ADVERTISEMENT

ನಿವೇಶನಗಳ ಮಾಹಿತಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 6:22 IST
Last Updated 5 ಸೆಪ್ಟೆಂಬರ್ 2013, 6:22 IST

ಧಾರವಾಡ: ಅವಳಿ ನಗರದ ಪ್ರಮುಖ ಸ್ಥಳಗಳಲ್ಲಿರುವ ಸಾರಿಗೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಖಾಲಿ ನಿವೇಶನಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಲು ಅನುವಾಗುವಂತೆ ಅವುಗಳ ವಿವರವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, `ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣ ಹೊಸ ಬಸ್ ನಿಲ್ದಾಣಗಳ ಬಳಿಯ ಜಾಗ ಸಾಕಷ್ಟು ಬೆಲೆ ಬಾಳುತ್ತದೆ. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ಆ ಜಾಗವನ್ನು ಸುಮ್ಮನೇ ಉಳಸಿಕೊಳ್ಳುವ ಬದಲು ವಾಣಿಜ್ಯ ಉದ್ದೇಶಗಳಿಗೆ ನೀಡಬೇಕು. ಇದರಿಂದ ಸಂಸ್ಥೆಯ ಆದಾಯವೂ ಹೆಚ್ಚಾಗುತ್ತದೆ. ಸಂಸ್ಥೆಯ ಅಧೀನದಲ್ಲಿ ನೂರಾರು ಎಕರೆ ಭೂಮಿ ಇದ್ದರೂ ಹಾಗೇ ಬಿಟ್ಟಿರುವುದು ಸರಿಯಲ್ಲ. ಇದಕ್ಕೆ ಅಧಿಕಾರಿಗಳ ಮುಂದಾಲೋಚನೆ ಕೊರತೆಯೇ ಕಾರಣ' ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

`15 ವೋಲ್ವೊ ಬಸ್‌ಗಳನ್ನು ಖರೀದಿಸಿದರೆ ಆ ಸಂಸ್ಥೆಯವರು ಒಂದು ಬಸ್ ಉಚಿತವಾಗಿ ಗ್ರಾಹಕರಿಗೆ ನೀಡುತ್ತಾರೆ. ಆದರೆ ಸಾರಿಗೆ ಸಂಸ್ಥೆಯವರು ಸರಿಯಾಗಿ ಚೌಕಾಸಿ ಮಾಡದ ಕಾರಣ 15 ಬಸ್‌ಗಳನ್ನೇ ನೀಡುತ್ತಾರೆ. ನಾವು ಆ ಸಂಸ್ಥೆಗೆ ಬಸ್ ಉತ್ಪಾದಿಸಲು ಬೇಡಿಕೆ ಸಲ್ಲಿಸುತ್ತೇವೆ. ಅದರಿಂದ ಅವರ ಕಂಪೆನಿಗೂ ಲಾಭವಾಗುತ್ತದೆ. ಹೀಗಾಗಿ ಅವರಿಂದ ಹೆಚ್ಚಿನ ಸೌಲಭ್ಯ ನಿರೀಕ್ಷಿಸುವುದು ತಪ್ಪೇನೂ ಅಲ್ಲ. ಆದರೆ ಅಧಿಕಾರಿಗಳು ಇದನ್ನು ಮಾಡುವುದೇ ಇಲ್ಲ.

ವರ್ಷಕ್ಕೆ 5000 ಟೈರ್‌ಗಳನ್ನು ಸಂಸ್ಥೆಯೊಂದರಿಂದ ಖರೀದಿಸುವ ಸಂಸ್ಥೆ ಪಾವತಿಸಬೇಕಾದ ಮೊತ್ತದಲ್ಲಿ ಕಡಿತಗೊಳಿಸುವಂತೆ ಕೇಳುವುದೇ ಇಲ್ಲ. ಸಾರಿಗೆ ಸಂಸ್ಥೆ ಹಾಗೂ ಬಸ್, ಇತರ ಬಿಡಿ ಭಾಗಗಳನ್ನು ಖರೀದಿಸುವ ಸಂದರ್ಭದಲ್ಲಿ ಯಾವ ಬಗೆಯ `ವ್ಯವಹಾರ' ನಡೆಯುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ' ಎಂದು ಮಾರ್ಮಿಕವಾಗಿ ಹೇಳಿದರು.

