ಹುಬ್ಬಳ್ಳಿ; ದೆಹಲಿ ಹೈಕೋರ್ಟ್ ಎದುರು ನಡೆದ ಬಾಂಬ್‌ಸ್ಫೋಟ ವಿರೋಧಿಸಿ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ದೇಶಪಾಂಡೆ ನಗರದ ಬಿಜೆಪಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮಹೇಶ್ ಟೆಂಗಿನಕಾಯಿ ನೇತೃತ್ವದಲ್ಲಿ ಟೈರ್ ಸುಟ್ಟು ಹಾಕಿದ ನೂರಾರು ಬಿಜೆಪಿ ಕಾರ್ಯಕರ್ತರು ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರದ ಮೃದು ಧೋರಣೆ ವಿರೋಧಿಸಿ ಘೋಷಣೆಗಳನ್ನು ಕೂಗಿದರು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ ಟೆಂಗಿನಕಾಯಿ, ಸ್ಫೋಟಕ್ಕೆ ಗುಪ್ತಚರ ಹಾಗೂ ಪೊಲೀಸ್ ವ್ಯವಸ್ಥೆಯ ವೈಫಲ್ಯ ಕಾರಣವಾಗಿದೆ. ಕೇಂದ್ರದ ಯುಪಿಎ ಸರ್ಕಾರ ಹಾಗೂ ದೆಹಲಿ ಸರ್ಕಾರ ಭಯೋತ್ಪಾದನೆ ವಿರುದ್ಧ ಮೃಧು ಧೋರಣೆ ತಾಳುತ್ತಿದ್ದು, ಇದರಿಂದ ಅಮಾಯಕರು ಬಲಿಯಾಗುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯಿಂದಾಗಿ ಅರ್ಧಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಬಂದ್ ಆಗಿ ದಟ್ಟಣೆ ಉಂಟಾಗಿತ್ತು.
ಪ್ರತಿಭಟನೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಪಾಲಿಕೆ ಸದಸ್ಯರಾದ ಸುಧೀರ್ ಸರಾಫ್, ಬಿ.ಕೆ.ಚೌಹಾಣ, ಸತೀಶ ಸೆಜವಾಡಕರ, ಮಹೇಶ ಬುರ್ಲಿ, ರಾಘವೇಂದ್ರ ರಾಮದುರ್ಗ, ಪಕ್ಷದ ಮುಖಂಡರಾದ ವೀರೇಶ ಸಂಗಳದ, ನಾಗೂಸಾ ಕಲಬುರ್ಗಿ,ಲಕ್ಷ್ಮಣ ಬೀಳಗಿ, ರಘು ಅಯ್ಯಂಗಾರ್, ರಂಗಾಬದ್ಧಿ, ದೇವದಾಸ ಹಬೀಬ, ಲಕ್ಷ್ಮಿಕಾಂತ ಪಾಟೀಲ, ಇಮ್ತಿಯಾಜ್ ಮುಲ್ಲಾ, ಉಮೇಶ ದುಶಿ,ಮೀನಾಕ್ಷಿ ವಂಟಮೋರಿ,ಉಮಾ ಅರೂರ್ ಪಾಲ್ಗೊಂಡಿದ್ದರು.
ಸಮತಾ ಸೈನಿಕದಳ: ಬಾಂಬ್‌ಸ್ಫೋಟವನ್ನು ರಾಜ್ಯ ಸಮತಾ ಸೇನೆ ವಿರೋಧಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮತಾ ಸೇನೆ ರಾಜ್ಯ ಘಟಕದ ಅಧ್ಯಕ್ಷ ಗುರುನಾಥ ನಾ.ಉಳ್ಳಿಕಾಶಿ, ಬಾಂಬ್ ಸ್ಫೋಟ ಪ್ರಕರಣ ರಾಷ್ಟ್ರದ ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿಯಾಗಿದೆ. ದೆಹಲಿ ಹಾಗೂ ಕೇಂದ್ರ ಸರ್ಕಾರದ ಗುಪ್ತಚರ ವೈಫಲ್ಯವಾಗಿದೆ ಎಂದು ತಿಳಿಸಿದ್ದಾರೆ.
ಎಬಿವಿಪಿ: ಬಾಂಬ್ ಸ್ಫೋಟವನ್ನು ಎಬಿವಿಪಿ ನಗರ ಘಟಕ ತೀವ್ರವಾಗಿ ಖಂಡಿಸಿದೆ. ಯುಪಿಎ ಸರ್ಕಾರ ಭಯೋತ್ಪಾದಕರನ್ನು ಮಟ್ಟ ಹಾಕುವುದಕ್ಕಾಗಿ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿಲ್ಲ ಎಂಬುದಕ್ಕೆ ಪದೇ ಪದೇ ಸಂಭವಿಸುತ್ತಿರುವ ಸ್ಫೊಟಗಳೇ ಕಾರಣ ಸಾಕ್ಷಿ ಎಂದು ಘಟಕದ ಕಾರ್ಯದರ್ಶಿ ಶ್ರೀನಿಧಿ ನಾಡಜೋಶಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.