ADVERTISEMENT

ಗುರುನಾಥಗೌಡ ಭೇಟಿ ಮಾಡಿದ್ದು ನಿಜ, ಆದರೆ ಸಂಧಾನಕ್ಕಲ್ಲ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 8:39 IST
Last Updated 26 ನವೆಂಬರ್ 2017, 8:39 IST

ಧಾರವಾಡ: ‘ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಂಧಾನವನ್ನು ತಾನು ನಡೆಸಿಲ್ಲ ಎಂದು ಈ ಮೊದಲು ಹೇಳಿದ್ದ ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ, ಗುರುನಾಥಗೌಡ ಗೌಡರ ಅವರನ್ನು ಭೇಟಿ ಮಾಡಿರುವುದು ನಿಜ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಹೋಟೆಲ್ ಉದ್ಯಮಿಯೊಬ್ಬರ ಮನೆಯಲ್ಲಿ ಜೆಡಿಎಸ್‌ ಪಕ್ಷದ ಗುರುರಾಜ ಹುಣಸೀಮರದ ಅವರೊಂದಿಗೆ ಗುರುನಾಥಗೌಡ ಅವರನ್ನು ಭೇಟಿ ಮಾಡಿದ್ದೆ. ಆದರೆ ಅಲ್ಲಿ ಕೊಲೆ ಆರೋಪಿ ಬಸವರಾಜ ಮುತ್ತಗಿ ಪರವಾಗಿ ಯಾವುದೇ ಸಂಧಾನ ಕುರಿತು ಒಂದು ಶಬ್ದವನ್ನೂ ನಾನು ಆಡಿಲ್ಲ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಆದರೆ ಸಂಧಾನಕ್ಕೆ ಹೋಗಿದ್ದ ಡಿವೈಎಸ್‌ಪಿ ತುಳಜಪ್ಪ ಸುಲ್ಫಿ ಸಚಿವರ ಹೆಸರು ಪ್ರಸ್ತಾಪಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಸಿದ ಅವರು, ‘ಸುಲ್ಫಿ ಜಿಲ್ಲೆ ಬಿಟ್ಟು ಐದು ವರ್ಷಗಳಾಗಿವೆ. ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ. ಈ ಕುರಿತಂತೆ ಅವರು ನನ್ನ ಹೆಸರು ಏಕೆ ಪ್ರಸ್ತಾಪಿಸಿದ್ದಾರೋ ಗೊತ್ತಿಲ್ಲ. ಇವೆಲ್ಲವೂ ವಿರೋಧಪಕ್ಷದ ಷಡ್ಯಂತ್ರ’ ಎಂದರು.

ADVERTISEMENT

ಪೊಲೀಸ್‌ ಅಧಿಕಾರಿಯೊಬ್ಬರು ಸಚಿವರ ಹೆಸರು ದುರುಪಯೋಗ ಮಾಡಿಕೊಂಡ ಕುರಿತು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಅಥವಾ ಈ ಕುರಿತು ತನಿಖೆ ಕೈಗೊಳ್ಳಲು ಮುಖ್ಯಮಂತ್ರಿ ಅವರನ್ನು ಕೇಳಿಕೊಳ್ಳುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಕ್ಷಣಕಾಲ ಮೌನರಾದ ವಿನಯ ಕುಲಕರ್ಣಿ, ಮಾಧ್ಯಮದವರೇ ಈ ಕೆಲಸ ಮಾಡಲಿ ಎಂದರು.

ಬೆದರಿಕೆ ಹಾಕಿಲ್ಲ, ಸ್ಪಷ್ಟನೆ ಕೇಳಿದ್ದೇನೆ
‘ವಕೀಲ ಆನಂದ ಬಾಡಿ ಅವರಿಗೆ ನಾನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾತುಗಳನ್ನಾಡಿಲ್ಲ. ಬದಲಿಗೆ ಈ ಹಿಂದೆ ನನ್ನ ಕುಟುಂಬ ಕುರಿತು ಅಶ್ಲೀಲ ಪತ್ರಗಳು ಬಂದಿದ್ದವು. ಇದಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದ್ದು ಸತ್ಯ’ ಎಂದು ವಿನಯ ಕುಲಕರ್ಣಿ ಸ್ಪಷ್ಟಪಡಿಸಿದರು.

’ಕಳೆದ ಕೆಲವು ವರ್ಷಗಳಿಂದ ಪ್ರಮುಖ ನಾಯಕರ ವಿರುದ್ಧ ಅಶ್ಲೀಲ ಭಾಷೆ ಬಳಸಿ ಪತ್ರ ಬರೆಯುವುದನ್ನು ಕೆಲವರು ರೂಢಿಸಿಕೊಂಡಿದ್ದಾರೆ. ಇದರ ಹಿಂದೆ ಬಿಜೆಪಿಯ ಅಮೃತ ದೇಸಾಯಿ ಅವರ ಕೈವಾಡಿವಿದೆ. ಅವರೇ ಸೀಮಾ ಮಸೂತಿ ಹೆಸರಿನಲ್ಲಿ ಈ ಪತ್ರಗಳನ್ನು ಬರೆಸಿದ್ದಾರೆ’ ಎಂದು ನೇರ ಆರೋಪ ಮಾಡಿದರು.

‘ಈ ಪತ್ರಗಳಿಂದ ನನ್ನ ಕುಟುಂಬ ಹಾಗೂ ನನ್ನ ತಾಯಿ ತೀವ್ರ ನೋವನ್ನು ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಕೀಲ ಆನಂದ ಜತೆ ಮಾತನಾಡಿದ್ದೇನೆ. ಇದರ ಹಿಂದೆ ಅಮೃತ ದೇಸಾಯಿ, ಬಸವರಾಜ ಕೊರವರ, ಆನಂದ ಸೇರಿದಂತೆ ದೊಡ್ಡ ತಂಡವೇ ಇದೆ. ಈ ವಿಷಯ ಕುರಿತ ಆಡಿದ ಮಾತನ್ನು ಬೇರೊಂದು ವಿಷಯಕ್ಕೆ ಹೋಲಿಕೆ ಮಾಡಿರುವುದು ಸರಿಯಲ್ಲ’ ಎಂದರು.

‘ಕಳಸಾ ಬಂಡೂರಿ ಹೋರಾಟದಲ್ಲಿ ಎಳ್ಳಷ್ಟೂ ಕೆಲಸ ಮಾಡದ ಪ್ರಹ್ಲಾದ ಜೋಶಿ ಒಣ ರಾಜಕೀಯ ಮಾಡುತ್ತಿದ್ದಾರೆ. ಸುಸಂಸ್ಕೃತ ಕುಟುಂಬದಿಂದ ಬಂದಿರುವ ಅಮೃತ ದೇಸಾಯಿ ಉತ್ತಮ ಕೆಲಸ ಮಾಡಬೇಕೇ ವಿನಃ ಇಂಥ ಕೆಲಸಗಳಿಗೆ ಕೈಹಾಕಬಾರದು’ ಎಂದರು.

ಸಂಭಾಷಣೆಯಲ್ಲಿ ತಮ್ಮ ಅಶ್ಲೀಲ ಹಾಗೂ ಅಸಂವಿಧಾನಿಕ ಭಾಷೆ ಬಳಕೆ ಕುರಿತು ಕೇಳಿದ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸದ ವಿನಯ ಕುಲಕರ್ಣಿ, ‘ನನ್ನ 18ನೇ ವಯಸ್ಸಿನಿಂದಲೇ ನಾನು ರಾಜಕಾರಣ ಹಾಗೂ ಸಮಾಜ ಸೇವೆಯಲ್ಲಿ ತೊಡಗಿದ್ದೇನೆ. ಅಲ್ಲಿಂದ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡೇ ಬಂದಿದ್ದೇನೆ. ಮನೆಯಲ್ಲಿ ಸಾಕಷ್ಟು ಆಸ್ತಿ ಇದ್ದು, ಬೇರೊಬ್ಬರ ಆಸ್ತಿಯನ್ನು ಕಬಳಿಸುವುದಾಗಲೀ ಅಥವಾ ಕೊಲೆ ಮಾಡಿಸುವ ಮಟ್ಟಕ್ಕೆ ಇಳಿಯುವವನಲ್ಲ’ ಎಂದರು.

ನಿಮ್ಮ ಮೇಲೆ 1996ರಲ್ಲಿ ಗೂಂಡಾ ಕಾಯ್ದೆ ಜಾರಿಗೆ ಪೊಲೀಸ್ ಆಯುಕ್ತರು ಶಿಫಾರಸು ಮಾಡಿದ್ದರೂ ನೀವು ಬೇರೊಬ್ಬರನ್ನು ರೌಡಿ ಶೀಟರ್ ಎಂದು ಕರೆಯುತ್ತಿರುವುದು ಎಷ್ಟು ಸಮಂಜಸ ಎಂದು ಕೇಳಿದ್ದಕ್ಕೆ ಸಿಡಿಮಿಡಿಗೊಂಡ ವಿನಯ ಕುಲಕರ್ಣಿ, ಅಂಥ ಯಾವುದೇ ಪ್ರಕರಣ ನನ್ನ ಮೇಲಿಲ್ಲ. ದಾಖಲೆ ಇದ್ದರೆ ನೀಡಿ ಎಂದು ಸವಾಲು ಹಾಕಿದರು. ಆಯುಕ್ತರ ಆದೇಶದ ಪ್ರತಿಯನ್ನು ನೀಡಿದಾಗ ಈ ಕುರಿತು ಪರಿಶೀಲಿಸಿ ಪ್ರತಿಕ್ರಿಯಿಸಲಾಗುವುದು ಎಂದು ಸುದ್ದಿಗೋಷ್ಠಿ ಮೊಟಕುಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.