`ನಿಮಿಷಕ್ಕೆ ಸರಾಸರಿ ಎಷ್ಟು ಬಸ್‌ಗಳು ಓಡಾಡುತ್ತವೆ' ಎಂಬ ಪ್ರಶ್ನೆಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಬಳಿ ಉತ್ತರ ಇರಲಿಲ್ಲ. ಇದರಿಂದ ಬೇಸರಗೊಂಡ ಸಚಿವರು, `ಹಲವು ವರ್ಷದಿಂದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನಿಮಗೇ ಗೊತ್ತಿಲ್ಲ ಎಂದರೆ ನೀವೇಕೆ ಈ ಕೆಲಸ ಮಾಡುತ್ತಿದ್ದೀರಿ. ನಿಮಗೆ ಬಂದ ಫೈಲನ್ನು ಮುಂದೆ ಸಾಗಹಾಕುವುದಷ್ಟೇ ನಿಮ್ಮ ಕೆಲಸವೇ' ಎಂದು ಟೀಕಿಸಿದರು.

ಹುಬ್ಬಳ್ಳಿಯ ರಾಣಿ ಚನ್ನಮ್ಮ ವೃತ್ತದಿಂದ ಬಸ್ ನಿಲ್ದಾಣಕ್ಕೆ ಬರಲು ಸಾವಿರಾರು ಪ್ರಯಾಣಿಕರು ಸಂಕಟ ಪಡುತ್ತಾರೆ. ಅಲ್ಲಿ ಸರಿಯಾದ ಸೌಕರ್ಯ ಕಲ್ಪಿಸಲು ಆಗಿಲ್ಲವೇಕೆ ಎಂದೂ ಪ್ರಶ್ನಿಸಿದರು. ಧಾರವಾಡ ವಿಭಾಗಕ್ಕೆ ಹೆಚ್ಚುವರಿ  ಬಸ್ ಡಿಪೊ ಬೇಕು ಎಂದು ಮನವಿ ಮಾಡಿದ ಅಧಿಕಾರಿಗೆ, `ಜಾಗ ಗುರುತಿಸಿರುವಿರಾ'? ಎಂದರು. ಆ ಅಧಿಕಾರಿ, `ಕೆಐಎಡಿಬಿ)ಯವರು ನೀಡುತ್ತಾರಲ್ಲ' ಎಂದರು. ಇದರಿಂದ ಸಿಟ್ಟಿಗೆದ್ದ ಲಾಡ್, `ಅಲ್ರೀ ನಿಮಗೆ ಅನುಕೂಲವಾದ ಜಾಗವನ್ನು ನೀವು ಗುರುತಿಸಬೇಕು. ಕೆಐಎಡಿಬಿಯವರು ಭೂಸ್ವಾಧೀನ ಮಾಡುತ್ತಾರಷ್ಟೇ' ಎಂದು ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, `ಯಾವ ಇಲಾಖೆಗೆ ಎಲ್ಲೆಲ್ಲಿ ನಿವೇಶನ ಬೇಕಾಗಿದೆಯೋ ಅದರ ಪ್ರಸ್ತಾವನೆಯೊಂದಿಗೆ ಕಚೇರಿಗೆ ಬನ್ನಿ' ಎಂದರು. ಆರೋಗ್ಯ ಇಲಾಖೆಯ ಅಧಿಕಾರಿಗಳು ವರದಿ ಒಪ್ಪಿಸಿದ ಸಂದರ್ಭದಲ್ಲಿ, `ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ಆನ್‌ಲೈನ್ ವ್ಯವಸ್ಥೆಯಡಿ ತಂದರೆ ಎಲ್ಲೆಲ್ಲಿ ವೈದ್ಯರ ಅಗತ್ಯವಿದೆಯೋ ಅಲ್ಲಿಗೆ ಬೇರೆ ಊರಿಂದ ಕಳಿಸಬಹುದು' ಎಂದು ಸಚಿವ ಲಾಡ್ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.