ADVERTISEMENT

ನಿವೇಶನ ರಹಿತರಿಂದ ಪಾದಯಾತ್ರೆ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 4:50 IST
Last Updated 2 ಅಕ್ಟೋಬರ್ 2012, 4:50 IST

ಹುಬ್ಬಳ್ಳಿ: ನಿವೇಶನ ನೀಡುವಂತೆ ಆಗ್ರಹಿಸಿ ನವನಗರದಲ್ಲಿರುವ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಕಚೇರಿ ಮುಂಭಾಗದಲ್ಲಿ ನಿವೇಶನರಹಿತರ ಆಂದೋಲನ ವತಿಯಿಂದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ನಿವೇಶನರಹಿತರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಕಿಮ್ಸ ಪ್ರವೇಶ ದ್ವಾರದಲ್ಲಿರುವ ಮಹಾತ್ಮಾಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಘೋಷಣೆ ಕೂಗುತ್ತಾ ಪಾದಯಾತ್ರೆ ಮೂಲಕ ಪ್ರತಿಭಟನಾಕಾರರು ಹುಡಾ ಕಚೇರಿವರೆಗೆ ತೆರಳಿದರು.

ಹುಡಾ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಂಚಾಲಕ ನಾಗರಾಜ ಗುರಿಕಾರ ಮಾತನಾಡಿ, `ನಿವೇಶನರಹಿತರು ಪಾದಯಾತ್ರೆ ಮೂಲಕ ಮನವಿ ಸಲ್ಲಿಸಿ ತಮ್ಮ ಅಹವಾಲು ಸಲ್ಲಿಸಲಿದ್ದೇವೆ ಎಂದು ಹುಡಾ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದರೂ ಅವರು ತಪ್ಪಿಸಿಕೊಂಡಿದ್ದಾರೆ. ಹುಡಾ ಬಡವರ ವಿರೋಧಿ ನೀತಿ ಅನುಸರಿಸುತ್ತಿದೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು. 

`ನಿವೇಶನ ಬೇಡಿಕೆಯ ಸಮೀಕ್ಷೆ ಎಂಬ ಸರ್ವೇ ಹೆಸರಿನಲ್ಲಿ 2010ರಲ್ಲಿ ಹುಡಾ ಜಾಹೀರಾತು ನೀಡಿ, ರೈತರ ಜಮೀನು ಸ್ವಾಧೀನಪಡಿಸಿಕೊಂಡು ನಿವೇಶನ ನಿರ್ಮಿಸಿ ಮಾರಾಟ ಮಾಡುವ ಉದ್ದೇಶ ಹೊಂದಿತ್ತು. ಆದರೆ ಭೂಸ್ವಾಧೀನ, ರೈತರಿಗೆ ಪರಿಹಾರ ಮತ್ತಿತರ ವಿಧಿವಿಧಾನ ಪೂರ್ತಿಯಾಗಲು ಹೆಚ್ಚು ಸಮಯ ಬೇಕಾಗುತ್ತದೆ ಮತ್ತು ಅಷ್ಟೊತ್ತಿಗೆ ನಿವೇಶನದ ಬೆಲೆಯೂ ದುಬಾರಿಯಾಗುತ್ತದೆ. ಇದರಿಂದ ಬಡವರಿಗೆ ಪ್ರಯೋಜನವಾಗುವುದಿಲ್ಲ ಎಂದು ಆಂದೋಲನದ ಮೂಲಕ ಭೂಸ್ವಾಧೀನ ಕೈಬಿಡುವಂತೆ ಒತ್ತಾಯಿಸಲಾಗಿತ್ತು~ ಎಂದರು.

`ಅದರ ಬದಲು ಕಂದಾಯ ಇಲಾಖೆಯ ಒಡೆತನದಲ್ಲಿರುವ ಪಟ್ಟಾ ಭೂಮಿಯಲ್ಲಿ ನಿವೇಶನ ನಿರ್ಮಿ ಸಿಕೊಟ್ಟರೆ ಅನುಕೂಲವಾಗುತ್ತದೆ. ಪ್ರಾಧಿಕಾರ ಇಂತಹ ಭೂಮಿ ಪಡೆಯಲು ಕಂದಾಯ ಇಲಾಖೆಗೆ ಬೇಡಿಕೆ ಕಳುಹಿಸಬೇಕು. ರಾಯನಾಳದಲ್ಲಿರುವ 16 ಸರ್ವೆ ನಂಬರಿನ ಅಡಿಯಲ್ಲಿ `ಡಿ~ ವರ್ಗದ ಸರ್ಕಾರಿ ಜಮೀನು ಇದ್ದು, ಅದನ್ನು ನಿವೇಶನರಹಿತರಿಗೆ ನೀಡುವಂತೆ ಒತ್ತಾಯಿಸಲಾಗಿತ್ತು~ ಎಂದರು.

`ಈ ಬಗ್ಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಇತ್ತೀಚೆಗೆ ಸಂಪರ್ಕಿಸಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ರಾಯನಾಳದಲ್ಲಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂದು ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ. ಆದರೆ ಆ ಜಮೀನು ಅರಣ್ಯ ಇಲಾಖೆ ಸೇರಿದ್ದಲ್ಲ ಎಂದು ಸ್ಪಷ್ಟಪಡಿಸುವ ದಾಖಲೆಗಳನ್ನು ಈಗಾಗಲೇ ಹುಡಾಕ್ಕೆ ಸಲ್ಲಿಸಲಾಗಿದೆ~ ಎಂದರು. `ಮನೆ ನಿವೇಶನ ನಿರ್ಮಿಸಿಕೊಡುವ ನಮ್ಮ ಒತ್ತಾಯವನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಬೇಕು~ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜು ಹಿರೇವಡೆಯರ, ಕಿರಣ ರಜಪೂತ, ನಾಗರಾಜ ನಾಡಕರ್ಣಿ, ರಾಮು ನೀರಲಗಿ, ದೂರಪ್ಪ ಗಾಂಡೋಳ್ಕರ, ಶಂಕರ ಕಬಾಡೆ, ಮಂಜುನಾಥ ಉಳ್ಳಾಗಡ್ಡಿ, ಎಸ್.ಆರ್. ರಾಯ್ಕರ್, ಕಮಲಾ ಪೂಜಾರ, ಶಮಿನಬಾನು ಹುಡೇದ, ಹೇಮಲತಾ ಹೂಲಗೇರಿ, ಸರೋಜ ಸುಳ್ಳದ ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ಡಿಸಿಪಿ ಎಸ್.ಎಂ. ಪ್ರತಾಪನ್, ಶ್ರೀನಾಥ ಜೋಶಿ ಎಸಿಪಿಗಳಾದ ಎ.ಆರ್.ಬಡಿಗೇರ, ಎನ್.ಎಸ್.ಪಾಟೀಲ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.