ADVERTISEMENT

ನಿಂತಿದೆ ಬದುಕಿನ ಜಟಕಾ ಬಂಡಿ...!

ಹಬ್ಬಕ್ಕೆ ಬಂದ ಅಳಿಯನನ್ನೂ ಹೊಡೆದು ಕರೆದೊಯ್ದ ಪೊಲೀಸರು: ಆಕ್ರೋಶ

ಗುರು ಪಿ.ಎಸ್‌
Published 5 ಆಗಸ್ಟ್ 2016, 6:58 IST
Last Updated 5 ಆಗಸ್ಟ್ 2016, 6:58 IST
ಪತಿ ಶಿವಪ್ಪ ಚಲವಾದಿ ಜೈಲಿನಿಂದ ಶೀಘ್ರ ಬಿಡುಗಡೆಯಾಗಿ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಪತ್ನಿ ಲಕ್ಷ್ಮವ್ವ ಚಲವಾದಿ ಮತ್ತು ಮಗಳು
ಪತಿ ಶಿವಪ್ಪ ಚಲವಾದಿ ಜೈಲಿನಿಂದ ಶೀಘ್ರ ಬಿಡುಗಡೆಯಾಗಿ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಪತ್ನಿ ಲಕ್ಷ್ಮವ್ವ ಚಲವಾದಿ ಮತ್ತು ಮಗಳು   

ಯಮನೂರು (ಹುಬ್ಬಳ್ಳಿ): ಆ ಓಣಿಯಲ್ಲಿ ಜಟಕಾ ಗಾಡಿಗಳು ಸಾಲುಗಟ್ಟಿ ನಿಂತಿವೆ. ಹಬ್ಬಕ್ಕೆಂದು ತವರು ಮನೆಗೆ ಬಂದಿದ್ದ ಆ ಮಹಿಳೆಯ ಮುಖ ಕಳೆಗುಂದಿದೆ. ಮಕ್ಕಳನ್ನು ಆಟವಾಡುವುದಕ್ಕೆ ಹೊರಗೆ ಕಳುಹಿಸಲೂ ಆ ಮನೆಯವರು ಹೆದರುತ್ತಿದ್ದಾರೆ.

ಇವು ನವಲಗುಂದ ತಾಲ್ಲೂಕಿನ ಯಮನೂರಿನಲ್ಲಿ ಕಂಡು ಬರುವ ದೃಶ್ಯಗಳು. ಪೊಲೀಸರು ಲಾಠಿ ಪ್ರಹಾರ ನಡೆಸಿ ವಾರ ಕಳೆದರೂ, ಈ ಊರಿನಲ್ಲಿ ಇನ್ನೂ ಆತಂಕದ ವಾತಾವರಣವಿದೆ. ಈ ನಡುವೆಯೂ, ಇಲ್ಲಿನ ಬೆಣ್ಣಿಹಳ್ಳದಿಂದ ದರ್ಗಾದವರೆಗೆ ಜಟಕಾ ಗಾಡಿ ಬಾಡಿಗೆ ಓಡಿಸುತ್ತಿದ್ದ ಕುಟುಂಬದವರು ಬೇರೆಯದೇ ಸಮಸ್ಯೆ ಎದುರಿಸುತ್ತಿದ್ದಾರೆ.

‘ಇಲ್ಲಿನ ಚಾಂಗದೇವ ದರ್ಗಾಕ್ಕೆ ಜಿಲ್ಲೆಯ ವಿವಿಧ ಕಡೆಗಳಿಂದ ಭಕ್ತರು ಬರುತ್ತಿದ್ದರು. ಬೆಣ್ಣಿಹಳ್ಳದಿಂದ ದರ್ಗಾಕ್ಕೆ ನಾವು ಜಟಕಾ ಗಾಡಿಯನ್ನು ಬಾಡಿಗೆಗೆ ಓಡಿಸುವ ಕೆಲಸ ಮಾಡುತ್ತೇವೆ. ಮಹಾದಾಯಿ ಹೋರಾಟದಲ್ಲಿ ಪೊಲೀ­ಸ­ರಿಂದ ಲಾಠಿ ಪ್ರಹಾರ ನಡೆದಾಗಿನಿಂದ ಯಮನೂರಿಗೆ ಬಹಳಷ್ಟು ಜನ ಬರುತ್ತಿಲ್ಲ.

  ಕಳೆದ ವಾರ ದೌರ್ಜನ್ಯ ನಡೆ­ಸಿ­ರುವ ಪೊಲೀಸರು ಕೆಲವು ಗಾಡಿಗಳ ಮುಂಭಾಗವನ್ನೂ ಮುರಿದಿದ್ದಾರೆ’ ಎಂದು ಬಸಪ್ಪ ಗುಡ್ಡಪ್ಪ ಚಲವಾದಿ ದೂರಿದರು.
‘ಒಂದು ಸೀಟ್‌ಗೆ ₹4 ಅಥವಾ ₹5 ತೆಗೆದುಕೊಳ್ಳುತ್ತೇವೆ. ದಿನಕ್ಕೆ ಗರಿಷ್ಠ ₹200 ದುಡಿಯುತ್ತಿದ್ದೆವು. ಆದರೆ, ಸುಮಾರು 15 ದಿನಗಳಿಂದ ವ್ಯಾಪಾರವೇ ಇಲ್ಲ. ಯಮನೂರಿನಲ್ಲಿ ನಡೆದ ಘಟನೆ ದೊಡ್ಡ ಸುದ್ದಿಯಾದ ನಂತರವಂತೂ ಹೊರಗಿನ ಯಾರೂ ಕಾಲಿಟ್ಟಿಲ್ಲ’ ಎಂದು ಅವರು ಅಳಲು ತೋಡಿಕೊಂಡರು.

