ADVERTISEMENT

`ಗೆಲ್ಲುವ ಸಾಮರ್ಥ್ಯದ ಅಲ್ಪಸಂಖ್ಯಾತರಿಗೆ ಟಿಕೆಟ್'

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 6:44 IST
Last Updated 3 ಡಿಸೆಂಬರ್ 2012, 6:44 IST

ಹುಬ್ಬಳ್ಳಿ: “ಅಲ್ಪಸಂಖ್ಯಾತರು ಗೆಲ್ಲುವ ಅವಕಾಶ ಇರುವ ಕಡೆ ಕೆಜೆಪಿ ವತಿಯಿಂದ ಟಿಕೆಟ್ ನೀಡಲಾಗುವುದು. ಪ್ರಭಾವಿ ಅಭ್ಯರ್ಥಿಗಳ ಪಟ್ಟಿ ನೀಡುವಂತೆ ಪಕ್ಷದ ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಹಳೇಹುಬ್ಬಳ್ಳಿ ಅಂಬೇಡ್ಕರ್ ಮೈದಾನದಲ್ಲಿ ಭಾನುವಾರ ಅಲ್ಪಸಂಖ್ಯಾತರ `ಜನಸ್ಪಂದನ' ಸಮಾವೇಶದಲ್ಲಿ ಮಾತನಾಡಿದ ಅವರು, ಗೆಲ್ಲುವ ಅವಕಾಶ ಇಲ್ಲದ ಕಡೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಅವರನ್ನು ಬಲಿ ಹಾಕುವುದಿಲ್ಲ. ಬದಲಿಗೆ ಚುನಾವಣೆಯಲ್ಲಿ ಪೈಪೋಟಿ ನೀಡುವ ಸಾಮರ್ಥ್ಯ ಇರುವವರನ್ನು ಗುರ್ತಿಸಿ ಗೆಲ್ಲಿಸಲಾಗುವುದು ಎಂದು ಹೇಳಿದರು.

ಕೆಜೆಪಿ ಅಧಿಕಾರಕ್ಕೆ ಬಂದಲ್ಲಿ ರಾಜ್ಯವನ್ನು ಗುಡಿಸಲು ರಹಿತ ಮಾಡಲಾಗುವುದು. ಅಲ್ಪಸಂಖ್ಯಾತ ಧರ್ಮಗುರುಗಳಿಗೆ ಸರ್ಕಾರದಿಂದ ಮಾಸಿಕ ಗೌರವಧನ ನೀಡಲಾಗುವುದು. ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುವುದು. ಪ್ರತಿ ಕುಟುಂಬಕ್ಕೆ ಮನೆ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿದರು.

`ಭಾಗ್ಯಲಕ್ಷ್ಮಿ ಯೋಜನೆ ಆರಂಭಿಸುವ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳಿಗೆ ನೆರವು ನೀಡಿದ್ದೇನೆ. ತಮ್ಮ ಅವಧಿಯಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿರುವ ಒಂದು ನಿದರ್ಶನ ತೋರಿಸಿದರೂ ರಾಜಕೀಯ ನಿವೃತ್ತಿ ಪಡೆಯುವೆ' ಎಂದರು.

ಮಾಜಿ ಸಚಿವ ಜಬ್ಬಾರ್‌ಖಾನ್ ಹೊನ್ನಳ್ಳಿ ಮಾತನಾಡಿ, ದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ರಾಜ್ಯಕ್ಕೆ ಪ್ರಬಲ ಪ್ರಾದೇಶಿಕ ಪಕ್ಷವೊಂದರ ಅಗತ್ಯವಿದೆ ಅದನ್ನು ಯಡಿಯೂರಪ್ಪ ಪೂರೈಸಲಿದ್ದಾರೆ ಎಂದರು.

