ADVERTISEMENT

ಗುಣಧರ ನಂದಿ ಗುಣಗಾನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 9:38 IST
Last Updated 23 ಸೆಪ್ಟೆಂಬರ್ 2013, 9:38 IST

ಹುಬ್ಬಳ್ಳಿ: ಕಿವಿಗೆ ಇಂಪು ನೀಡಿದ ಸಂಗೀತದ ಹಿನ್ನೆಲೆಯಲ್ಲಿ ಗಾಯನದ ಮೋಡಿ, ಮಕ್ಕಳಿಂದ ಶಾಸ್ತ್ರೀಯ ನೃತ್ಯದ ಮೆರುಗು; ಹಿರಿಯರಲ್ಲಿ ಸಂಭ್ರಮ, ಭಕ್ತರಲ್ಲಿ ತುಂಬಿಬಂದ ಅಭಿಮಾನ...

ಇಂಥ ಸನ್ನಿವೇಶದಲ್ಲಿ ವರೂರು ನವಗ್ರಹ ತೀರ್ಥ ಕ್ಷೇತ್ರದ ಗುಣಧರ ನಂದಿ ಮಹಾರಾಜರ ಜನ್ಮದಿನವನ್ನು ಭಾನುವಾರ ಆಚರಿಸಲಾಯಿತು.

ನಗರದ ದಿಗಂಬರ ಜೈನ ಸಮಾಜದ ಆಶ್ರಯ­ದಲ್ಲಿ ಶಾಂತಿನಾಥ ಜೈನ ಮಂದಿರದಲ್ಲಿ ಮೂರು ದಿನಗಳಿಂದ ನಡೆದ ‘ಜೈನ ಸಮಾಜ ಸಾಮಾಜಿಕ ಜಾಗೃತಿ’ ಕಾರ್ಯಕ್ರಮದ ಜೊತೆಯಲ್ಲೇ ನಡೆದ ಮಹಾರಾಜರ 41ನೇ ಜನ್ಮ ದಿನಾಚರಣೆಗೆ ಸಾಕ್ಷಿಯಾಗಲು ನೂರಾರು ಮಂದಿ ಸೇರಿದ್ದರು.

ಮಧ್ಯಾಹ್ನ ಆರಂಭಗೊಂಡ ಕಾರ್ಯಕ್ರಮದಲ್ಲಿ ವಿನಯಾಂಜಲಿ, ಪಾದಪೂಜೆ, ಮಹಾ ಆರತಿ, ಗುರುಭಕ್ತಿ ಮುಂತಾದ ಧಾರ್ಮಿಕ ಕಾರ್ಯಗಳು ನಡೆದವು. ನಂತರ ಸಭಾ ಕಾರ್ಯಕ್ರಮದಲ್ಲಿ ಮಹಾರಾಜರ ಬಗ್ಗೆ ಮಾತನಾಡಿದ ಪ್ರತಿ­ಯೊಬ್ಬರೂ ಅವರ ಗುಣಗಾನ ಮಾಡಿದರು. ಶಾಲಾ–ಕಾಲೇಜು ವಿದ್ಯಾರ್ಥಿಗಳು ಕೂಡ ಸ್ವಾಮೀಜಿ ಬಗ್ಗೆ ಅಭಿಮಾನದ ನುಡಿಗಳನ್ನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ವರೂರಿನಂಥ ಸ್ಥಳವನ್ನು ಯಾತ್ರಾ ಸ್ಥಳವನ್ನಾಗಿ ಮಾಡಿದ ಕೀರ್ತಿ ಗುಣಧರ ನಂದಿ ಅವರದ್ದು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪಿಸಿದ್ದು ಅಭಿನಂದನೀಯ ಎಂದು ಅವರು ಹೇಳಿದರು. ‘ಜೈನ ಸಮಾಜದವರು ಬಿಜೆಪಿಗೆ ಸದಾ ಬೆಂಬಲವಾಗಿ ನಿಂತಿದ್ದಾರೆ. ಪಕ್ಷವೂ ಅವರಿಗೆ ಬೇಕಾದ ಸಹಾಯ–ಸಹಕಾರ ನೀಡಿದೆ. ಈಗ ಅಧಿಕಾರ ಇಲ್ಲದಿದ್ದರೂ ಸಮಾಜಕ್ಕೆ ಬೇಕಾದ ಕೆಲಸಗಳನ್ನು ಮಾಡಲು ಸಿದ್ಧ’ ಎಂದು ಶೆಟ್ಟರ್‌ ಭರವಸೆ ನೀಡಿದರು.

ಗುಣಧರ ನಂದಿ ಮಹಾರಾಜರು ಮಾತನಾಡಿ, ಜೈನ ಸಮಾಜಕ್ಕೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಚಾತುರ್ಮಾಸ್ಯ ಆಚರಿ­ಸುತ್ತಿರುವ ನಿಜಾನಂದ ಸಾಗರ ಮಹಾರಾಜ್‌, ಪ್ರಸನ್ನಮತಿ ಮಾತಾಜಿ, ನವಗ್ರಹ ತೀರ್ಥ ಕ್ಷೇತ್ರದ ಧರ್ಮಸೇನ ಭಟ್ಟಾರಕ ಸ್ವಾಮೀಜಿ, ದಿಗಂಬರ ಜೈನ ಸಮಾಜದ ಅಧ್ಯಕ್ಷ ಮಹಾವೀರ ಎನ್‌.ಸೂಜಿ, ಎಸ್‌ಡಿಎಂ ಶಿಕ್ಷಣ ಸೊಸೈಟಿಯ ಗೌರವ ಕಾರ್ಯ­ದರ್ಶಿ ಜಿನೇಂದ್ರ ಪ್ರಸಾದ, ಪಿ.ಎಸ್‌.ಧರಣೆಪ್ಪ, ಬಿ.ಜಿ.ಲೋಬೊಗೋಳ, ವಿಮಲ ತಾಳಿಕೋಟಿ, ಶಾಂತಿನಾಥ ಕೆ.ಹೋತಪೇಟಿ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.