ADVERTISEMENT

ಪಹಣಿ ವಿತರಣೆ ಸ್ಥಗಿತ: ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 7:14 IST
Last Updated 12 ಜೂನ್ 2013, 7:14 IST

ಮಾಯಕೊಂಡ: ಮಾಯಕೊಂಡದ ಜನಸ್ನೇಹಿ ಕೇಂದ್ರ ಸಮರ್ಪಕವಾಗಿ ಪಹಣಿ ವಿತರಿಸದಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬೀರಗೊಂಡ್ರ ಹನುಮಂತಪ್ಪ ಆರೋಪಿಸಿದರು.

ಇಲ್ಲಿನ ಜನಸ್ನೇಹಿ ಕೇಂದ್ರ ಪಹಣಿ ವಿತರಿಸುವುದನ್ನು ಸ್ಥಗಿತಗೊಳಿಸಿದ್ದರಿಂದ ರೈತರಿಗೆ ಆಗುತ್ತಿರುವ ತೊಂದರೆ ಕುರಿತು ಸೋಮವಾರ ಉಪ ತಹಶೀಲ್ದಾರ್ ರಾಮಣ್ಣ ಅವರೊಂದಿಗೆ ಚರ್ಚಿಸಿ ಅವರು ಮಾತನಾಡಿದರು.

`ಮಾಯಕೊಂಡದ ಜನಸ್ನೇಹಿ ಕೇಂದ್ರ ಆರಂಭದಿಂದ ಇಂದಿನವರೆಗೂ ಎಂದೂ ಸರಿಯಾಗಿ ಪಹಣಿ ವಿತರಿಸುತ್ತಿಲ್ಲ. ಒಂದೆರಡು ದಿನ ಬಂದರೆ ನಾಲ್ಕೈದು ದಿನ ಪಹಣಿ ಬರುವುದಿಲ್ಲ. ಸುತ್ತಮುತ್ತಲ ಗ್ರಾಮಗಳ ರೈತರಿಗೆ ತುಂಬಾ ತೊಂದರೆಯಾಗಿದೆ. ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ. ಬರ ಪರಿಹಾರ ಹಣ ಬಿಡುಗಡೆಯಾಗಿದ್ದು, ಅದನ್ನು ಪಡೆಯಲು ಪಹಣಿ ಅವಶ್ಯಕವಿದೆ. 

ರೈತರು ಹೊಲ-ಮನೆ ಕೆಲಸ ಬಿಟ್ಟು ದಾವಣಗೆರೆಗೆ ಹೋಗಿ ಪಹಣಿ ತರಲು ಕಾಯಬೇಕು. ಹಲವು ಬಾರಿ ಮನವಿ ಮಾಡಿದ್ದೇವೆ. ನೀವೇನು ಮಾಡುತ್ತಿದ್ದೀರಿ' ಎಂದು ಉಪ ತಹಶೀಲ್ದಾರ್ ರಾಮಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಡಳಿತ ಕೂಡಲೇ ಪಹಣಿ ಒದಗಿಸಿ ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ಹೋರಾಟದ ಹಾದಿ ಹಿಡಿಯಬೆಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುಟ್ಟರಂಗ ಸ್ವಾಮಿ, ನಟರಾಜ್ ಮತ್ತು ಪಹಣಿ ಪಡೆಯಲು ಬಂದಿದ್ದ ರೈತರು ಉಪ ತಹಶೀಲ್ದಾರ್ ರಾಮಣ್ಣ ಮತ್ತು ಕಂದಾಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಉಪ ತಹಶೀಲ್ದಾರ್ ರಾಮಣ್ಣ ಮಾತನಾಡಿ, ಈ ರೀತಿ ಪಹಣಿ ವಿತರಣೆಯಲ್ಲಿ ವ್ಯತ್ಯಯವಾಗಿ ರೈತರಿಗೆ ತೊಂದರೆಯಾಗಿದೆ. ಹಿರಿಯ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಏಜೆನ್ಸಿಯವರ ಗಮನಕ್ಕೆ ತಂದಿದ್ದೇನೆ. ಆದರೂ, ಇದೇ ಸ್ಥಿತಿ ಮುಂದುವರೆದಿರುವುದು ನೋವುಂಟು ಮಾಡಿದೆ. ತಹಶೀಲ್ದಾರ್ ಜೊತೆ ಚರ್ಚಿಸಿ ಸೂಕ್ತ  ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.