ADVERTISEMENT

ದುರ್ಗದಕೇರಿ, ತೇಗೂರಿನಲ್ಲಿ ವಾಂತಿಭೇದಿ; 26 ಜನ ಅಸ್ವಸ್ಥ

ಪ್ರಜಾವಾಣಿ ವಿಶೇಷ
Published 10 ಆಗಸ್ಟ್ 2012, 7:25 IST
Last Updated 10 ಆಗಸ್ಟ್ 2012, 7:25 IST

ದುರ್ಗದಕೇರಿ (ತಾ.ಧಾರವಾಡ): ಕಲುಷಿತ ನೀರು ಸೇವಿಸಿ ದುರ್ಗದಕೇರಿ ಹಾಗೂ ಹಳೆ ತೇಗೂರಿನ 26ಕ್ಕೂ ಅಧಿಕ ಜನರು ವಾಂತಿ-ಭೇದಿಯಿಂದಾಗಿ ಅಸ್ವಸ್ಥರಾಗಿದ್ದಾರೆ. ಘಟನೆಗೆ ನೀರು ಸಂಗ್ರಹಾಗಾರ ಹಾಗೂ ಬೋರ್‌ವೆಲ್‌ಗಳಿಂದ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಪೈಪ್‌ಲೈನ್ ಒಡೆದು, ಕಲುಷಿತ ನೀರು ಸೇವಿಸಿದ್ದೇ ಕಾರಣ ಎಂದು ತಿಳಿದು ಬಂದಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳ ಸೂಚನೆ ಮೇರೆಗೆ ಈ ಗ್ರಾಮಗಳಲ್ಲಿ ವೈದ್ಯಕೀಯ ಸಿಬ್ಬಂದಿ ಬೀಡು ಬಿಟ್ಟಿದ್ದು, ಅಗತ್ಯ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.

ಏತನ್ಮಧ್ಯೆ ದುರ್ಗದಕೇರಿಯ ನೀರು ಸೇವಿಸಲು ಅಯೋಗ್ಯವಾಗಿದ್ದರಿಂದ ತೇಗೂರು ಗ್ರಾಮ ಪಂಚಾಯಿತಿಯು ಟ್ಯಾಂಕರ್ ಮೂಲಕ ಗುರುವಾರ ನೀರು ಪೂರೈಕೆ ಮಾಡಿತು. ಗುರುವಾರ ಮಧ್ಯಾಹ್ನವಷ್ಟೇ ಟ್ಯಾಂಕರ್ ನೀರು ಪೂರೈಕೆಯಾಗಿದ್ದು, ಅಲ್ಲಿಯವರೆಗೂ ಆ ಗ್ರಾಮಸ್ಥರು ಅದೇ ಕಲುಷಿತ ನೀರನ್ನೇ ಕಾಯಿಸಿ ಕುಡಿಯುತ್ತಿದ್ದರು!

ಟ್ಯಾಂಕರ್ ನೀರು ಸಹ ಎಲ್ಲರಿಗೂ ದೊರೆಯಲಿಲ್ಲ. ಕೆಲವರು ಹೊಲಗಳಿಗೆ ಹೋಗಿದ್ದರಿಂದ ಕೆಲವರಷ್ಟೇ ನೀರು ತುಂಬಿಕೊಳ್ಳಲು ಸಾಧ್ಯವಾಯಿತು. ತೇಗೂರಿನ ಓಣಿಯೊಂದರಲ್ಲೇ 20 ವಾಂತಿ-ಭೇದಿ ಪ್ರಕರಣಗಳು ಕಳೆದ ವಾರದ ಹಿಂದೆಯೇ ದಾಖಲಾಗಿದ್ದವು. ಕೆಲವರನ್ನು ಜಿಲ್ಲಾ ಆಸ್ಪತ್ರೆಗೆ ಹಾಗೂ ಕೆಲವರನ್ನು ಗ್ರಾಮದಲ್ಲೇ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ದುರ್ಗದಕೇರಿಯಲ್ಲಿಯೂ ಆರು ಜನರಿಗೆ ವಾಂತಿ-ಭೇದಿ ಉಂಟಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಲ್ಲಿ ಆಶಾ ಕಾರ್ಯಕರ್ತೆ ಹಾಗೂ ಗ್ರಾಮದ ನರ್ಸ್‌ಗೇ ವಾಂತಿ-ಭೇದಿ ಉಂಟಾಗಿತ್ತು. ಮೂರು ಮಂದಿ ಗರಗ ಆರೋಗ್ಯ ಕೇಂದ್ರದಿಂದ ದುರ್ಗದಕೇರಿಗೆ ಬಂದಿದ್ದ ನರ್ಸ್‌ಗಳು ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದ ವಾಂತಿ-ಭೇದಿ ಶಂಕಿತರ ತಪಾಸಣೆ ನಡೆಸಿ ಮಾತ್ರೆಗಳನ್ನು ನೀಡಿದರು.