`ಮುಸ್ಲಿಂ ಸಮುದಾಯಕ್ಕೆ ಭವಿಷ್ಯದ ನಾಯಕನಾಗಿ ಯಡಿಯೂರಪ್ಪ ಆಶಾಕಿರಣವಾಗಿ ಗೋಚರಿಸಿದ್ದಾರೆ. ಹಿಡಿದ ಕೆಲಸ ಬಿಡದೆ ಮಾಡುವ ಅವರ ಛಲ ಹಾಗೂ ಹಟಮಾರಿ ಧೋರಣೆಯೇ ಮುಸ್ಲಿಮರಿಗೆ ಶ್ರೀರಕ್ಷೆಯಾಗಲಿದೆ. ರಾಜ್ಯದ ನೆಲ-ಜಲ ಹಾಗೂ ಸಂಸ್ಕೃತಿಯನ್ನು ಕಾಯುವ ಜೊತೆಗೆ ಹಿಂದಿನ ಕೋಮುವಾದಿ ಧೋರಣೆ ಕೈಬಿಟ್ಟು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ದುಡಿಯುವ ಷರತ್ತು ಹಾಕಿ ಕೆಜೆಪಿ ಸೇರ್ಪಡೆಯಾಗುತ್ತಿರುವುದಾಗಿ ಹೊನ್ನಳ್ಳಿ ಹೇಳಿದರು.

ಕಾಂಗ್ರೆಸ್ ಮತಬ್ಯಾಂಕ್ ಆದ ಕಾರಣಕ್ಕೆ ದೇಶದಲ್ಲಿ ಇಂದು ಶೇ 94ರಷ್ಟು ಮುಸ್ಲಿಮರು ಬಡತನ ರೇಖೆಗಿಂತ ಕೆಳಗಿದ್ದಾರೆ. ಸಾಚಾರ್ ಸಮಿತಿಯ ವರದಿಯಂತೆ ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಶೇ 10ರಷ್ಟು ಮೀಸಲಾತಿ ಸೇರಿದಂತೆ ಸ್ವ-ಉದ್ಯೋಗ ಕೈಗೊಳ್ಳಲು ಬ್ಯಾಂಕ್ ಸಾಲ ಮತ್ತು ಶಿಕ್ಷಣಕ್ಕೆ ಸಹಾಯ ಕಲ್ಪಿಸುವಂತೆ ಮನವಿ ಮಾಡಿದರು.

ಕ್ರೆಡಲ್ ಅಧ್ಯಕ್ಷ ಸಿ.ಎಂ.ನಿಂಬಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾವೇಶಕ್ಕೆ ಮುನ್ನ ಸಿದ್ಧಾರೂಢ ಮಠ ಹಾಗೂ ಹಳೇಹುಬ್ಬಳ್ಳಿಯ ಫತೇಶಾ ವಲಿ ದರ್ಗಾಗೆ ಯಡಿಯೂರಪ್ಪ ಭೇಟಿ ನೀಡಿದರು.

ಮಹಾನಗರ ಪಾಲಿಕೆ ಸದಸ್ಯರಾದ ವೆಂಕಟೇಶ ಮೇಸ್ತ್ರಿ, ಲಕ್ಷ್ಮಣ ಬೀಳಗಿ, ಯಮನೂರ ಜಾಧವ ನೇತೃತ್ವದಲ್ಲಿ ಕೆಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ  ನಡೆಸಿದರು. ಎಪಿಎಂಸಿ ಸದಸ್ಯ ಶಂಕರಣ್ಣ ಬಿಜವಾಡ ಸಾವಿರಾರು ಬೆಂಬಲಿಗರ ನೇತೃತ್ವದಲ್ಲಿ ಸಮಾವೇಶಕ್ಕೆ ಮೆರವಣಿಗೆಯ ಮೂಲಕ ಆಗಮಿಸಿ ಗಮನ ಸೆಳೆದರು.

ಬಿಎಸ್‌ವೈಗೆ ಹುಲಿ-ಸಿಂಹ ಹೋಲಿಕೆ...
`ಯಡಿಯೂರಪ್ಪ ಅವರಿಗೆ ಒಬ್ಬ ಜನಾನುರಾಗಿ ನಾಯಕನಿಗೆ ಇರಬೇಕಾದ ಎಲ್ಲಾ ಗುಣಗಳು ಇದೆ' ಎಂದು ಹೊಗಳಿದ ಜಬ್ಬಾರ್‌ಖಾನ್ ಹೊನ್ನಳ್ಳಿ, ಮಾಜಿ ಮುಖ್ಯಮಂತ್ರಿಯನ್ನು ಹುಲಿಗೆ ಹೋಲಿಸಿದರು. ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಖುಸ್ರೋ ಖುರೇಶಿ ಮಾತನಾಡಿ ಯಡಿಯೂರಪ್ಪ ಅವರನ್ನು `ಸಿಂಹ' ಎಂದು ಬಣ್ಣಿಸಿದರು.

