ADVERTISEMENT

`ನಾಟಕ ಅನುವಾದ: ಸ್ಥಳೀಯ ಸೊಗಡಿರಲಿ'

ಡಿ.ಎಸ್.ಚೌಗಲೆ ಅವರ ಏಳು ಕೃತಿಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 8:29 IST
Last Updated 10 ಜೂನ್ 2013, 8:29 IST

ಧಾರವಾಡ: `ಬೇರೆ ಭಾಷೆಯ ನಾಟಕ ಅಥವಾ ಇತರೆ ಸಾಹಿತ್ಯ ಕೃತಿಗಳನ್ನು ಅನುವಾದ ಮಾಡುವ ಸಂದರ್ಭದಲ್ಲಿ ಯಥಾವತ್ ಅನುವಾದ ಮಾಡದೇ, ಇಲ್ಲಿಯ ಭಾಷೆಯ ಸೊಗಡನ್ನೂ ಸೇರಿಸಬೇಕು. ಅಂತಹ ಸ್ವಾತಂತ್ರ್ಯವನ್ನು ಅನುವಾದಕರು ಬಳಸಿಕೊಳ್ಳಬೇಕು' ಎಂದು ಹಿರಿಯ ನಾಟಕಕಾರ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಸಲಹೆ ನೀಡಿದರು.

ರಂಗಪರಿಸರ, ಸಿರವರ ಪ್ರಕಾಶನದ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಡಿ.ಎಸ್.ಚೌಗಲೆ ಅವರ ಏಳು ನಾಟಕಗಳಾದ ದಿಶಾಂತರ, ಕಸ್ತೂರ ಬಾ, ಉಚಲ್ಯಾ, ಗಾಂಧಿ ವಿರುದ್ಧ ಗಾಂಧಿ, ಪೇಯಿಂಗ್ ಗೆಸ್ಟ್, ಗಾಂಧಿ ಅಂಬೇಡ್ಕರ್ ಹಾಗೂ ಕಿರುವಂತ್ ನಾಟಕಗಳ ಸಂಪುಟವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

`ಬಸವಪ್ಪಶಾಸ್ತ್ರಿಗಳು ಅನುವಾದ ಮಾಡಿದ ಶಾಕುಂತಲ ಮೂಲ ಕಾಳಿದಾಸನದಾದರೂ ಅನುವಾದದಲ್ಲಿ ಬಳಸಿದ ಅದ್ಭುತ ಭಾಷೆಯಿಂದಾಗಿ ಅದು ಬಸವಪ್ಪಶಾಸ್ತ್ರಿಗಳದೇ ನಾಟಕವೆನಿಸುತ್ತದೆ. ಬೇರೆ ಭಾಷೆಗೆ ಅನುವಾದ ಮಾಡುವುದು ಎಂದರೆ ಆ ಭಾಷೆಗೆ ತಕ್ಕಂತೆ ಹೊಂದಿಸುವುದೇ ಆಗಿದೆ' ಎಂದರು.

`ರಾಜಕೀಯ ನಾಯಕರು ಕನ್ನಡ-ಮರಾಠಿ ಭಾಷೆಗೆ ಸಂಬಂಧಿಸಿದಂತೆ ಜಗಳ ಆಡುತ್ತಿರುವ ಹೊತ್ತಿನಲ್ಲಿ ಚೌಗಲೆ ಅವರು ಮರಾಠಿ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಭಾಷಾ ಬಾಂಧವ್ಯವನ್ನು ಬೆಳೆಸುತ್ತಿದ್ದಾರೆ' ಎಂದು ಶ್ಲಾಘಿಸಿದರು.

ಡಾ.ಡಿ.ಎಸ್.ಚೌಗಲೆ ಮಾತನಾಡಿ, `ಮರಾಠಿ ಭಾಷೆ, ರಂಗಭೂಮಿ ಮತ್ತಿತರ ಸಾಂಸ್ಕೃತಿಕ ಕ್ಷೇತ್ರಗಳು ಜೀವಂತವಾಗಿರಲು ಕಾರಣ ಮರಾಠಿ ಅಸ್ಮಿತೆ ಎಂಬುದನ್ನು ನನ್ನ ಗುರುಗಳಾದ ಡಾ.ಎಂ.ಎಂ.ಕಲಬುರ್ಗಿ ಹೇಳುತ್ತಾರೆ' ಎಂದು ನುಡಿದರು.

`ಶಿವಾಜಿ ಎಂಬ ಅಸ್ಮಿತೆ ಇಡೀ ಮರಾಠಿ ಜನತೆಗೆ ಜೀವಂತಿಕೆಯಂತೆ ಕಾಣುತ್ತಿದೆ. ಆದರೆ ನಮ್ಮಲ್ಲಿ ಅಂತಹ ಅಸ್ಮಿತೆಯ ಕೊರತೆ ಇದ್ದು, ಬರೀ ಕಂದರಗಳೇ ತುಂಬಿವೆ' ಎಂದು ವಿಷಾದಿಸಿದರು.

ಡಾ.ಶಶಿಧರ ನರೇಂದ್ರ ಕೃತಿ ಪರಿಚಯ ಮಾಡಿದರು. ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.