ADVERTISEMENT

ಜುಲೈ 20ರಿಂದ ಆಯುಷ್ ವೈದ್ಯರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2012, 6:30 IST
Last Updated 22 ಜೂನ್ 2012, 6:30 IST

ಹುಬ್ಬಳ್ಳಿ: ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಅಲೋಪತಿ ಔಷಧಿ ನೀಡಲು ಆಯುಷ್ ವೈದ್ಯರಿಗೆ ಅನುಮತಿ ನೀಡಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು  ಜುಲೈ 20ರಿಂದ ರಾಜ್ಯದಾದ್ಯಂತ ಆಯುಷ್ ವೈದ್ಯರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ.

ಆಯುಷ್ ವಿದ್ಯಾರ್ಥಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಜಿಲ್ಲಾ ಆರೋಗ್ಯ ಪ್ರತಿನಿಧಿ ಗಳು ಸಹ ಮುಷ್ಕರಕ್ಕೆ ಬೆಂಬಲ ಸೂಚಿಸಲಿದ್ದಾರೆ ಎಂದು ಭಾರತೀಯ ಆಯುಷ್ ಪರಿಷತ್ತಿನ (ಎಎಫ್‌ಐ) ರಾಜ್ಯ ಘಟಕದ ಅಧ್ಯಕ್ಷ ಡಾ. ಎನ್.ಎ. ಮಗ್ದುಂ ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

ರಾಜ್ಯದಲ್ಲಿ 40,000ಕ್ಕೂ ಹೆಚ್ಚು ಆಯುಷ್ ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು  ಅಲೋಪತಿ ಔಷಧಿ ನೀಡುವುದು ಅನಿವಾರ್ಯವಾಗಿದೆ. ನಮ್ಮ ಈ ಬೇಡಿಕೆಯನ್ನು ಈಡೇರಿಸು ವಂತೆ ಕಳೆದ ಐದು ವರ್ಷಗಳಿಂದಲೂ  ಪರಿಷತ್ತು ಆಗ್ರಹಿಸುತ್ತಿದೆ. ರಾಜ್ಯ ಪಾಲರು, ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರಿಗೂ ಮನವಿ ಸಲ್ಲಿಸಿದೆ. ಆದರೂ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಪರಿಷತ್ತು ಪ್ರತಿಭಟನೆಗೆ ನಿರ್ಧರಿಸಿದೆ ಎಂದು ತಿಳಿಸಿದರು.

ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಗೆ ತಿದ್ದುಪಡಿ ತಂದು ಆಯುಷ್ ವೈದ್ಯರ ಶಿಕ್ಷಣ, ತರಬೇತಿ ಮತ್ತು ಅನುಭವದ ಆಧಾರದ ಮೇಲೆ ಅಲೋಪತಿ ಔಷಧಿಗಳನ್ನು ರೋಗಿಗಳಿಗೆ ನೀಡಲು ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ.  ಈಗಾಗಲೇ 12 ರಾಜ್ಯಗಳಲ್ಲಿ ಆಯುಷ್ ವೈದ್ಯರು ಅಲೋಪತಿ ಔಷಧಿಗಳನ್ನು ನೀಡು ತ್ತಿದ್ದಾರೆ. ಅದರಂತೆ ಕರ್ನಾಟಕ ರಾಜ್ಯ ಸರ್ಕಾರವೂ ಅನುಮತಿ ನೀಡಬೇಕು~ ಎಂದು ಆಗ್ರಹಿಸಿದರು.

ಪರಿಷತ್ತಿನ ಕಾರ್ಯದರ್ಶಿ ಮಹಾವೀರ ಹಾವೇರಿ ಮಾತನಾಡಿ, ರಾಜ್ಯ ಸರ್ಕಾರವು ಸರ್ಕಾರಿ ಆಸ್ಪತ್ರೆ ಗಳಲ್ಲಿ ಆಯುಷ್ ವೈದ್ಯರನ್ನು ನೇಮಕ ಮಾಡಿದ್ದು, ಅವರು ಅಲೋಪತಿ ಔಷಧಿಗಳನ್ನು ರೋಗಿಗಳಿಗೆ ನೀಡು ತ್ತಿದ್ದಾರೆ. ಹೀಗಾಗಿ ಸರ್ಕಾರ ತಾತ್ವಿಕ ವಾಗಿ ಆಯುಷ್ ವೈದ್ಯರು ಅಲೋಪತಿ ಔಷಧಿಗಳನ್ನು ನೀಡಲು ಒಪ್ಪಿಕೊಂಡಂ ತಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನ ದಂತೆ  ಇತರ ರಾಜ್ಯಗಳ ಮಾದರಿಯಲ್ಲಿ ಅಲೋಪತಿ ಔಷಧಿಗಳನ್ನು ನೀಡಲು ಎಲ್ಲಾ ಆಯುಷ್ ವೈದ್ಯರಿಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪರಿಷತ್ತಿನ  ಸಂಘಟನಾ ಸಮಿತಿ ಸದಸ್ಯ ಡಾ. ಎಸ್.ಕೆ. ಬನ್ನಿಗೌಡ, ಖಚಾಂಚಿ ಡಾ. ಆನಂದ ಎಸ್ ಕಿರಿಶಾಲ್, ಡಾ. ಹುನಗುಂದ ಹಾಜರಿದ್ದರು.

`ಕಾನೂನು ತೂಗುಗತ್ತಿ~
`ರಾಜ್ಯದಲ್ಲಿ ಆಯುಷ್ ವೈದ್ಯರ ಮೇಲೆ ಸದಾ ಕಾನೂನು ತೂಗುಗತ್ತಿ ಇದೆ. ತುರ್ತು ಸಂದರ್ಭದಲ್ಲಿ ಸಣ್ಣ ಅಲೋಪತಿ ಔಷಧಿಯನ್ನು ರೋಗಿ ಗಳಿಗೆ ನೀಡಿದರೂ ಅದರ ಬಗ್ಗೆ ತಾಲ್ಲೂಕು ಆರೋಗ್ಯ ಅಧಿಕಾರಿಗಳು (ಟಿಎಚ್‌ಒ) ವಿರೋಧ ವ್ಯಕ್ತಪಡಿಸುತ್ತಾರೆ.

ರೋಗಿಯ ಜೀವ ಉಳಿಸಲು ತುರ್ತು ಸಂದರ್ಭದಲ್ಲಿ ಅಲೋಪತಿ ಔಷಧಿ ನೀಡುವುದು ಅನಿವಾರ್ಯ ವಾಗಿದೆ. ಆದರೆ ಸಣ್ಣ ಬ್ಯಾಂಡೇಜ್ ಬಳಕೆಗೂ ಅಲೋಪತಿ ವೈದ್ಯರು ಭಯ ಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಸಾವಿರಾರು ವೈದ್ಯರು ಪರಿಣಾಮಕಾರಿ ಯಾಗಿ ಸೇವೆ ಸಲ್ಲಿಸಲು ಅಲೋಪತಿ ಔಷಧಿ ನೀಡಲು ಸರ್ಕಾರ ಅನುಮತಿ ನೀಡಬೇಕು~ ಎಂದು ಎಎಫ್‌ಐ ಸಂಘಟನಾ ಕಾರ್ಯದರ್ಶಿ ಡಾ. ಸೋಮಶೇಖರ ಹುದ್ದಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.