ಹುಬ್ಬಳ್ಳಿ: ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮಾಜಿ ಮೇಯರ್ ಫಿರ್ದೋಸ್ ಕೊಣ್ಣೂರ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಗುರುವಾರ ಮಧ್ಯಾಹ್ನ ತೊರವಿ ಹಕ್ಕಲ ಸ್ಮಶಾನದಲ್ಲಿ ಇಸ್ಲಾಂ ಧರ್ಮದ ಸಂಪ್ರದಾಯದಂತೆ ನೆರವೇರಿಸಲಾಯಿತು.
ಕೇಶ್ವಾಪುರದ ಮನೆಯಿಂದ ಹೊರಟ ಯಾತ್ರೆ ಕಬರಸ್ತಾನ ಸೇರುವ ಮುಂಚೆ ಹತ್ತಿರದ ಮಸೀದಿ ಆವರಣದಲ್ಲಿಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆಯ ವಿಧಿ-ವಿಧಾನ ಪೂರೈಸಲಾಯಿತು.
ಅಂತ್ಯಸಂಸ್ಕಾರಕ್ಕೂ ಮುನ್ನ ಮೇಯರ್ ಪೂರ್ಣಾ ಪಾಟೀಲ, ಪಾಲಿಕೆ ಸದಸ್ಯರಾದ ಸರೋಜಾ ಪಾಟೀಲ, ಭಾರತಿ ಪಾಟೀಲ, ವಿಜಯಲಕ್ಷ್ಮಿ ಲೂತಿಮಠ, ವಿಜಯಲಕ್ಷ್ಮಿ ಹೊಸಕೋಟಿ ಮತ್ತಿತರರು ಅಂತಿಮ ದರ್ಶನ ಪಡೆದರು.
ಅಂತ್ಯ ಸಂಸ್ಕಾರದಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ, ಉಪ ಮೇಯರ್ ನಾರಾಯಣ ಜರತಾರಘರ, ದೀಪಕ್ ಚಿಂಚೋರೆ, ಡಾ.ಪಾಂಡುರಂಗ ಪಾಟೀಲ, ರಾಜಣ್ಣ ಕೊರವಿ, ಸುಧೀರ್ ಸರಾಫ್, ಶಿವು ಹಿರೇಮಠ, ಯಾಸೀನ್ ಹಾವೇರಿಪೇಟ್, ಹಜರತ್ ಅಲಿ ದೊಡ್ಡಮನಿ, ರಾಘವೇಂದ್ರ ರಾಮದುರ್ಗ ಸೇರಿದಂತೆ ಸುಮಾರು 15ಕ್ಕೂ ಅಧಿಕ ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ನೂರಾರು ಜೆಡಿಎಸ್ ಕಾರ್ಯಕರ್ತರು, ಮುಸ್ಲಿಂ ಸಮುದಾಯದ ಬಾಂಧವರು ಪಾಲ್ಗೊಂಡಿದ್ದರು.
ಸಂತಾಪ: ಅವ್ವ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸಭೆಯಲ್ಲಿ ಫಿರ್ದೋಸ್ ಕೊಣ್ಣೂರ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ, ಕೊಣ್ಣೂರ ಅವರ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು.
ಕೊಣ್ಣೂರ ಅವರ ನಿಧನಕ್ಕೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎನ್.ಪಿ. ಜವಳಿ, ಉಪಾಧ್ಯಕ್ಷರಾದ ವಸಂತ ಲದ್ವಾ, ಅಂದಾನಪ್ಪ ಸಜ್ಜನರ, ಮಹೇಂದ್ರ ಲದ್ದಡ, ಕಾರ್ಯದರ್ಶಿ ವಿಶ್ವನಾಥ ಗಿಣಿಮಾವ, ಜೊತೆ ಕಾರ್ಯದರ್ಶಿ ಸಿ.ಎನ್. ಕರಿಕಟ್ಟಿ ಹಾಗೂ ಸಂಸ್ಥೆಯ ಮಾಜಿ ಅಧ್ಯಕ್ಷರು ಸಂತಾಪ ವ್ಯಕ್ತಪಡಿಸಿದ್ದಾರೆ. ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಸಂಸ್ಥೆಯ ಸಿ.ಜಿ. ಧಾರವಾಡಶೆಟ್ರು, ಡಾ.ಮಂಜುನಾಥ ನೇಕಾರ, ಆರ್.ಎಂ. ಹಿರೇಮಠ, ಒ.ಎಸ್. ಶಿವಳ್ಳಿ, ಡಿ.ಸಿ. ಪಾಟೀಲ, ವಿ.ಜಿ. ಪಾಟೀಲ ಮತ್ತು ಪದ್ಮಜಾ ಉಮರ್ಜಿ ಸಹ ಫಿರ್ದೋಸ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಸಭೆ: ಫಿರ್ದೋಸ್ ಕೊಣ್ಣೂರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇದೇ 16ರಂದು ಸಂಜೆ 4ಕ್ಕೆ ಜೆಡಿಎಸ್ ಕಚೇರಿಯಲ್ಲಿ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಘಟಕದ ಕಾರ್ಯದರ್ಶಿ ಬಸವರಾಜ ರಾಯನಗೌಡ್ರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.