಲಲೀಲಾ ಮಹಾಂತ ಶಿವಯೋಗಿಗಳು, ಶಿರಡಿ ಸಾಯಿಬಾಬಾ ಎಲ್ಲರೂ ಒಂದೇ ಅವಧಿಯಲ್ಲಿ ಬದುಕಿ ಬಾಳಿದರು~ ಎಂದರು.

`ಮನುಷ್ಯ ನೋಡಲು ಮನ್ಮಥನಂತಿದ್ದು, ಮುತ್ತು ಸುರಿದಂತೆ ಮಾತನಾಡಿದರೂ ತಾನು ಏನು ಎಂದು ತಿಳಿಯದಿದ್ದರೆ ಅವನ ಬದುಕಿನ ರೀತಿ ನಾಯಿ ಮೊಲೆಯೊಳಗಿನ ಹಾಲಿನಂತೆ~ ಎಂದು ಹೇಳಿದ ಸ್ವಾಮೀಜಿ, `ಬಸವಣ್ಣನ ಕಾಲದಲ್ಲಿ ಕ್ರಾಂತಿ ವಿಫಲವಾದ ನಂತರ ಸಿದ್ಧಾರೂಢರು ಅದನ್ನು ಮುಂದುವರಿಸಿದರು~ ಎಂದರು.
`ಹುಬ್ಬಳ್ಳಿ ನಗರದ ರೈಲು ನಿಲ್ದಾಣ, ಮಾರುಕಟ್ಟೆಗಳು, ವಾಣಿಜ್ಯ ಉದ್ದೇಶದ ಕಾರಣಕ್ಕೆ ಹೆಸರಾಗಿರಲಿಲ್ಲ. ಸಿದ್ಧಾರೂಢರ ಕಾರಣಕ್ಕೆ ಶತಮಾನಗಳಿಂದ ಪ್ರಸಿದ್ಧಿ ಪಡೆದಿದೆ~ ಎಂದರು.

ಇಂಚಲ ಸಾಧುಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ, ಮನುಷ್ಯ ಲೌಕಿಕ, ಭೋಗಕ್ಕೆ ಬದುಕದೆ ಶಾಶ್ವತ ಮೋಕ್ಷಕ್ಕೆ ಬದುಕಬೇಕಿದೆ. ನಿಜವಾದ ಸುಖ ನಮ್ಮಳಗೇ ಇದೆ ಎಂದರು.

ಹೈಕೋರ್ಟ್ ನ್ಯಾಯಮೂರ್ತಿ ಕೆ. ಶ್ರೀಧರ ರಾವ್, ಸಮಾಜದಲ್ಲಿ ಸ್ವಾರ್ಥ ಹೆಚ್ಚಿದೆ. ಮನುಷ್ಯ ಸಜ್ಜನಿಕೆಯಿಂದ ಬದುಕುವುದು ಕಲಿಯಬೇಕು. ಪರೋಪಕಾರ ಬುದ್ಧಿ ಕಲಿಯಬೇಕಿದೆ ಎಂದರು. `ವೈರಾಗ್ಯ ಎಂದರೆ ಎಲ್ಲವನ್ನೂ ತ್ಯಾಗ ಮಾಡುವುದು ಎಂದಲ್ಲ. ಸಿದ್ಧಾರೂಢರಿಗೆ ಶರಣು ಹೋದರೆ ಸಾಮಾನ್ಯರೂ ಪಂಡಿತರಾಗಲು ಸಾಧ್ಯ~ ಎಂದು ಹೇಳಿದರು.

ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಕೆ. ನಟರಾಜನ್, ಜಮಖಂಡಿ ಸಹಜಾನಂದ ಸ್ವಾಮೀಜಿ, ಬಾಗಲಕೋಟೆ ಪರಮರಾಮಾರೂಢ ಸ್ವಾಮೀಜಿ, ಮುಚಳಾಂಬ ಪ್ರಣವಾನಂದ ಸ್ವಾಮೀಜಿ, ಚಿಕ್ಕಮುನವಳ್ಳಿ ಶಂಕರಾನಂದ ಸ್ವಾಮೀಜಿ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.