ADVERTISEMENT

ನೆಟ್ ಪರೀಕ್ಷೆಗೆ 10,530 ವಿದ್ಯಾರ್ಥಿಗಳು

ಜೂನ್ 30ರಂದು ಪರೀಕ್ಷೆ; 46 ವಿಷಯಗಳು

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 10:30 IST
Last Updated 22 ಜೂನ್ 2013, 10:30 IST

ಧಾರವಾಡ: ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್), ಕಿರಿಯ ಸಂಶೋಧನಾ ಫೆಲೊ (ಜೆಆರ್‌ಎಫ್) ಪರೀಕ್ಷೆಗಳಿಗೆ ಈ ಬಾರಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ 10,530 ವಿದ್ಯಾರ್ಥಿಗಳು ಹಾಜರಾಗಲಿದ್ದು, ಪರೀಕ್ಷೆಯು ಇದೇ 30ರಂದು ನಗರದ ನಾಲ್ಕು ಕೇಂದ್ರಗಳಲ್ಲಿ ನಡೆಯಲಿದೆ.

ನಗರದ ಅಂಜುಮನ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು, ಕಿಟೆಲ್ ವಿಜ್ಞಾನ ಕಾಲೇಜು, ಕರ್ನಾಟಕ ವಿಜ್ಞಾನ ಕಾಲೇಜು ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಅಂದು ಪರೀಕ್ಷೆಗಳು ನಡೆಯಲಿವೆ. ಈ ಬಾರಿ ವಿದ್ಯಾರ್ಥಿಗಳು 46 ವಿಷಯಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ನೆಟ್ ಪರೀಕ್ಷಾ ಸಂಯೋಜಕ ಹಾಗೂ ಕವಿವಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಡಾ.ಜೆ.ಎಂ.ನಾಗಯ್ಯ ತಿಳಿಸಿದ್ದಾರೆ.

ಜೆಆರ್‌ಎಫ್/ ನೆಟ್ ಪರೀಕ್ಷೆಗೆ ಆನ್‌ಲೈನ್ ಅರ್ಜಿ ತುಂಬಿ ವಿಶ್ವವಿದ್ಯಾಲಯಕ್ಕೆ ಅರ್ಜಿ ಹಾಗೂ  ಅಟೆಂಡನ್ಸ್ ಸ್ಲಿಪ್ ಕಳುಹಿಸದೇ ಇರುವ ಅಭ್ಯರ್ಥಿಗಳು ಆಯಾ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ತಮ್ಮ ಪ್ರವೇಶ ಪತ್ರದ ಮೂಲಪ್ರತಿ ಹಾಗೂ ಅಟೆಂಡನ್ಸ್ ಸ್ಲಿಪ್ ಅನ್ನು ಪರೀಕ್ಷೆ ಆರಂಭವಾಗುವ ಮೊದಲು ಕಡ್ಡಾಯವಾಗಿ  ಸಲ್ಲಿಸಬೇಕು. ಪರೀಕ್ಷಾ ಕೇಂದ್ರ ಹಾಗೂ ಇತರ ಮಾಹಿತಿಗಾಗಿ ಕರ್ನಾಟಕ ವಿಶ್ವವಿದ್ಯಾಲಯದ ವೆಬ್‌ಸೈಟ್ www.kud.ac.in ಹಾಗೂ ಕವಿವಿ ನೆಟ್ ವಿಭಾಗದ ದೂರವಾಣಿ ಸಂಖ್ಯೆ 0836-2215 216ನ್ನು ಸಂಪರ್ಕಿಸಬಹುದು.

ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರಿ ಕುಸಿತ:
ನೆಟ್/ ಜೆಆರ್‌ಎಫ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಈ ವರ್ಷ ಭಾರಿ ಇಳಿಮುಖವಾಗಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ 15,403 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಬಾರಿ ಕೇವಲ 10,530 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಳೆದ ಬಾರಿ 49 ವಿಷಯಗಳಿದ್ದರೆ, ಈ ಬಾರಿ 46 ವಿಷಯಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.