ADVERTISEMENT

ನಿರಂತರ ಮಳೆಗೆ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 8:59 IST
Last Updated 13 ಸೆಪ್ಟೆಂಬರ್ 2013, 8:59 IST

ಕುಂದಗೋಳ: ಕಳೆದ ಮೂರು ದಿನ­ಗಳಿಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಸಂತಸದ ವಾತಾವರಣ ಮೂಡುತ್ತಿದೆ. ಶೇಂಗಾ, ಬಿಳಿಜೋಳ ಮತ್ತು ಹತ್ತಿಬೆಳೆಗೆ ಮಳೆಯ ಅಗತ್ಯವಿದ್ದು, ಮಳೆಯಿಂದ ಅನುಕೂಲವಾಗಿದೆ. ಆದರೆ ಕೈಗೆ ಬಂದಿದ್ದ ಹೆಸರು, ಕೊತ್ತಂಬರಿ ಬೆಳೆಗೆ ಹಾನಿಯಾಗಿದೆ.

ಹೊಲಗಳಲ್ಲಿ ಮಳೆ ನೀರು ನಿಂತಿದೆ. ಕೆಲವು ಕೆರೆ ಕಟ್ಟೆಗಳು ತುಂಬಿವೆ. ಇದರಿಂದಾಗಿ ರೈತರಲ್ಲಿದ್ದ ಆತಂಕದ ವಾತಾ­ವರಣ ಸ್ವಲ್ಪ ಮಟ್ಟಿಗೆ ಕಡಿಮೆ­ಯಾಗಿದೆ. ಹೊಲಗಳಲ್ಲಿ ನೀರು ನಿಂತು ಕಾಲಿಡದಂತಾಗಿದೆ. ಬಿತ್ತಿದ ಬೆಳೆಗಳು ನಳನಳಿಸುವಂತಾಗಿವೆ. 

ಗುಡುಗು ಮಿಂಚು ಸಹಿತ ಮಳೆ ಎಡೆಬಿಡದೆ ಸುರಿದ ಮಳೆಗೆ ತಾಲ್ಲೂಕಿ­ನಲ್ಲಿ ಮಲೆನಾಡಿನ ವಾತಾವರಣ ನಿರ್ಮಾ­ಣವಾಗಿದೆ. ಕೊಯ್ಲಿಗೆ ಬಂದಿದ್ದ ಹೆಸರು, ಹಲಸಂದಿ, ಕೊತ್ತಂ­ಬರಿ ಬೆಳೆದ ಹೊಲದಲ್ಲಿ ನೀರು ನಿಂತು ಹಾಳಾಗಿವೆ. ಆದರೆ ಬಹುತೇಕ ರೈತರು ಮಳೆಗೆ ಮುನ್ನವೇ ಕೊಯ್ಲು ಮಾಡಿದ್ದ­ರಿಂದ ನಷ್ಟದಿಂದ ಪಾರಾಗಿದ್ದಾರೆ.

ಇದಕ್ಕೆ ಪ್ರತಿಯಾಗಿ ಮಳೆಯಿಂದ ಹತ್ತಿ, ಬಿಳಿ ಜೋಳ ಮತ್ತು ಶೇಂಗಾ ಬೆಳೆಗೆ ಹೆಚ್ಚಿನ ಲಾಭವಾಗಿದೆ. ಒಣಗಿ ಹೋಗು­ತ್ತಿದ್ದ ಬೆಳೆಗಳಿಗೆ ಮಳೆ ಆಸರೆಯಾಗಿದೆ. ರೈತರಿಗೆ ಸಂತಸ ತಂದಿದೆ.

ಗುಡೇನಕಟ್ಟಿ, ಬೆನಕನಹಳ್ಳಿ, ಹಿರೇ­ನರ್ತಿ, ಚಿಕ್ಕನತಿರ್, ಯರಗುಪ್ಪಿ, ಶಿರೂರು, ಸಂಶಿ, ಪಶುಪತಿಹಾಳ, ಗುಡಗೇರಿ, ಯಲಿವಾಳ, ಹೊಸಕಟ್ಟಿ, ಹಂಚಿ­ನಾಳ, ಗುರುವಿನಹಳ್ಳಿ, ಮಳಲಿ, ಕುಂಕೂರು ಗ್ರಾಮಗಳಲ್ಲಿ ಮಳೆ ಹೆಚ್ಚಾಗಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತದಿಂದಾಗಿ ಮಳೆಯ ವಾತಾವ­ರಣ ನಿರ್ಮಾಣವಾಗಿದೆ. ಇನ್ನೂ ಒಂದು ವಾರ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಕೃಷಿ ಅಧಿಕಾರಿ­ಗಳು ತಿಳಿಸಿದ್ದಾರೆ. ಇದೇ ವಾತಾವರಣ ಮುಂದುವರಿದರೆ ಬೆಳೆಗೆ ರೋಗ ಆವರಿಸಿಕೊಳ್ಳುವ ಆತಂಕವೂ ರೈ­ತರನ್ನು ಕಾಡುತ್ತಿದೆ. ಮಳೆಯಿಂದಾಗಿ 12 ಮನೆಗಳು ಕುಸಿದಿವೆ. ಹಾನಿಗೆ ಪರಿಹಾರ ನೀಡು­ವಂತೆ ಸಂತ್ರಸ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.