ADVERTISEMENT

ಫಲ ನೀಡಿದ ‘ಗುರೂಜಿ ಗುರುವಾರ’!

ಎಸ್‌ಎಸ್ಎಲ್‌ಸಿ ಫಲಿತಾಂಶ: ಮೂರು ಜಿಲ್ಲೆ ಹಿಂದಿಕ್ಕಿದ ಕಲಘಟಗಿ

ಪ್ರಮೋದ ಜಿ.ಕೆ
Published 9 ಮೇ 2018, 10:14 IST
Last Updated 9 ಮೇ 2018, 10:14 IST

ಹುಬ್ಬಳ್ಳಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ದಲ್ಲಿ ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿಯೇ ಮೊದಲ ಸ್ಥಾನ ಪಡೆದು ಬೀಗುತ್ತಿರುವ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ವಿದ್ಯಾರ್ಥಿಗಳ ಯಶಸ್ವಿನ ಹಿಂದೆ ‘ಗುರೂಜಿ ಬಂದರು ಗುರುವಾರ’, ’ಪಿಕ್‌ನಿಕ್‌ ಫಸಲು’  ಕಾರ್ಯಕ್ರಮಗಳೇ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಫಲಿತಾಂಶದ ಹಿನ್ನೆಲೆಯಲ್ಲಿ ಏರು–ಪೇರು, ಯಾವ ಕಾರಣದಿಂದ ಹಿಂದೆ ಉಳಿದೆವು, ಎಲ್ಲಿ ಹೆಚ್ಚಿನ ಸಾಧನೆಯಾಗಿದೆ, ಇದರ ಹಿಂದೆ ಏನ್ನೆಲ್ಲ ಕಾರಣಗಳಿವೆ ಎಂಬ ಬಗ್ಗೆ  ಶಿಕ್ಷಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳ ಪೈಕಿ ಕಲಘಟಗಿ ತಾಲ್ಲೂಕು ವಿದ್ಯಾರ್ಥಿಗಳೇ ಹೆಚ್ಚು ಫಲಿತಾಂಶ ಪಡೆದಿದ್ದಾರೆ. ತಾಲ್ಲೂಕು ಶೇ 91.67ರಷ್ಟು ಫಲಿತಾಂಶ ಪಡೆದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕು ಶೇ 72.44 ಮತ್ತು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕು ಶೇ 86.01 ಫಲಿತಾಂಶ ಪಡೆದಿದ್ದು, ಈ ಜಿಲ್ಲೆಗಳ ಉಳಿದ ಎಲ್ಲ ತಾಲ್ಲೂಕುಗಳ ಫಲಿತಾಂಶ ಇದಕ್ಕಿಂತಲೂ ಕಡಿಮೆ ಇದೆ.

ADVERTISEMENT

ಧಾರವಾಡ ಜಿಲ್ಲೆಗೆ ಕಲಘಟಗಿ ಮೊದಲ ಸ್ಥಾನ ಪಡೆದು ರಾಜ್ಯದಲ್ಲಿ ಎಂಟನೇ ಸ್ಥಾನ ಹೊಂದಿದೆ. ಧಾರವಾಡ ಗ್ರಾಮೀಣ ರಾಜ್ಯದಲ್ಲಿ 18, ಹುಬ್ಬಳ್ಳಿ ಗ್ರಾಮೀಣ 43ನೇ ಸ್ಥಾನದಲ್ಲಿವೆ.

’ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆಯು ‘ಗುರೂಜಿ ಬಂದರು ಗುರು ವಾರ’ ಕಾರ್ಯಕ್ರಮ ಜಾರಿಗೆ ತಂದಿತ್ತು. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ ಪರಿಣಾಮ ಕಲಘಟಗಿ ತಾಲ್ಲೂಕಿನಲ್ಲಿ ಒಟ್ಟು ಏಳು ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ. ಇದರಲ್ಲಿ ಆರು ಸರ್ಕಾರಿ ಶಾಲೆಗಳೇ ಇರುವುದು ವಿಶೇಷ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಗುರೂಜಿ ಬಂದರು ಗುರುವಾರ’  ಕಾರ್ಯಕ್ರಮದಡಿ ತಾಲ್ಲೂಕಿನ ಎಲ್ಲ ಶಿಕ್ಷಕರು ಪ್ರತಿ ಗುರುವಾರ ಶಾಲಾ ಅವಧಿ ಮುಗಿದ ಬಳಿಕ ವಿದ್ಯಾರ್ಥಿಗಳ ಮನೆಗಳಿಗೆ ತೆರಳುತ್ತಿದ್ದರು. ಪೋಷಕರಿಗೆ ಮಕ್ಕಳ ಶಿಕ್ಷಣದ ಕುರಿತು ಹೇಳುತ್ತಿದ್ದರು. ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸುವಂತೆ ಮನವೊಲಿಸುತ್ತಿದ್ದರು. ಇದರಿಂದ ವಿದ್ಯಾರ್ಥಿಗಳ ಗೈರು ಹಾಜರಿ ಗಣನೀಯವಾಗಿ ಕಡಿಮೆಯಾಯಿತು. ಓದಿನಲ್ಲಿ ಮಕ್ಕಳ ಆಸಕ್ತಿಯೂ ಹೆಚ್ಚಿತು.  ಇದು ಫಲಿತಾಂಶ ಸುಧಾರಣೆಗೆ ಕಾರಣವಾಯಿತು’ ಎಂದು ಅವರು ಹೇಳಿದರು.

‘ಮೊದಲೇ, ವಾರ್ಷಿಕ ಕ್ರಿಯಾ ಯೋಜನೆ ರೂಪಿಸಲಾಗಿತ್ತು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿತ್ತು. ’ಗುರೂಜಿ ಬಂದರು ಗುರುವಾರ’ ಕಾರ್ಯಕ್ರಮದಿಂದಲೂ ವಿದ್ಯಾರ್ಥಿಗಳು, ಪೋಷಕರಿಗೆ ಮತ್ತು ಶಿಕ್ಷಕರಿಗೆ ಸಾಕಷ್ಟು ಅನುಕೂಲವಾಯಿತು’ ಎಂದು ಕಲಘಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಪ್ಪ ಮರಿಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಲಸ್ಟರ್‌ ವ್ಯಾಪ್ತಿಯಲ್ಲಿನ ಶಾಲೆಗಳ ವಿದ್ಯಾರ್ಥಿಗಳನ್ನು ಸೇರಿಸಿ ಆಗಾಗ ‘ಪಿಕನಿಕ್‌ ಫಸಲು’ ಕಾರ್ಯಕ್ರಮ ನಡೆಸಿದ್ದೆವು. ಮಕ್ಕಳಲ್ಲಿ ಸಭಾಕಂಪನ ದೂರವಾಗಲು ಭಾಷಣ, ಗುಂಪು ಚರ್ಚೆ ನಡೆಸಿದ್ದೆವು. ಇದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಾಗಿತ್ತು. ತಾಲ್ಲೂಕಿನ ಸಾಧನೆಯಲ್ಲಿ ಮುಖ್ಯ ಗುರುಗಳ ಹಾಗೂ ಶಿಕ್ಷಕರ ಪಾಲ್ಗೊಳ್ಳುವಿಕೆ ಹೆಚ್ಚಿದೆ’ ಎಂದು ಸಂಭ್ರಮ ವ್ಯಕ್ತಪಡಿಸಿದರು.

‘‌ಧಾರವಾಡ ಜಿಲ್ಲೆಯಲ್ಲಿ 34 ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ. ಈ ಸಾಧನೆ ನಡೆವೆಯೂ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್‌ ಮತ್ತು ಗಣಿತ ವಿಷಯದಲ್ಲಿ ಏಕೆ ಹಿಂದುಳಿದಿದ್ದಾರೆ’ ಎಂದು ಶಿಕ್ಷಕರೊಬ್ಬರು ದೂರಿದ್ದಾರೆ.

ಬೇಗ ಪಠ್ಯ ಮುಗಿಸಿದ್ದು ವರವಾಯಿತು

’ಡಿಸೆಂಬರ್‌ ವೇಳೆಗೆ ಪಠ್ಯ ಪೂರ್ಣಗೊಳಿಸಬೇಕು ಎಂದು ಮೊದಲೇ ಯೋಜನೆ ರೂಪಿಸಿದ್ದೆವು. ಇದರಿಂದ ಪುನರ್‌ ಮನನ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಹೆಚ್ಚು ಸಮಯ ಸಿಕ್ಕಿತು. ಸಾಧಾರಣ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಉತ್ತೀರ್ಣವಾಗಲು ಅಗತ್ಯವಿರುವಷ್ಟು ಓದಿಗೆ ಮೊದಲು ಒತ್ತು ಕೊಡುವಂತೆ ಹೇಳಿದ್ದೆವು’.