‘ನಮ್ಮ ಮನೆಯಲ್ಲಿ ಎರಡು ಜಟಕಾ ಗಾಡಿಗಳಿವೆ. ಅಕ್ಕ–ಪಕ್ಕದ ಮನೆಗಳ­ಲ್ಲಿರುವ ಗಾಡಿಗಳೂ ಸೇರಿದಂತೆ, ಹತ್ತಕ್ಕೂ ಹೆಚ್ಚು ಜಟಕಾ ಗಾಡಿಗಳು ಗ್ರಾಮದಲ್ಲಿವೆ. ಜಟಕಾ ಗಾಡಿ ಓಡಿಸುತ್ತಿದ್ದವರನ್ನೂ ಕಳೆದ ವಾರ ಬಂಧಿಸಿರುವ ಪೊಲೀಸರು ಅವರನ್ನು ಜೈಲಿನಲ್ಲಿಟ್ಟಿದ್ದಾರೆ. ಇದನ್ನೇ ಜೀವನೋ­ಪಾಯ ಮಾಡಿಕೊಂಡಿದ್ದ ಕುಟುಂಬ­ಗಳಿಗೆ ತೀವ್ರ ತೊಂದರೆ­ಯಾಗಿದೆ ಎಂದು ಬಸಪ್ಪ ಹೇಳಿದರು.

ಅಮಾಯಕರನ್ನೂ ಎಳೆದೊಯ್ದರು: ‘ಪಂಚಮಿ ಹಬ್ಬಕ್ಕಂತ ವಾರ ಮುಂಚೆ ತವರ ಮನಿಗೆ ಬಂದಿದ್ದೆ. ನನ್ನ ಜೋಡಿ ನನ್‌ ಗಂಡಾನೂ ಬಂದಿದ್ದ. ಅವತ್ತು ಸಂಜಿ ಇದ್ದಕ್ಕಿದ್ದಂಗ ಮನಿಯೊಳಗ ನುಗ್ಗಿದ ಪೊಲೀಸರು ನಮ್ಮಪ್ಪ, ಗಂಡಂಗ ಹೊಡದ್ರು..ಯಾಕ್‌ ಹೊಡಿತೀರಿ ಅಂತಾ ಕೇಳೂ ಮುಂಚೀನ ಕರ್ಕೊಂಡು ಹೋದ್ರು’ ಎಂದು ಸವದತ್ತಿಯ ಹೂಲಿಯಿಂದ ಯಮನೂರಿನ ತಾಯಿಯ ಮನೆಗೆ ಬಂದಿರುವ ಲಕ್ಷ್ಮವ್ವ ಚಲವಾದಿ ಹೇಳಿದರು.

‘ನನ್‌ ಗಂಡ (ಶಿವಪ್ಪ ಚಲವಾದಿ) ಯಾರ್ ತಂಟಿಗೂ ಹೋಗಾಂವ ಅಲ್ಲ. ಊರಿಗೆ ಬಂದ್ರ ಓಣಿಯಿಂದ ಹೊರಗೂ ಕಾಲಿಡಲ್ಲ. ಅಂಥವನನ್ನ ಪೊಲೀಸ್ರು ಕರ್ಕೊಂಡ ಹೋಗ್ಯಾರ. ಅಪ್ಪ ಯಾವಾಗ ಬರ್ತಾನ ಅಂತಾ ಮಗಳು ಹಗಲೆಲ್ಲ ಕೇಳ್ತಾಳ. ಏನ ಹೇಳ್ಬೇಕೋ ಗೊತ್ತಾಗವಲ್ದು’ ಎಂದು ಅವರು ಅಳಲು ತೋಡಿಕೊಂಡರು.

*
ಲಾಠಿಪ್ರಹಾರ ನಡೆದ ದಿನದಿಂದ ಯಮನೂರಿನ ಕಡೆಗೆ ಹೊರ­ಗಿ­ನ­ವರು ಬರಲು ಹೆದರುತ್ತಿದ್ದಾರೆ. ಗಲಾಟೆಯಲ್ಲಿ ಜಟಕಾ ಗಾಡಿಗಳೂ ಮುರಿದಿದ್ದು, ಬದುಕು ನಡೆಸಲು ಕಷ್ಟವಾಗಿದೆ
-ಬಸಪ್ಪ ಚಲವಾದಿ, ಯಮನೂರು ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT