ADVERTISEMENT

ನಿಪ್ಪಾಣಿ ಜಿಲ್ಲೆಯಾಗಲಿ: ಪಾಪು

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 9:15 IST
Last Updated 10 ಜುಲೈ 2013, 9:15 IST

ಧಾರವಾಡ: `ರಾಜ್ಯದ ಬಂದುರತೆಗೆ (ಸಮಗ್ರತೆಗೆ) ಯಾವ ರೀತಿಯಿಂದಲೂ ಧಕ್ಕೆಯಾಗದಂತೆ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು' ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪಾಟೀಲ ಪುಟ್ಟಪ್ಪ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

`ಬೆಳಗಾವಿ ಜಿಲ್ಲೆ ನಿರ್ವಿವಾದವಾಗಿಯೂ ನಮ್ಮ ರಾಜ್ಯದ ಎಲ್ಲ ಜಿಲ್ಲೆಗಳಿಗಿಂತಲೂ ದೊಡ್ಡದು. ಅದು ವಿಭಜನೆಗೊಳ್ಳಬೇಕು. ಅದರ ಬಗ್ಗೆ ಎರಡು ಅಭಿಪ್ರಾಯಗಳಿಲ್ಲ. ಆದರೆ, ಬೆಳಗಾವಿ ಜಿಲ್ಲೆ ವಿಭಜನೆ, ರಾಜ್ಯದ ಇನ್ನುಳಿದ ಜಿಲ್ಲೆಗಳ ವಿಭಜನೆಯಂತೆ ಅಲ್ಲ. ಬೆಳಗಾವಿ ಜಿಲ್ಲೆ ವಿಭಜನೆಯಲ್ಲಿ ರಾಜ್ಯದ ಬಂದುರತೆ ಪ್ರಶ್ನೆ ಅಡಕವಾಗಿದೆ.

ಸದ್ಯದ ಬೆಳಗಾವಿ ಜಿಲ್ಲೆಯಲ್ಲಿ ಎರಡು ದೊಡ್ಡ ಮಹಾನಗರಗಳು ಇವೆ. ಒಂದು ಬೆಳಗಾವಿ, ಇನ್ನೊಂದು ನಿಪ್ಪಾಣಿ. ಬೆಳಗಾವಿ ದಕ್ಷಿಣದಲ್ಲಿದ್ದರೆ, ನಿಪ್ಪಾಣಿ ಉತ್ತರದಲ್ಲಿದೆ. ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕೆಂದೊಡನೆ ಎರಡನೇ ಜಿಲ್ಲೆ ಸ್ಥಳ ಚಿಕ್ಕೋಡಿ ಆಗಬೇಕೆಂದು ಕೆಲವರು, ಗೋಕಾಕ ಆಗಬೇಕೆಂದು ಕೆಲವರು ಹೇಳುತ್ತಾರೆ. ಬೈಲಹೊಂಗಲ ಆಗಬೇಕೆಂದು ಕೂಡ ಕೇಳುವವರು ಕಾಣಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಚಿಕ್ಕೋಡಿ ಆಗಲಿ ಗೋಕಾಕ ಆಗಲಿ ಎಲ್ಲಿಯೂ ಹೋಗುವುದಿಲ್ಲ. ಅವು ಕರ್ನಾಟಕದಲ್ಲಿಯೇ ಉಳಿಯುತ್ತವೆ.

ಆದರೆ, ನಿಪ್ಪಾಣಿಯ ಪ್ರಶ್ನೆ ಚಿಕ್ಕೋಡಿ ಇಲ್ಲವೆ ಗೋಕಾಕದಂತೆ ಅಲ್ಲ. ಅದು ಸಂಪೂರ್ಣ ಮರಾಠಿ ಭಾಷೆಯ ತಾಲ್ಲೂಕು ಆಗುತ್ತದೆ. ಅದು ಜಿಲ್ಲೆ ಆಗುವುದಾದರೆ, ತಾನು ಎಲ್ಲಿಯೂ ಹೋಗುವುದಿಲ್ಲ ಕರ್ನಾಟಕದಲ್ಲಿಯೇ ಉಳಿಯುವುದಾಗಿ ಹೇಳುತ್ತದೆ. ಅಲ್ಲಿಯ ಜನರೂ ಕೂಡ ಅಷ್ಟೆ. ಒಂದು ವೇಳೆ ಅದು ಜಿಲ್ಲೆ ಆಗದೇ ಹೋದರೆ, ವಿಭಜನೆ ಮನೋಭಾವನೆ ಅಲ್ಲಿಯ ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಅದು ಜಿಲ್ಲೆ ಆಗದೇ ಹೋದರೆ, ತಾನು ಮಹಾರಾಷ್ಟ್ರಕ್ಕೆ ಹೋಗಬೇಕು ಎನ್ನುವ ಭಾವನೆಗೆ ಪುಷ್ಟಿ ಲಭಿಸುತ್ತದೆ. ಅದು ಕೊಲ್ಲಾಪುರಕ್ಕೆ ಹೋದರೆ, ಆ ಜಿಲ್ಲೆಯಲ್ಲಿ ಅದು ಒಂದು ತಾಲ್ಲೂಕು ಆಗಬಹುದು.