ಈ ಬಾರಿ ಚುನಾವಣೆಯಲ್ಲಿ ಕೆಜೆಪಿ ಅಧಿಕಾರಕ್ಕೆ ಬರಲಿದ್ದು, ಜಬ್ಬಾರ್‌ಖಾನ್ ಹೊನ್ನಳ್ಳಿ ಅವರೊಂದಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಅಧಿಕಾರ ನಡೆಸುವುದಾಗಿ ಯಡಿಯೂರಪ್ಪ ಘೋಷಿಸಿದರು. ಹಾವೇರಿ ಹತ್ತಿರದಲ್ಲಿಯೇ ಇದ್ದು, ಡಿಸೆಂಬರ್ 9ರ ಸಮಾವೇಶಕ್ಕೆ ಆಗಮಿಸುವಂತೆ ನೆರೆದವರನ್ನು ಸ್ವಾಗತಿಸಿದರು.

10 ಸಾವಿರಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ನಿಗದಿತ ವೇಳೆಗಿಂತ ಎರಡು ಗಂಟೆ ತಡವಾಗಿ ಕಾರ್ಯಕ್ರಮ ಆರಂಭವಾಯಿತು. ಕೆಜೆಪಿ ಸೇರ್ಪಡೆಯಾದ ಮುಖಂಡರನ್ನು ಯಡಿಯೂರಪ್ಪ ಹಾರ ಹಾಕಿ ಸ್ವಾಗತಿಸಿದರು.

ಸಮಾವೇಶದಲ್ಲಿ ಎಂದಿನಂತೆ ಯಡಿಯೂರಪ್ಪ ಬಿಜೆಪಿ ಮುಖಂಡರ ಬಗ್ಗೆ ಹರಿಹಾಯಲಿಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದರು. ಪಕ್ಷದವರೇ ತಮ್ಮನ್ನು ಷಡ್ಯಂತ್ರ ಮಾಡಿ ಕೆಳಗಿಳಿಸಿದರು ಎಂದು ಹೇಳುತ್ತಾ ಒಂದು ಹಂತದಲ್ಲಿ ಭಾವೊದ್ವೇಗಕ್ಕೆ ಒಳಗಾದರು.

ಬೈಕ್ ರ‌್ಯಾಲಿ, ಶಂಕರಣ್ಣ ಬಿಜವಾಡ ಬೆಂಬಲಿಗರ ಮೆರವಣಿಗೆ ಹಾಗೂ ಯಡಿಯೂರಪ್ಪ ಆಗಮಿಸಿದ ವೇಳೆ ಇಂಡಿ ಪಂಪ್ ರಸ್ತೆಯಲ್ಲಿ ವಾಹನ ದಟ್ಟಣೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಯಿತು. ಸುಗಮ ಸಂಚಾರಕ್ಕೆ  ತೊಂದರೆಯಾಯಿತು. ಯಡಿಯೂರಪ್ಪ ಸೇರಿದಂತೆ ಕೆಜೆಪಿ ನಾಯಕರನ್ನು ಪಟಾಕಿ ಸಿಡಿಸಿ ವೇದಿಕೆಗೆ ಸ್ವಾಗತಿಸಲಾಯಿತು.

ಹುಬ್ಬಳ್ಳಿಯಲ್ಲಿ ಕೆಜೆಪಿ ಸೇರಿದ ಪ್ರಮುಖರು...
ಬಿಜೆಪಿ ಮಹಾನಗರ ಪರಿಶಿಷ್ಟ ಜಾತಿ ಮೋರ್ಚಾದ ಅಧ್ಯಕ್ಷ ಲಕ್ಷ್ಮಣ ಬೀಳಗಿ, ಪಾಲಿಕೆ ಸದಸ್ಯರಾದ ವೆಂಕಟೇಶ ಮೇಸ್ತ್ರಿ, ರಾಜಶ್ರೀ ಜಡಿ, ಪುಷ್ಪಾ ಶಿವನಗೌಡ ಹೊಸಮನಿ, ಯಮನೂರ ಜಾಧವ, ಬಿಜೆಪಿ ಮುಖಂಡರಾದ ಶಂಕರಣ್ಣ ಬಿಜವಾಡ, ಚಂದ್ರಶೇಖರ ಗೋಕಾಕ, ಉದ್ಯಮಿ ರಮೇಶ್ ಬಾಫ್ನಾ, ಆರೀಫ್ ಮುಜಾವರ್, ಶಿವಾನಂದ, ಶಿವನಗೌಡ ಹೊಸಮನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.