ಗ್ರಾಮಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ ಪ್ರತಿನಿಧಿಯೊಂದಿಗೆ ಮಾತನಾಡಿದ ಗ್ರಾಮಸ್ಥೆ ಅನಸೂಯಾ ಅಂಬಲಬಾವಿ, `ಕಳೆದ ಒಂದು ವಾರದಿಂದ ಕುಡಿಯುವ ನೀರಿನಲ್ಲಿ ಕೆಂಪು ಮಣ್ಣು ಬರುತ್ತಿತ್ತು. ಅದನ್ನು ಕುಡಿದಿದ್ದರಿಂದಲೇ ನಮಗೆ ವಾಂತಿ ಮತ್ತು ಸಂಡಾಸ ಶುರು ಆಗೈತಿ. ಮನೆಗೆ ಒಬ್ಬಿಬ್ಬರಂತೆ ದಿನಾಲೂ ದವಾಖಾನಿಗೆ ಹೋಗಬೇಕಾಗ್ಯದ. ಅವತ್ತಿಂದ ಅದ ನೀರನ್ನು ಕಾಯಿಸಿ ಆರಿಸಿ ಕುಡಿಲಾಕತ್ತೀವ್ರಿ~ ಎಂದರು.

ಜಿಲ್ಲಾ ವೈದ್ಯಾಧಿಕಾರಿ ಡಾ.ಎನ್.ಎಂ.ಅಂಗಡಿ ಮಾತನಾಡಿ, `ಬುಧವಾರವಷ್ಟೇ ಧಾರವಾಡ ದಿಂದಲೇ ನಾಲ್ಕು ಜನ ವೈದ್ಯಕೀಯ ಸಿಬ್ಬಂದಿ ಯನ್ನು ದುರ್ಗದಕೇರಿಗೆ ಕಳುಹಿಸ ಲಾಗಿತ್ತು. ಅಲ್ಲಿ ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಪರಿಸ್ಥಿತಿ ಇದೀಗ ಸಂಪೂರ್ಣ ನಿಯಂತ್ರಣದಲ್ಲಿದೆ~ ಎಂದರು.

ಹೊಸ ಬೋರ್‌ವೆಲ್
ಕಲುಷಿತ ನೀರು ಪೂರೈಕೆಯಾಗಿ ವಾಂತಿ-ಭೇದಿ ಉಂಟಾದ ಹಿನ್ನೆಲೆಯಲ್ಲಿ ಆ ಬೋರ್‌ವೆಲ್ ಅನ್ನು ಸಂಪೂರ್ಣ ಸ್ವಚ್ಛಗೊಳಿಸಲು ನಿರ್ದೇಶನ ನೀಡಲಾಗಿದೆ. ಅಲ್ಲಿಯವರೆಗೆ ಗ್ರಾಮಸ್ಥರಿಗೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತದೆ.

ಅಗತ್ಯ ಬಿದ್ದರೆ ಕೂಡಲೇ ಒಂದು ಬೋರ್‌ವೆಲ್ ಕೊರೆಸಿ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಎ.ಮೇಘಣ್ಣವರ `ಪ್ರಜಾವಾಣಿ~ಗೆ ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT