ADVERTISEMENT

ನಿಗದಿ: ನೀರೆಂಬೊ ಕನಸಿನ ಬೆನ್ನೇರಿ...

ಮನೋಜ ಕುಮಾರ್ ಗುದ್ದಿ
Published 9 ಏಪ್ರಿಲ್ 2013, 7:09 IST
Last Updated 9 ಏಪ್ರಿಲ್ 2013, 7:09 IST

ನಿಗದಿ (ತಾ.ಧಾರವಾಡ): ಜಿಲ್ಲಾ ಕೇಂದ್ರ ಧಾರವಾಡ ಹಾಗೂ ಪಕ್ಕದ ಉತ್ತರ ಕನ್ನಡ ಜಿಲ್ಲೆಯ ತಾಲ್ಲೂಕು ಕೇಂದ್ರ ಹಳಿಯಾಳವನ್ನು ಸಂಪರ್ಕಿಸುವ ನಿಗದಿ ಗ್ರಾಮಸ್ಥರು ಕಳೆದ ಮೂರು ತಿಂಗಳಿಂದ ಕುಡಿಯುವ ನೀರಿಗಾಗಿ ಸರಹೊತ್ತಿನಲ್ಲಿ ಓಣಿ ಓಣಿ ಅಲೆಯುತ್ತಿದ್ದಾರೆ. ರಾತ್ರಿ ವೇಳೆ ಹಾವು, ಚೇಳುಗಳ ದಾಳಿಯ ಸಂಭವನೀಯತೆಯನ್ನೂ ಗಣನೆಗೆ ತೆಗೆದುಕೊಳ್ಳದೇ ಹನಿ ನೀರು ಪಡೆಯಲು ಗ್ರಾಮದ ಮಹಿಳೆಯರು ಹಾಕುತ್ತಿರುವ ಶ್ರಮವೇ ಯಾತನಮಯವಾಗಿದೆ.

ಗ್ರಾಮದಲ್ಲಿ ನಾಲ್ಕು ಬೋರ್‌ವೆಲ್‌ಗಳಿವೆ. ಹಾಗೆಂದು ಕುಡಿಯುವ ನೀರಿನ ತಾಪತ್ರಯ ಕಳೆದಿಲ್ಲ. ದೇವರ ಹುಬ್ಬಳ್ಳಿ ಲೈನ್‌ನ ಕರೆಂಟ್ ಯಾವಾಗ ಬರುತ್ತದೋ ಗೊತ್ತಿಲ್ಲ. ಪ್ರತಿದಿನವೂ ನೀರಿಗಾಗಿಯೇ ದೂರ ದೂರದ ಓಣಿಗಳಿಗೆ ಹೋಗಬೇಕಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಅವರನ್ನು ವಿಚಾರಿಸಿದರೆ ಈ ಬಗ್ಗೆ ಅವರು ತಲೆಯೇ ಕೆಡಿಸಿಕೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಇಲ್ಲಿನ ಮಹಿಳೆಯರು.

ಗಂಡಸರು ದುಡಿಯಲು ಹೋದರೆ ಮನೆಗೆ ನೀರು ತುಂಬಬೇಕಾದವರು ಮಹಿಳೆಯರೇ. ಹಾಗಾಗಿ, ನಿಗದಿ ಗ್ರಾಮದ ಎಲ್ಲೆಡೆಯೂ ಖಾಲಿ ಕೊಡಗಳನ್ನು ಹಿಡಿದ ಮಹಿಳೆಯರೇ ಕಾಣಸಿಗುತ್ತಾರೆ.

ರಸ್ತೆಯ ಬದಿಯ ಗಟಾರಿನಲ್ಲಿ ಅಳವಡಿಸಲಾದ ನಳದಲ್ಲಿ ಬರುವ ಹನಿ ಹನಿ ನೀರಿಗಾಗಿ ಹತ್ತಾರು ಮಹಿಳೆಯರು ತಲಾ ಎರಡು ಕೊಡಗಳಂತೆ ಹಿಡಿದು ನಿಂತಿರುತ್ತಾರೆ. ಇಲ್ಲಿ ನೀರು ಕಡಿಮೆ ಯಾಯಿತೋ, ಮತ್ತೊಂದು ಕಡೆ ನೀರಿಗಾಗಿ ಓಡಾಡುವ ತಾಪತ್ರಯದಲ್ಲಿ ಅವರು ಸಿಲುಕಿಕೊಂಡಿದ್ದಾರೆ.

ತಾವು ದಿನವೂ ಅನುಭವಿಸುವ ನೀರಿನ ಬವಣೆಯನ್ನು ಗ್ರಾಮದ ಅನ್ನಪೂರ್ಣ ಜುಲ್ಪಿ ಎಂಬ ಮಹಿಳೆ ವಿವರಿಸುವುದು ಹೀಗೆ, `ಸಟ್ಟ ಸರ ಹೊತ್ತಿನಲ್ಲಿ ಕರೆಂಟ್ ಬರ್ತಾವು. ಯಾವುದೋ ಓಣಿಯೊಳಗ ನೀರು ಬಂದೈತಿ ಅಂತ ಗೊತ್ತಾದ ಕೂಡ್ಲೇನ ನೀರು ಹಿಡಿಯೋದಿಕ್ಕೆ ಓಡಬೇಕು. ಮೊನ್ನೆ ರಾತ್ರಿ 1ಕ್ಕೆ ನೀರು ತರೂ ವ್ಯಾಳೆದಾಗ ನಳದ ಕೆಳಗ ಇಷ್ಟು ದಪ್ಪ ಹಾವು ಇತ್ತು. ಬ್ಯಾಟರಿ ಹಾಕಿ ನೋಡಿದ ಕೂಡ್ಲೇನ ಸರದ ಹೋತು. ಇಲ್ಲಾಂದ್ರ ನನ್ನ ಜೀವಾನ ಹೊಕ್ಕಿತ್ತು. ರಾತ್ರಿ ಹೊತ್ತು ಹೆಣ್ಮಕ್ಳನ್ನ ನೀರು ಹಿಡಿಯೋದಕ್ಕೆ ಹಚ್ತಾರಲ್ಲ. ಸರ್ಕಾರದವ್ರ ಬುದ್ಧಿ ಎಲ್ಲಿ ಇಟ್ಟಾರ್ರಿ..?'

ಇನ್ನು ಶಿವಕ್ಕ ಕಂಬಳಿ ಹೇಳುವುದು ಇನ್ನೊಂದು ಕಥೆ, `ನೀವ ನೋಡ್ತಿದ್ದೀರಲ್ಲ ನಾವು ನೀರ ಹಿಡಿಯೂದ ಗಟಾರದಾಗ. ಅಂದರ ಕುಡಿಯೂದು ಗಟಾರ ನೀರ ಅಂದಂಗ. ಆದರ ಅದನ್ನ ಕುಡಿದು ಬದುಕೂನು ಅಂದ್ರೂ ಸರಿಯಾಗಿ ನೀರ ಬಿಡೋದಿಲ್ಲ. ಒಂದ 10-12 ಕೊಡ ತುಂಬಿದೂ ಅಂದ್ರ ಮತ್ತ ತಾಸಿನ ಮ್ಯಾಲ ನೀರು ಪೈಪ್‌ನಿಂದ ಜಿನುಗತಾವು. ಅದಕ್ಕ ಏನಾದ್ರೂ ಪರಿಹಾರ ಮಾಡ್ರಿ ಅಂದರ ಪಂಚಾಯ್ತಿ ಮಂದಿ ನಮ್ಮ ಮಾತನ್ನು ಕಿವಿಗೆ ಹಾಕ್ಕೋಳೋದಿಲ್ಲ. ಎಂಎಲ್‌ಎ ಸಂತೋಷ್ ಲಾಡ್ ಅವರು ಬರೀ ಹೆಲಿಕಾಪ್ಟರ್‌ನ್ಯಾಗ ಹಾರಾಡ್ತಾ ಇರೋ ಬದಲು, ಇಲ್ಲಿ ಬಂದು ನಮ್ಮ ನೀರಿನ ಸಮಸ್ಯೆಯನ್ನೂ ಕೇಳುವ ಕೆಲಸ ಮಾಡಬೇಕು' ಎಂದು ಹರಿಹಾಯ್ದರು.
`ರಾತ್ರಿ ಬೆಕ್ಕ ಕೂಗಿದರೂ ನಾವು ನೀರು ಬಂದಿರಬೇಕು ಅನಕೊಂಡು ಬಿಂದಿಗ ತಗೊಂಡು ಹೋಗಬೇಕು. ಇದು ಯಾವಾಗ ನಿಲ್ಲತದೋ' ಎಂದು ಕಾಶವ್ವ ಹಳಿಯಾಳ ವಿಷಾದದಿಂದ ನುಡಿದರು.

ಆದರೆ ಇಷ್ಟೆಲ್ಲ ನೀರಿನ ಬವಣೆ ಇದ್ದರೂ ಅದು ಪಂಚಾಯಿತಿ ಮಂದಿಯನ್ನು ತಲುಪಿಲ್ಲ ಎಂಬುದು ಪಂಚಾಯಿತಿ ಕಾರ್ಯದರ್ಶಿ ಅವರನ್ನು `ಪ್ರಜಾವಾಣಿ' ಪ್ರಶ್ನಿಸಿದಾಗ ತಿಳಿದು ಬಂತು.

ನಿಮ್ಮೂರಲ್ಲಿ ನೀರಿನ ಸಮಸ್ಯೆ ಇದೆಯೇ? ಎಂದಾಗ ಗ್ರಾ.ಪಂ. ಕಾರ್ಯದರ್ಶಿ ಎಂ.ವಿ. ಬಡಿಗೇರ, `ಅಂಥದ್ದೇನೂ ನೀರಿನ ಸಮಸ್ಯೆ ಇಲ್ಲ. ನಮ್ಮಲ್ಲಿ ನಾಲ್ಕು ಬೋರ್‌ವೆಲ್ ಇವೆ. ಸಾಕಷ್ಟು ನೀರು ಬರುತ್ತದೆ' ಎಂದರು.

ಅಷ್ಟರಲ್ಲಿಯೇ ಮಹಿಳೆಯರು ಖಾಲಿ ಕೊಡ ಹಿಡಿದು ಪಂಚಾಯಿತಿ ಕಚೇರಿಗೆ ಬಂದರು. ಅವರಿಗೆ ಉತ್ತರಿಸಬೇಕಿದ್ದ ಬಡಿಗೇರ, ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಲು ದೂರವಾಣಿ ಕರೆ ಮಾಡಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.