ಆದರೆ, ಕರ್ನಾಟಕದಲ್ಲಿ ಉಳಿದು ಅದು ಒಂದು ಜಿಲ್ಲೆ ಆಗುವುದಾದರೆ, ತಾನು ಎಲ್ಲಿಯೂ ಹೋಗುವುದಿಲ್ಲ. ಕರ್ನಾಟಕದಲ್ಲಿಯೇ ಉಳಿಯುತ್ತೇನೆ ಎಂದು ಅದು ಹೇಳಬಹುದು. ತಾಲ್ಲೂಕು ಆಗಿರುವುದಕ್ಕಿಂತಲೂ ಜಿಲ್ಲೆ ಆಗುವುದಕ್ಕೆ ಹೆಚ್ಚಿನ ಬೆಲೆ ಇದೆ. ಜಿಲ್ಲೆ ಆಗುವುದರಿಂದ ನಿಪ್ಪಾಣಿಯ ವಾಣಿಜ್ಯ, ಉದ್ಯೋಗಗಳು ಬೆಳೆಯುತ್ತವೆ. ಆದ್ದರಿಂದ ತಾವು ಕರ್ನಾಟಕದಲ್ಲಿಯೇ ಉಳಿಯುವುದಾಗಿ ಅಲ್ಲಿಯವರು ಹೇಳುತ್ತಾರೆ. ನಿಪ್ಪಾಣಿ ಜಿಲ್ಲೆ ಆಗುವುದಾದರೆ ಅದಕ್ಕೆ ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಅಥಣಿ ಈ ತಾಲ್ಲೂಕುಗಳಲ್ಲದೇ ನೂತನವಾಗಿ ರಚಿಸಿಕೊಳ್ಳಬೇಕಾದ ಸಂಕೇಶ್ವರ ಹಾಗೂ ಹಾರೂಗೇರಿ  ಹೊಸ ತಾಲ್ಲೂಕಾಗಿ ನಿಪ್ಪಾಣಿ ಜಿಲ್ಲೆಗೆ ಸೇರ್ಪಡೆ ಆಗುತ್ತವೆ. ನಿಪ್ಪಾಣಿ ತಾಲ್ಲೂಕು ಆಗುವುದರಿಂದ ಸದ್ಯದ ಬೆಳಗಾವಿ ಜಿಲ್ಲೆಯ ಯಾವ ಪ್ರದೇಶವೂ ಮಹಾರಾಷ್ಟ್ರಕ್ಕೆ ಹೋಗದಂತೆ ತಡೆಗೋಡೆ ನಿರ್ಮಿಸಿದಂತೆ ಆಗುತ್ತದೆ.

ಬೆಳಗಾವಿ ವಿಭಜಿಸುವ ಪ್ರಶ್ನೆ, ರಾಜ್ಯದ ಏಕತೆಯ ಪ್ರಶ್ನೆಗೆ ಯಾವ ರೀತಿಯಿಂದಲೂ ಬಾಧೆ ತರಲಾರದು. ಇದನ್ನು ಎಲ್ಲ ವರ್ಗದ ಜನರೂ ಗಮನಿಸಬೇಕು. ಇಲ್ಲದೇ ಹೋದರೆ ಅವರೆಲ್ಲರೂ ಸೇರಿ ಕರ್ನಾಟಕಕ್ಕೆ ಬಹು ದೊಡ್ಡ ದ್ರೋಹ ಬಗೆದಂತೆ ಆಗುತ್ತದೆ. ಆದ್ದರಿಂದ ಚಿಕ್ಕೋಡಿಯವರಾಗಲಿ, ಗೋಕಾಕದವರಾಗಲಿ ರಾಜ್ಯದ ಬಂದುರತೆ ದೃಷ್ಟಿಯಿಂದ ನಿಪ್ಪಾಣಿ ಜಿಲ್ಲೆ ಆಗಬೇಕೆಂದು ಹೇಳಲೇಬೇಕು. ರಾಜ್ಯದ ಬಂದುರತೆಯನ್ನು ಕಾಯ್ದುಕೊಳ್ಳಲು ಇದನ್ನು ಬಿಟ್ಟು ಬೇರೆ ಮಾರ್ಗವೇ ಇಲ್ಲ' ಎಂದು ಡಾ.ಪಾಟೀಲ ಪುಟ್ಟಪ್ಪ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.