ADVERTISEMENT

ಡಬ್ಲ್ಯುಟಿಒದಿಂದ ಸಣ್ಣ ಉದ್ದಿಮೆಗೆ ಪೆಟ್ಟು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 4:35 IST
Last Updated 15 ಸೆಪ್ಟೆಂಬರ್ 2011, 4:35 IST

ಹುಬ್ಬಳ್ಳಿ: `ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಳ್ಳುವ ಮುನ್ನ ಕೇಂದ್ರ ಸರ್ಕಾರ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳನ್ನು ಅದಕ್ಕೆ ಸಿದ್ಧಗೊಳಿಸದ ಕಾರಣ ಈ ವಲಯ ಸಮಸ್ಯೆ ಎದುರಿಸಬೇಕಾಗಿದೆ~ ಎಂದು ಮಾರುಕಟ್ಟೆ ವಿಶ್ಲೇಷಕ ಡಾ. ರಾಜೇಂದ್ರ ಎಂ. ಇನಾಮದಾರ್ ಅಭಿಪ್ರಾಯಪಟ್ಟರು.

ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ (ಎಂಎಸ್‌ಎಂಇ) ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಜಂಟಿಯಾಗಿ ಬುಧವಾರ ಏರ್ಪಡಿಸಿದ್ದ `ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ)ಯ ವಿವಿಧ ಆಯಾಮಗಳು~ ಕುರಿತ ಕಾರ್ಯಾಗಾರದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

`ಯಾವುದೇ ಸಿದ್ಧತೆ ಇಲ್ಲದೆ ಆರ್ಥಿಕ ಉದಾರೀಕಣ ಹಾಗೂ ಜಾಗತೀಕರಣಕ್ಕೆ ತೆರೆದುಕೊಂಡಿದ್ದು ಕುಂಟನೊಬ್ಬ ಒಲಿಂಪಿಕ್ ಕೂಟದಲ್ಲಿ ಓಡಿದಂತಾಗಿದೆ. ಚೀನಾ ಜಾಗತೀಕರಣವನ್ನು ಸ್ವೀಕರಿಸಲು 25 ವರ್ಷ ಕಾಲಾವಕಾಶ ತೆಗೆದುಕೊಂಡಿತು. ಈ ಅವಧಿಯಲ್ಲಿ ದೇಶೀ ಕೈಗಾರಿಕೆಗಳನ್ನು ಅಂತರರಾಷ್ಟ್ರೀಯ ಸ್ಪರ್ಧೆಗೆ ಅಣಿಗೊಳಿಸಿತು~ ಎಂದು ಅವರು ವಿಶ್ಲೇಷಿಸಿದರು.

`ಭಾರತದ ಸಣ್ಣ ಉದ್ದಿಮೆಗಳಿಗೆ ಸರ್ಕಾರದ ಸಹಕಾರ ಸರಿಯಾಗಿಲ್ಲ. ಸಾಲದ ದರವೂ ಹೆಚ್ಚಾಗಿದೆ. ಹೀಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರಿಂದ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ~ ಎಂದು ಹೇಳಿದರು.
`ಡಬ್ಲ್ಯುಟಿಒ ಒಳ್ಳೆಯ ಉದ್ದೇಶ ಇಟ್ಟುಕೊಂಡೇ ಸ್ಥಾಪನೆಯಾದ ಸಂಸ್ಥೆ.
 
ಸದ್ಯ 158 ದೇಶಗಳು ಈ ಸಂಸ್ಥೆಯ ಸದಸ್ಯತ್ವ ಪಡೆದಿವೆ. ಈ ಸಂಸ್ಥೆಯಿಂದ ಹಿಂದೆ ಸರಿಯುವುದು ಅತ್ಯಂತ ಸರಳವಾಗಿದ್ದು, ಅದರ ಸದಸ್ಯತ್ವ ಮರಳಿ ಪಡೆಯುವುದು ಅತ್ಯಂತ ಕಠಿಣವಾಗಿದೆ~ ಎಂದು ಅವರು ವಿವರಿಸಿದರು.

`ಜಾಗತಿಕವಾಗಿ ಉತ್ಪನ್ನವಾಗುವ ಪ್ರತಿ ಸರಕಿಗೆ ಮುಕ್ತ ಮಾರುಕಟ್ಟೆಯನ್ನು ಒದಗಿಸುವುದು ಡಬ್ಲ್ಯುಟಿಒದ ಮುಖ್ಯ ಉದ್ದೇಶವಾಗಿದೆ. ಯಾವುದೇ ಸದಸ್ಯ ದೇಶದ ಉತ್ಪನ್ನವನ್ನು ಮತ್ತೊಂದು ಸದಸ್ಯ ದೇಶ ತನ್ನ ಮಾರುಕಟ್ಟೆಗೆ ಬರದಂತೆ ನಿರಾಕರಿಸುವಂತಿಲ್ಲ~ ಎಂದು ತಿಳಿಸಿದರು.
 
`ದೇಶೀ ಉತ್ಪನ್ನಗಳ ಬೆಲೆಗಿಂತ ಕಡಿವೆು ಬೆಲೆ ನಿಗದಿಪಡಿಸಿ ಆ ದೇಶದ ಮಾರುಕಟ್ಟೆಗೆ ಸರಕು ಡಂಪ್ ಮಾಡಲು ಡಬ್ಲ್ಯುಟಿಒ ನಿಯಮಾವಳಿ ಅನುಮತಿ ನೀಡುವುದಿಲ್ಲ~ ಎಂದು ಅವರು ಹೇಳಿದರು.

`ಎರಡು ದೇಶಗಳ ಮಧ್ಯೆ ಯಾವುದೇ ವಿವಾದ ಉಂಟಾದರೂ 60 ದಿನಗಳಲ್ಲಿ ಬಗೆಹರಿಸಬೇಕು. ಇಲ್ಲದಿದ್ದರೆ ವಿಚಾರಣಾ ಸಮಿತಿ ರಚನೆ ಮಾಡಬೇಕಾಗುತ್ತದೆ. ಅದು ತನ್ನೆಲ್ಲ ಕಲಾಪ ಮುಗಿಸಿ ಆರು ತಿಂಗಳಲ್ಲೇ ತನ್ನ ಅಂತಿಮ ವರದಿ ನೀಡಬೇಕು~ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಂ.ಸಿ. ಹಿರೇಮಠ, `ಡಬ್ಲ್ಯುಟಿಒದಿಂದ ಸಣ್ಣ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ವಿದೇಶಗಳಲ್ಲಿ ನಮ್ಮ ಉತ್ಪನ್ನಗಳ ಮಾರಾಟಕ್ಕೆ ನಿಯಮಾವಳಿಯಲ್ಲಿ ಅಡ್ಡ ಮಾರ್ಗ ಹುಡುಕಿ ಅಡ್ಡಿಪಡಿಸಲಾಗುತ್ತಿದೆ ಎಂದು ವಿಷಾದಿಸಿದರು.

ಎಂಎಸ್‌ಎಂಇ ಹುಬ್ಬಳ್ಳಿ ವಿಭಾಗದ ನಿರ್ದೇಶಕ ಜಿ.ಆರ್.ಅಕ್ಕಾದಾಸ್, ವಸಂತ ಲದ್ವಾ, ಅಶೋಕ ನಿಲೋಗಲ್, ರಮೇಶ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.