ADVERTISEMENT

ನಡೆಯದ ಗ್ರಾಮಸಭೆ: ಸೊರಗಿದ ಗ್ರಾಮಗಳು

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 6:23 IST
Last Updated 15 ಜೂನ್ 2013, 6:23 IST

ಗುಡಗೇರಿ: ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಅನುದಾನ ನೀಡಿ ಬಾಪೂಜಿಯವರ ಗ್ರಾಮ ಸ್ವರಾಜ್ ಕಲ್ಪನೆಯನ್ನು ಸಾಕಾರಗೊಳಿಸಲು ಸರ್ಕಾರ ಕೋಟಿಗಟ್ಟಲೆ ಅನುದಾನ ನೀಡುತ್ತಿದ್ದರೂ ಗ್ರಾಮಗಳ ಚಿತ್ರಣ ಇನ್ನೂ ಬದಲಾಗಿಲ್ಲ. ಇದಕ್ಕೆ ಕುಂದಗೋಳ ತಾಲ್ಲೂಕು ಕೂಡ ಹೊರತಾಗಿಲ್ಲ.

ಪಂಚಾಯ್ತಿ ಅಧಿನಿಯಮದ ಅನ್ವಯ ಗ್ರಾಮ ಪಂಚಾಯ್ತಿಗಳು ಪ್ರತಿ ವರ್ಷ ಕಡ್ಡಾಯವಾಗಿ ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳನ್ನು ನಡೆಸಬೇಕು. ಪ್ರತಿ ವಾರ್ಡುಗಳಲ್ಲಿ ಸಭೆ ಮಾಡಿ ಅಲ್ಲಿನ ಮೂಲಸೌಲಭ್ಯ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಶಿಫಾರಸು ಮಾಡಿ, ನಂತರ ನಡೆಯುವ ಗ್ರಾಮಸಭೆಗಳಲ್ಲಿ ಅನುಮೋದನೆ ಪಡೆದು ಆಯ್ಕೆ ಮಾಡಬೇಕು.

ಕುಂದಗೋಳ ತಾಲ್ಲೂಕಿನಲ್ಲಿ ಒಟ್ಟು 22 ಗ್ರಾಮ ಪಂಚಾಯ್ತಿಗಳಿದ್ದು ಗ್ರಾಮ ಸಭೆಗಳು ಕಾಲಕಾಲಕ್ಕೆ ನಡೆಯುತ್ತಿಲ್ಲ. ಇದರಲ್ಲಿ ಕೇವಲ 14 ಜನ ಪಿಡಿಓಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿಯೇ ಒಬ್ಬ ಪಿಡಿಓ ಕಲಘಟಗಿಗೆ ನಿಯೋಜನೆಗೊಂಡರೆ, ಮತ್ತೊಬ್ಬರು ಅಮಾನತುಗೊಂಡ ಕಾರಣ ಹುಬ್ಬಳ್ಳಿ ತಾಲ್ಲೂಕಿಗೆ ವರ್ಗಾಯಿಸಿದ್ದಾರೆ. ಇಬ್ಬರು ಅನಾರೋಗ್ಯ ರಜೆ ಮೇಲಿದ್ದಾರೆ.

ಉಳಿದೆಲ್ಲ 10 ಪಿಡಿಓಗಳಿದ್ದು, ಖಾಲಿ ಇರುವ ಪಿಡಿಓಗಳ ಸ್ಥಾನಕ್ಕೆ ತಾತ್ಕಾಲಿಕವಾಗಿ ಪಿಡಿಓಗಳನ್ನು ನಿಯೋಜಿಸಿದ್ದೇವೆ ಎಂದು ತಾ.ಪಂ ವ್ಯವಸ್ಥಾಪಕ ಅಶೋಕ ತೇರಣಿ ಪ್ರಜಾವಾಣಿಗೆ ವಿವರಿಸಿದರು.
ಆದರೆ ಕೆಲ ಗ್ರಾಮ ಪಂಚಾಯ್ತಿಗಳಲ್ಲಿ ಕಾಟಾಚಾರಕ್ಕೆ ಮಾತ್ರ ಗ್ರಾಮಸಭೆ ನಡೆದಿವೆ. ಇತ್ತೀಚಿಗಷ್ಟೆ ತಾಲೂಕಿನ ಮತ್ತಿಗಟ್ಟಿ ಗ್ರಾ.ಪಂದಲ್ಲಿ ಸುಮಾರು 70 ಲಕ್ಷ ರೂಪಾಯಿಗಳ ಅವ್ಯವಹಾರ ಆಗಿದೆ ಎಂದು ಗ್ರಾಮಸ್ಥರು ಪ್ರತಿಭಟಿಸಿದ್ದರು.

