ಹುಬ್ಬಳ್ಳಿ: ಅತಿ ಶೀಘ್ರದಲ್ಲಿ ಮತ್ತು ಪರಿಣಾಮಕಾರಿಯಾಗಿ ಕ್ಷಯರೋಗ ಪತ್ತೆ ಮಾಡಿ ರೋಗಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗಲು ನೆರವಾಗುವ ‘ಪರಿಣಿತ’ ಉಪಕರಣ ನಗರದ ಕಿಮ್ಸ್‌ಗೆ ಬಂದಿದೆ. ಜೀನ್ ಎಕ್ಸ್‌ಪರ್ಟ್ ಎಂಬ ಈ ಉಪಕರಣ ಡಿಎನ್‌ಎ ಆಧರಿಸಿ ಜೀವಕೋಶದಲ್ಲಿರುವ ಕ್ಷಯವನ್ನು ಕೇವಲ ಎರಡು ತಾಸುಗಳಲ್ಲಿ ಪತ್ತೆ ಮಾಡುತ್ತದೆ.
ಕಿಮ್ಸ್‌ನ ಎರಡನೇ ಹಂತದ ಕ್ಷಯರೋಗ ಚಿಕಿತ್ಸಾ ಕೇಂದ್ರ ಮತ್ತು ಪ್ರಯೋಗಾಲಯದಲ್ಲಿ ಎರಡು ತಿಂಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಉಪಕರಣದಲ್ಲಿ ಈಗಾಗಲೇ 250ಕ್ಕೂ ಹೆಚ್ಚು ಮಾದರಿಗಳ ಪರೀಕ್ಷೆ ನಡೆದಿದ್ದು ಉತ್ತಮ ಫಲಿತಾಂಶ ಬಂದಿದೆ ಎಂದು ಹೇಳುತ್ತಾರೆ ಕೇಂದ್ರದ ಸಿಬ್ಬಂದಿ.
ಕ್ಷಯರೋಗದ ಪತ್ತೆಗೆ ಸಾಮಾನ್ಯವಾಗಿ ಲಿಕ್ವಿಡ್ ಕಲ್ಚರ್ ಟೆಸ್ಟ್, ಲೈನ್ ಪ್ರೋಬ್ ಅಸ್ಸೆ, ಸಾಲಿಡ್ ಕಲ್ಚರ್ ಟೆಸ್ಟ್ ಇತ್ಯಾದಿ ಮಾಡಲಾಗುತ್ತದೆ. ಎರಡನೇ ಹಂತದ ಕ್ಷಯರೋಗಿಗಳ ಪರೀಕ್ಷೆಗೆ ಕಿಮ್ಸ್‌ನಲ್ಲಿ ಈ ಹಿಂದೆ ಲೈನ್ ಪ್ರೋಬ್ ಅಸ್ಸೆ ಪರೀಕ್ಷೆ ಬಳಸಾಗುತ್ತಿತ್ತು. ಈಗ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯವ ರೋಗಿಗಳಿಗೆ ಮಾತ್ರ ಜೀನ್ ಎಕ್ಸ್‌ಪರ್ಟ್ ಪರೀಕ್ಷೆ ಮಾಡಲಾಗುತ್ತದೆ. ಲಿಕ್ವಿಡ್ ಕಲ್ಚರ್ ಟೆಸ್ಟ್ ಮಾಡಿದರೆ ಫಲಿತಾಂಶಕ್ಕೆ 45 ದಿನ ಕಾಯಬೇಕು. ಲೈನ್ ಪ್ರೋಬ್ ಮಾಡಿದರೆ ಏಳು ವಾರ, ಸಾಲಿಡ್ ಕಲ್ಚರ್ ಟೆಸ್ಟ್ ಮಾಡಿದರೆ ಮೂರು ತಿಂಗಳು ಕಾಯಬೇಕು. ರೋಗಪತ್ತೆ ತಡವಾದರೆ ಚಿಕಿತ್ಸೆ ಆರಂಭವೂ ತಡವಾಗುತ್ತದೆ. ಇದರಿಂದ ರೋಗಿಗೆ ತೊಂದರೆ ಮಾತ್ರವಲ್ಲ, ರೋಗ ಹರಡುವುದು ಕೂಡ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಜೀನ್ ಎಕ್ಸ್‌ಪರ್ಟ್ ಉಪಕರಣ ಉತ್ತರ ಕರ್ನಾಟಕಕ್ಕೆ ವರದಾನ ಎನ್ನುತ್ತಾರೆ ಸಿಬ್ಬಂದಿ.
ಜೀನ್ ಎಕ್ಸ್‌ಪರ್ಟ್ ಒಂದು ಸಣ್ಣ, ಪೆಟ್ಟಿಗೆಯಾಕಾರದ ಉಪಕರಣ. ಇದನ್ನು ಕಂಪ್ಯೂಟರ್ ಜೊತೆ ಸಂಪರ್ಕಿಸಲಾಗುತ್ತದೆ. ಬಾರ್ ಕೋಡ್ ಇರುವ ಕಾರ್ಟೇಜ್‌ಗಳಲ್ಲಿ ಹಾಕಿದ ಕಫದ ಮಾದರಿಯನ್ನು ಈ ಉಪಕರಣದ ಒಳಗೆ ಇರಿಸಿದರೆ ಎರಡು ತಾಸುಗಳಲ್ಲಿ ಫಲಿತಾಂಶ ಬರುತ್ತದೆ. ಲೈನ್ ಪ್ರೋಬ್ ಟೆಸ್ಟ್‌ನಲ್ಲಿ ಕಫದ ಮಾದರಿ ಪರೀಕ್ಷೆಗೆ ₨ ಏಳರಿಂದ ಎಂಟು ಸಾವಿರ ವೆಚ್ಚವಾದರೆ ಜೀನ್ ಎಕ್ಸ್‌ಪರ್ಟ್‌ನಲ್ಲಿ ಕೇವಲ ₨ ಎರಡು ಸಾವಿರ ಸಾಕಾಗುತ್ತದೆ. ಕಿಮ್ಸ್‌ನಲ್ಲಿ ಇದು ಉಚಿತವಾಗಿ ನಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.