ADVERTISEMENT

ಗಟಾರ ಸ್ವಚ್ಛತೆಗೆ ವಾರದ ಗಡುವು

ಪಾಲಿಕೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮೇಯರ್ ಅಶ್ವಿನಿ ಮಜ್ಜಗಿ ಕಟ್ಟುನಿಟ್ಟಿನ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಮೇ 2015, 7:10 IST
Last Updated 27 ಮೇ 2015, 7:10 IST

ಹುಬ್ಬಳ್ಳಿ: ‘ಮಳೆಗಾಲ ಸಮೀಪಿಸುತ್ತಿದೆ. ಈ ಬಾರಿ ಗಟಾರಗಳು ತುಂಬಿ ಹರಿ ಯುವುದು, ಚರಂಡಿಗೆ ಬಿದ್ದು ಅನಾಹುತ ಸಂಭವಿಸುವುದು ಇತ್ಯಾದಿ ದೂರುಗಳು ಕೇಳುವಂತಾಗಬಾರದು. ಹೀಗಾಗಿ ಒಂದು ವಾರದೊಳಗೆ ಗಟಾರಗಳನ್ನು ಸ್ವಚ್ಛಗೊಳಿಸಬೇಕು...’

ಪಾಲಿಕೆಯ ಹಿರಿಯ ಅಧಿಕಾರಿಗಳಿಗೆ ಮೇಯರ್‌ ಅಶ್ವಿನಿ ಮಜ್ಜಗಿ ಅವರು ನೀಡಿದ ಆದೇಶ ಇದು. ಮಂಗಳವಾರ ಸಂಜೆ ಪಾಲಿಕೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ನಗರದ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದರು. ಕೆಲವು ಸಂದರ್ಭದಲ್ಲಿ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಲು ತಡಕಾಡಿದಾಗ ಗುಡುಗಿದರು.

ಸಭೆಯ ಆರಂಭದಲ್ಲಿ ಗಟಾರದ ವಿಷಯ ಪ್ರಸ್ತಾಪಿಸಿದ ಮೇಯರ್‌ ‘ಗಟಾ ರದ ಸ್ವಚ್ಛತೆಯ ಕುರಿತು ನಗರದಲ್ಲಿ ನಡೆದಿರುವ ಕೆಲಸ ತೃಪ್ತಿ ತಂದಿಲ್ಲ. ಇಂದು ಕೂಡ ಪರಿಶೀಲನೆ ನಡೆಸಲಾಗಿದ್ದು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ’ ಎಂದು ಹೇಳಿದರು. ನಂತರ ವಲಯವಾರು ಆಗಿರುವ ಕೆಲಸದ ಕುರಿತು ಮಾಹಿತಿ ಕೇಳಿದರು. ಕೆಲವರು ಶೇ 50 ಕೆಲಸ ಆಗಿದೆ ಎಂದು ಹೇಳಿದರೆ ಇನ್ನು ಕೆಲವರು ಶೇ 70, ಶೇ 100ರಷ್ಟು ಕೆಲಸ ಆಗಿದೆ ಎಂದು ತಿಳಿಸಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮೇಯರ್‌ ‘ನಾಳೆಯಿಂದ ಮತ್ತೆ ಪರಿ ಶೀಲನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ‘ಕೆಲವು ಕಡೆಗಳಲ್ಲಿ ಕಳೆದ ಬಾರಿ ನಾಲಾಗಳಿಂದ ತೆಗೆದು ಹಾಕಿದ ಹೂಳು ಇನ್ನೂ ಬದಿಯಲ್ಲೇ ಇದೆ. ಮಳೆ ಬಂದರೆ ಅದು ಮತ್ತು ನಾಲಾಗೆ ಸೇರಿ ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಅದನ್ನು ಆದಷ್ಟು ಬೇಗ ತೆಗೆಯಬೇಕು.

ಬುಧವಾರದಿಂದ (ಮೇ 27) ಗಟಾರ ಸ್ವಚ್ಛತೆಗೆ ಸಂಬಂಧಪಟ್ಟು ಬರುವ ದೂರುಗಳನ್ನು ಕಿರಿಯ ಅಧಿಕಾರಿಗಳಿಂದ ಅಧಿಕಾರಿಗಳು ಪ್ರತಿದಿನ ಬೆಳಿಗ್ಗೆ ಪಡೆದುಕೊಳ್ಳಬೇಕು. ಅವುಗಳಲ್ಲಿ ಎಷ್ಟು ದೂರುಗಳಿಗೆ ಸ್ಪಂದಿಸಲಾಗಿದೆ ಎಂಬ ಮಾಹಿತಿಯನ್ನು ಸಂಜೆಯ ವೇಳೆ ಕಲೆ ಹಾಕಬೇಕು. ನನಗೆ ಮಾಹಿತಿ ನೀಡಬೇಕು’ ಎಂದು ಅವರು ಸೂಚನೆ ನೀಡಿದರು.

ಮ್ಯಾನ್‌ಹೋಲ್‌ ಮುಚ್ಚಿ: ನಗರದಲ್ಲಿ ಬಾಯ್ತೆರೆದು ನಿಂತಿರುವ ಮ್ಯಾನ್‌ ಹೋಲ್‌ಗಳನ್ನು ಕೂಡಲೇ ಮುಚ್ಚಬೇಕು. ಈ ಕಾರ್ಯವನ್ನು ಮರೆತು ಅಪಾಯಕ್ಕೆ ಎಡೆ ಮಾಡಿಕೊಟ್ಟರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಹಂದಿ ಹಿಡಿಯುವ ಕಾರ್ಯಾ ಚರಣೆಯನ್ನು ಪ್ರತಿ ಬುಧವಾರ ಮತ್ತು ಗುರುವಾರ ನಡೆಸಲಾಗುವುದು ಎಂದು ತಿಳಿಸಿದರು. ಸಭೆಗೆ ತಡವಾಗಿ ಬಂದ ಅಧಿ ಕಾರಿಗಳ ವಿರುದ್ಧ ಹರಿಹಾಯ್ದ ಮೇಯರ್ ಸಭೆಗೆ ತಡವಾಗಿ ಬರುವುದನ್ನು ಇನ್ನು ಮುಂದೆ ಸಹಿಸುವುದಿಲ್ಲ. ಮುಂದಿನ ಸಭೆಗೆ ಸಮಯಕ್ಕೆ ಸರಿಯಾಗಿ ಹಾಜರಿರಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.