ಧಾರವಾಡ: `ಛಾಯಾಚಿತ್ರಗಳಿಲ್ಲದೇ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಛಾಯಾಚಿತ್ರಗಳ ನಂತರ ವಿಡಿಯೋ, 3ಡಿ ಮತ್ತಿತರರ ಹೊಸ ಹೊಸ ಆವಿಷ್ಕಾರಗಳಿಂದ ಹೊಸ ನಮೂನೆಯ ಛಾಯಾಚಿತ್ರಗಳು ಇಂದು ಬೆಳಕಿಗೆ ಬರುತ್ತಿವೆ~ ಎಂದು ಗಂಗಾವತಿ ಬೀಚಿ ಖ್ಯಾತಿಯ ಹಾಸ್ಯ ಕಲಾವಿದ ಬಿ.ಪ್ರಾಣೇಶ ಹೇಳಿದರು.
ನಗರದ ಫೋಟೊ ಮತ್ತು ವಿಡಿಯೋಗ್ರಾಫರ್ಸ್ ಸಂಘದ ವತಿಯಿಂದ ವಿಶ್ವ ಛಾಯಾಗ್ರಹಕ ದಿನಾಚರಣೆ ಅಂಗವಾಗಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ನಗೆಹಬ್ಬ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಛಾಯಾಚಿತ್ರ ತೆಗೆದರೆ ಆಯುಷ್ಯ ಕಡಿಮೆಯಾಗುತ್ತದೆ ಎಂಬ ಮೂಢನಂಬಿಕೆ ಮೊದಲಿನ ಜನರಲ್ಲಿತ್ತು. ಆದರೆ ಇಂದು ಛಾಯಾಚಿತ್ರವಿಲ್ಲದೇ ಯಾವ ಕಾರ್ಯವೂ ನಡೆಯುತ್ತಿಲ್ಲ. ತಂತ್ರಜ್ಞಾನದ ಬಳಕೆಯಿಂದಾಗಿ ಮೊಬೈಲ್‌ಗಳಲ್ಲಿಯೇ ಕ್ಯಾಮೆರಾಗಳು ಬಂದಿರುವುದರಿಂದ ತಮ್ಮ ಭಾವಚಿತ್ರಗಳನ್ನು ತಾವೇ ತೆಗೆದುಕೊಂಡು ಕೇವಲ ಫೋಟೋ ಪ್ರಿಂಟ್ ಹಾಕಿಸಿಕೊಳ್ಳಲು ಮಾತ್ರ ಸ್ಟುಡಿಯೋಗೆ ಹೋಗುವ ಜನ ಹೆಚ್ಚಾಗಿದ್ದರಿಂದ ಇಂದು ಫೋಟೋಗ್ರಾಫರ್‌ಗಳ ಜೀವನ ಸ್ವಲ್ಪ ಮಟ್ಟಿಗೆ ದುಃಸ್ಥಿತಿಗೆ ಬಂದಿದೆ~ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, `ನಗರದ ವೃತ್ತಿನಿರತ ಫೋಟೊ ಮತ್ತು ವಿಡಿಯೋಗ್ರಾಫರ್ಸ್ ಸಂಘಕ್ಕೆ ಪ್ರತ್ಯೇಕ ಕಚೇರಿ ನಿರ್ಮಾಣ ಮಾಡಿಕೊಳ್ಳಲು ಸೂಕ್ತ ಸ್ಥಳಾವಕಾಶ ನೀಡಲು ಪ್ರಯತ್ನಿಸಲಾಗುವುದು~ ಎಂದು ಭರವಸೆ ನೀಡಿದರು.
ಜಿಲ್ಲಾ ಕಲ್ಯಾಣ ಮಂಟಪಗಳ ಸಂಘದ ಅಧ್ಯಕ್ಷ ಬಸವರಾಜ ಹೆಬಸೂರ, `ಪ್ರತಿಯೊಂದು ಮನೆಯಲ್ಲಿ ಅಜ್ಜ, ಮುತ್ತಜ್ಜರ ಕಾಲದ ಛಾಯಾಚಿತ್ರಗಳು ಇಂದಿಗೂ ಇರುವುದರಿಂದ ಹಳೆಯ ನೆನಪು ಮಾಡಿಕೊಡುತ್ತವೆ. ಚಂದ್ರಲೋಕವನ್ನು ಭೂಮಿಯ ಮೇಲಿರುವ ಜನರಿಗೆ ತೋರಿಸುವಂತ ಕಾರ್ಯವನ್ನು ಈ ಫೋಟೊಗ್ರಾಫಿ ಮಾಡುತ್ತಿದೆ~ ಎಂದರು.
ಮೆರಗು ತಂದ ನಗೆಹಬ್ಬ
ಧಾರವಾಡ: ಸಭಾಭವನದ ತುಂಬೆಲ್ಲ ಕಿಕ್ಕಿರಿದ ಜನಸಂದಣಿ... ಕಾಲಿಡಲೂ ಜಾಗವಿಲ್ಲದ ಸನ್ನಿವೇಶ.. ಹಾಸ್ಯ ಕಲಾವಿದರ ಮಾತು ಕೇಳಬೇಕೆಂಬ ಉತ್ಸಾಹ ನಗರದ ಜನರಲ್ಲಿತ್ತು.. ಭಾನುವಾರ ಸರ್ಕಾರಿ ಕಚೇರಿಗಳಂತೂ ರಜೆ ಇದ್ದದ್ದರಿಂದ ನೌಕರರಲ್ಲದೇ ನಗರದ ಎಲ್ಲ ಜನತೆ ಸಭಾಭವನಕ್ಕೆ ಲಗ್ಗೆ ಇಟ್ಟಿದ್ದು ವಿಶೇಷವಾಗಿತ್ತು. ನಕ್ಕು ನಕ್ಕು ಎಲ್ಲರ ಹೊಟ್ಟೆ ಹುನ್ನಾಗುವಂತೆ ಮಾಡಿದ್ದಲ್ಲದೇ ವಿವಿಧ ನೃತ್ಯ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸ್ಸಿಗೆ ಮುದ ನೀಡಿದವು.
ಇದು ಕಂಡು ಬಂದದ್ದು ಛಾಯಾಗ್ರಹಣ ದಿನಾಚರಣೆ ಅಂಗವಾಗಿ ನಡೆದ ನಗೆಹಬ್ಬ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ. ಹಾಸ್ಯ ಕಲಾವಿದ ಬಿ.ಪ್ರಾಣೇಶ ಅವರು ನಡೆಸಿಕೊಟ್ಟ ಈ ಜನತೆಗೆ ರಸದೌತಣ ನೀಡಿತು.
ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಅವರು ಕೂಡ ಹಾಸ್ಯದ ಹೊನಲು ಮೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.