ADVERTISEMENT

ಪಾಲಿಕೆ ಸದಸ್ಯನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 9:55 IST
Last Updated 25 ಫೆಬ್ರುವರಿ 2012, 9:55 IST

ಹುಬ್ಬಳ್ಳಿ: ದೇವಸ್ಥಾನವೊಂದರ ಕಂಪೌಂಡ್‌ಗೆ ಮೂತ್ರ ವಿಸರ್ಜಿಸುತ್ತಿದ್ದ ಯುವಕನೊಬ್ಬನಿಗೆ ಬುದ್ಧಿ ಹೇಳಿದ್ದ ಪಾಲಿಕೆ ಸದಸ್ಯ ನಿಂಗಪ್ಪ ಬಡಿಗೇರ ಅವರ ಮೇಲೆ 15-20 ಜನರು ಹಲ್ಲೆ ನಡೆಸಿದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.

ನಗರದ ಕಾಳಮ್ಮನ ಅಗಸಿಯಲ್ಲಿಯ ಕಾಳಮ್ಮನ ದೇವಸ್ಥಾನದ ಕಂಪೌಂಡ್‌ಗೆ ಯುವಕನೊಬ್ಬ ಮೂತ್ರ ವಿಸರ್ಜಿಸುತ್ತಿದ್ದ ವೇಳೆ ಅಲ್ಲಿಗೆ ಬಂದ ನಿಂಗಪ್ಪ ಬಡಿಗೇರ ತಿಳಿವಳಿಕೆ ಹೇಳಿದ್ದಾರೆ. `ಪ್ರತಿ ಶುಕ್ರವಾರ ಕಾಳಮ್ಮನ ದೇವಸ್ಥಾನಕ್ಕೆ ಭೇಟಿ ಕೊಡುವೆ. ಹಾಗೆಯೇ ಶುಕ್ರವಾರ ಮಧ್ಯಾಹ್ನ 3 ಗಂಟೆ ಹೊತ್ತಿಗೆ ದೇವಸ್ಥಾನದ ಬಳಿ ಬಂದಾಗ ಯುವಕನೊಬ್ಬ ದೇವಸ್ಥಾನದ ಕಂಪೌಂಡ್‌ಗೆ ಮೂತ್ರ ಮಾಡುತ್ತಿದ್ದ. ಹಾಗೆ ಮಾಡಬೇಡವೆಂದು ಹೇಳಿದೆ. ಇಷ್ಟು ದಿನ ಹೇಳಿಲ್ಲ. ಈಗೇಕೆ ಹೇಳುವುದು ಎಂದು ಮೂತ್ರ ಮಾಡಿದ ಯುವಕ ಕೇಳಿ ಅವಾಚ್ಯ ಶಬ್ದಗಳಿಂದ ಬೈದ. ನಂತರ ಮಾತಿಗೆ ಮಾತು ಬೆಳೆಯಿತು. ಆಗ 15-20 ಜನರು ಬಂದು ಹಲ್ಲೆ ಮಾಡಿದರು~ ಎಂದು ನಿಂಗಪ್ಪ ಬಡಿಗೇರ ತಿಳಿಸಿದರು.

ಪ್ರಕರಣ ಕುರಿತು ಅವರು ಸಬರ್ಬನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಾಲಿಕೆ ಸದಸ್ಯರಾದ ಶಿವಾನಂದ ಮುತ್ತಣ್ಣವರ, ಲಕ್ಷ್ಮಣ ಕಲಾಲ್, ಸುಧೀರ ಸರಾಫ ಮೊದಲಾದವರು ಠಾಣೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.