`ಅಧಿಕಾರ ವಿಕೇಂದ್ರೀಕರಣವು ಸಂಪೂರ್ಣ ವಿಫಲವಾಗಿದ್ದು, ಬಹುತೇಕ ಯೋಜನೆಗಳು ಗ್ರಾಮಸಭೆಯಲ್ಲಿ ಆಯ್ಕೆಯಾಗುವದು ಅಪರೂಪವಾಗಿದೆ. ಮತ್ತು ಸಭೆಗೆ ಬೇಕಾದ ಒಂದು ಅಜೆಂಡಾ ಇರುವುದಿಲ್ಲ. ಇದರಿಂದ ಸಭೆಯು ಗೊಂದಲದ ಗೂಡಾಗುತ್ತದೆ' ಎಂದು ಗುಡಗೇರಿಯ ಗ್ರಾಮಾಭಿವೃದ್ಧಿ ಸಮತಿ ಅಧ್ಯಕ್ಷ ಹಾಗೂ ನಿವೃತ್ತ ಕಾರ್ಮಿಕ ಇಲಾಖೆಯ ಎಸ್.ಎಫ್. ಬೆಂಗೇರಿ ಬೇಸರಿಸಿದರು.

`ಮೊದಲಿನ ಗ್ರಾಮ ಪಂಚಾಯ್ತಿಗಳು ಈಗಿಲ್ಲ. ಅಂದು ಸೇವಾ ಮನೋಭಾವದಿಂದ ಜನಪ್ರತಿನಿಧಿಗಳು ಆಯ್ಕೆಯಾಗುತ್ತಿದ್ದರು. ಅಂದಿನ ಮಂಡಲ ಪಂಚಾಯ್ತಿಯ ಅಧ್ಯಕ್ಷ ಸಿದ್ಲಿಂಗಪ್ಪ ಹುಲ್ಲತ್ತಿ ಸ್ವತಃ ತಾವೇ ಸಲಿಕೆಯಿಂದ ಗ್ರಾಮದಲ್ಲಿನ ಗಟಾರಗಳನ್ನು ಸ್ವಚ್ಛ ಮಾಡುತ್ತಿದ್ದರು. ಅದರಂತೆ ಮಳೆಗಾಲ ಪೂರ್ವ ಕೆಸರಾಗಬಾರದೆಂದು ಹಳ್ಳದ ಉಸುಕನ್ನು ಗ್ರಾಮದ ರಸ್ತೆ ತುಂಬೆಲ್ಲ ಹರಡುತ್ತಿದ್ದರು ಎಂದು ಹನಮಂತಗೌಡ ತಿಮ್ಮನಗೌಡ್ರ ಸ್ಮರಿಸಿ, ದಿವಂಗತ ಶಾಂತಿನಾಥ ಬಸ್ತಿ, ಸಿ.ಬಿ.ಹಿರೇಗೌಡ್ರ, ಮುದಕಪ್ಪ ಬಡ್ನಿ ಮುಂತಾದವರ ಸೇವೆಯನ್ನು ಜನ ಇನ್ನೂ ಸ್ಮರಿಸುತ್ತಿದ್ದಾರೆ ಎಂದರು.

`ಜನರು ಗ್ರಾಮಸಭೆಗಳ ಬಗ್ಗೆ ವಿಶ್ವಾಸ, ಭರವಸೆ ಕಳೆದುಕೊಂಡಿದ್ದಾರೆ' ಎಂದು ಹರ್ಲಾಪುರದ ಎಸ್.ಎಸ್. ಹಿರೇಮಠ ಅಭಿಪ್ರಾಯಪಟ್ಟರು.

`ನಮ್ಮ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಗ್ರಾಮ ಸಭೆಗಳಾಗಿಲ್ಲ. ಗ್ರಾಮದಲ್ಲಿನ ರಸ್ತೆ, ಗಟಾರಗಳಂತೂ ಕೆಟ್ಟು ಹಾಳಾಗಿ ಹೋಗಿವೆ ಎಂದು ಗುಡೇನಕಟ್ಟಿಯ ಬಸವರಾಜ ಯೋಗಪ್ಪನವರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.