ಬಳ್ಳಾರಿ: ನಗರದ ವೀರಶೈವ ಕಾಲೇಜು ಮೈದಾನದಲ್ಲಿ ಭಾನುವಾರ ಕೆಎಸ್‌ಸಿಎ ಆಯೋಜಿಸಿದ್ದ ತುಮಕೂರು ವಲಯದ 2ನೇ ಡಿವಿಜನ್ ಲೀಗ್ ಪಂದ್ಯದಲ್ಲಿ ದಾವಣಗೆರೆ ಕ್ರಿಕೆಟ್ ಕ್ಲಬ್ ತಂಡ ಬಳ್ಳಾರಿಯ ಎಸಿಸಿ ಕ್ರಿಕೆಟ್ ಕ್ಲಬ್ ತಂಡದ ವಿರುದ್ಧ ಜಯ ಗಳಿಸಿತು.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಬಳ್ಳಾರಿ ತಂಡ ಆದರೆ, ದಾವಣಗೆರೆಯ ಸುರೇಶ್ ಕರ್ನಿ ಅವರ ಮಾರಕ ಬೌಲಿಂಗ್ (9.2 ಓವರ್‌ಗಳಲ್ಲಿ 13 ರನ್‌ಗಳಿಗೆ 6 ವಿಕೆಟ್) ದಾಳಿಗೆ ತತ್ತರಿಸಿ ಕೇವಲ 29.1 ಓವರ್‌ಗಳಲ್ಲಿ 89 ರನ್‌ಗಳಿಗೆ ಆಲೌಟ್ ಆಯಿತು.
ಸುರೇಶ್ ಅವರಿಗೆ ಉತ್ತಮ ಜತೆ ನೀಡಿದ ಕೆ.ಪ್ರಶಾಂತ್ (10 ಓವರ್‌ಗಳಲ್ಲಿ 27 ರನ್‌ಗಳಿಗೆ 3 ವಿಕೆಟ್) ಎದುರಾಳಿ ತಂಡವನ್ನು ಅತ್ಯಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ಬಳ್ಳಾರಿ ತಂಡದ ಪರ ಮಣಿ ನಾಲ್ಕು ಬೌಂಡರಿಗಳಿದ್ದ 18 ರನ್ ಗಳಿಸಿದರೆ, ಚಕ್ರವರ್ತಿ 3 ಬೌಂಡರಿಗಳಿದ್ದ 19 ರನ್ ಪೇರಿಸಿದರು.
ತಮ್ಮ ಸರದಿಯ ಆರಂಭದಿಂದಲೂ ಉತ್ತಮ ಆಟ ಪ್ರದರ್ಶಿಸಿದ ದಾವಣಗೆರೆ ಕ್ರಿಕೆಟ್ ಕ್ಲಬ್ ತಂಡ, ಕೇವಲ 9.2 ಓವರ್‌ಗಳಲ್ಲಿ 2 ವಿಕೆಟ್ ಕಳೆದಕೊಂಡು ಗೆಲುವಿನ ಗುರಿ ತಲುಪಿತು.
ಕೆ.ಪ್ರಶಾಂತ್ 44 ಎಸೆತಗಳಲ್ಲಿ 11 ಬೌಂಡರಿ ನೆರವಿನ 60 ರನ್ ಗಳಿಸಿದರೆ, ಎಚ್.ಪಿ. ರಾಹುಲ್ 6 ಬೌಂಡರಿಗಳಿದ್ದ 27 ರನ್ ಗಳಿಸಿ ಉತ್ತಮ ಕಾಣಿಕೆ ನೀಡಿದರು.
ಬಳ್ಳಾರಿಯ ಎಸಿಸಿ ತಂಡದ ಪರ ಆದಿತ್ಯ ಕಾಕಡೆ ಮತ್ತು ಇಜಾಜ್ ತಲಾ ಒಂದು ವಿಕೆಟ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.