’ತರಗತಿಯಲ್ಲಿ ರಸಪ್ರಶ್ನೆ, ವಿಚಾರ ಸಂಕಿರಣ, ಪವರ್‌ಪಾಯಿಂಟ್‌ ಪ್ರಸಂಟೇಷನ್‌ ಮೂಲಕ ಬೋಧನೆ, ಮಾಸಿಕ ಕಿರು ಪರೀಕ್ಷೆ ನಡೆಸುತ್ತಿದ್ದೆವು. ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಕೌನ್ಸೆಲಿಂಗ್ ಮಾಡಿದ್ದೆವು. ಇದರಿಂದ ನಮ್ಮ ಶಾಲೆಗೆ ಶೇ 100ರಷ್ಟು ಫಲಿತಾಂಶ ಬರಲು ಸಾಧ್ಯವಾಯಿತು’
– ಪೂರ್ಣಿಮಾ ಮುಕ್ಕುಂದಿ, ಮುಖ್ಯ ಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ, ಕುರುವಿನಕೊಪ್ಪ

ಶೂನ್ಯ ಫಲಿತಾಂಶ: ಐದು ಶಾಲೆ ಮಾನ್ಯತೆ ರದ್ದು?

ಧಾರವಾಡ/ಹುಬ್ಬಳ್ಳಿ: ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಪಡೆದ ಐದು ಶಾಲೆಗಳಿಗೆ ಕಾರಣ ಕೇಳಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ನೋಟಿಸ್ ಜಾರಿ ಮಾಡಿದ್ದಾರೆ.

ಸರಿಯಾದ ಕಾರಣ ನೀಡದಿದ್ದರೆ ಈ ಶಾಲೆಗಳ ಮಾನ್ಯತೆ ರದ್ದುಪಡಿಸಲು ಇಲಾಖೆಗೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಹಳೇ ಹುಬ್ಬಳ್ಳಿಯ ಈಶ್ವರ ನಗರದ ಜೈಭಾರತ ಎಜುಕೇಷನ್‌ ಸೊಸೈಟಿ, ಧಾರವಾಡದ ಪ್ರತಿಭಾ ಕಾಲೊನಿಯಲ್ಲಿರುವ ಶಾಂತಿನಿಕೇತನ ಇಂಗ್ಲಿಷ್‌ ಮಾಧ್ಯಮ ಶಾಲೆ, ನಗರದ ಗೂಡ್‌ ಶೆಡ್‌ ರಸ್ತೆಯಲ್ಲಿರುವ ಕರ್ನಾಟಕ ತಮಿಳು ಮಾಧ್ಯಮ ಶಾಲೆ, ನವಲಗುಂದ ತಾಲ್ಲೂಕಿನ ಸಿದ್ಧರಾಮೇಶ್ವರ ಶಾಲೆ ಮತ್ತು ಅಣ್ಣಿಗೇರಿಯ ಬಿ.ಸಿ. ದೇಶಪಾಂಡೆ ಶಾಲೆಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ.

‘ಶಿಕ್ಷಕರ ಸರಿಯಾಗಿ ಪಾಠ ಮಾಡಿಲ್ಲ. ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸಿಲ್ಲ. ಹೀಗಾಗಿ ಶೂನ್ಯ ಫಲಿತಾಂಶ ಬರಲು ಕಾರಣ. ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ವಿರುದ್ಧ ಏಕೆ ಶಿಸ್ತು ಕ್ರಮ ತೆಗೆದುಕೊಳ್ಳಬಾರದು’ ಎಂದು ನೋಟಿಸ್‌ನಲ್ಲಿ ಉಪನಿರ್ದೇಶಕ ಎನ್‌.ಎಚ್‌. ನಾಗೂರು ಪ್ರಶ್ನಿಸಿದ್ದಾರೆ.

ಶೂನ್ಯ ಫಲಿತಾಂಶ ಪಡೆದ ಶಾಲೆಗಳಷ್ಟೇ ಅಲ್ಲದೆ ಶೇ 40ಕ್ಕಿಂತಲೂ ಕಡಿಮೆ ಸಾಧನೆ ಮಾಡಿದ ಶಾಲೆಗಳಿಗೂ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.