ADVERTISEMENT

ಫುಟ್‌ಪಾತ್ ಅತಿಮಕ್ರಣ, ಪಾರ್ಕಿಂಗ್ ಕಿರಿಕಿರಿ...

ಶ್ರೀಪಾದ ಯರೇಕುಪ್ಪಿ
Published 24 ಅಕ್ಟೋಬರ್ 2011, 12:00 IST
Last Updated 24 ಅಕ್ಟೋಬರ್ 2011, 12:00 IST
ಫುಟ್‌ಪಾತ್ ಅತಿಮಕ್ರಣ, ಪಾರ್ಕಿಂಗ್ ಕಿರಿಕಿರಿ...
ಫುಟ್‌ಪಾತ್ ಅತಿಮಕ್ರಣ, ಪಾರ್ಕಿಂಗ್ ಕಿರಿಕಿರಿ...   

ಧಾರವಾಡ: ಫುಟಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆದು ವರ್ಷಗಳೇ ಕಳೆದಿವೆ. ಆ ಸಂದರ್ಭದಲ್ಲಿ ಮಾರುಕಟ್ಟೆಯ ಬಹುತೇಕ ರಸ್ತೆಗಳು ವಿಶಾಲವಾಗಿ ಕಾಣುತ್ತಿದ್ದವು. ಆದರೆ ಇಂದು ಮತ್ತೆ ಮೊದಲಿನ ಪರಿಸ್ಥಿತಿಯೇ ನಿರ್ಮಾಣವಾಗಿದೆ.

ಡಾಂಬರ ಕಾಣದೇ ಕಂಗಾಲಾಗಿದ್ದ ರಸ್ತೆಗಳು, ಮತ್ತೆ ಕಪ್ಪು ಬಣ್ಣದ ಡಾಂಬರ್ ಬಳಿದುಕೊಂಡು ಕಂಗೊಳಿಸಿ ತೊಡಗಿದವು. ರಸ್ತೆಯ ಎರಡೂ ಬದಿಗೆ ಪಾದಚಾರಿಗಳ ಸಂಚಾರ ಸುಗಮವಾಗಲೆಂದು ವಿಶಾಲವಾದ ಫುಟ್‌ಪಾತ್ ನಿರ್ಮಾಣವಾದವು. ಆದರೆ ಈ ಫುಟ್‌ಪಾಥ್‌ಗಳಲ್ಲಿ ಇಂದು ಪಾದಚಾರಿಗಳಿಗೆ ಸಂಚರಿಸಲು ಜಾಗ ಸಿಗುವುದು ಕಷ್ಟವಾಗಿದೆ.

ಅಂಜುಮನ್ ಕಾಂಪ್ಲೆಕ್ಸ್ ಎದುರಿಗಿನ ಫುಟ್‌ಪಾತ್ ಮೇಲೆ ಹತ್ತುವುದೇ ಕಷ್ಟವಾಗಿದೆ. ಕಾಂಪ್ಲೆಕ್ಸ್‌ನಲ್ಲಿರುವ ಬಣ್ಣದ ಅಂಗಡಿಯ ಸಾಮಗ್ರಿಗಳು ಫುಟ್‌ಪಾತ್ ಮೇಲೆ ಕಾಣುತ್ತವೆ. ಫುಟ್‌ಪಾಥ್ ಅಲ್ಲದೇ ದ್ವಿಚಕ್ರ ವಾಹನಗಳ ನಿಲುಗಡೆಯೆ ಜಾಗೆಯನ್ನು ಸಹ ಈ ಅಂಗಡಿ ಕಬಳಿಸಿದೆ.

ಫುಟ್‌ಪಾತ್ ಮೇಲೆ ಬಣ್ಣದ ಡಬ್ಬಿಗಳು, ಪೈಪುಗಳು ಹಾಕಿದ್ದರೆ, ಪಾರ್ಕಿಂಗ್ ಸ್ಥಳದಲ್ಲಿ ನೀರಿನ ಟ್ಯಾಂಕ್ ಇಡುವುದು ಸಾಮಾನ್ಯವಾಗಿದೆ. ನೀರಿನ ಟ್ಯಾಂಕ್‌ಗಳಿಗೆ ವಾಹನಗಳು ತಾಗಬಾರದು ಎಂದು ಸ್ವಲ್ಪ ಮುಂದೆ ಪಾರ್ಕಿಂಗ್ ಮಾಡಿದರೆ, ಸಂಚಾರ ಪೊಲೀಸರ ಕಾಟ ಶುರು. ಆದರೆ ಟ್ಯಾಂಕ್‌ಗಳನ್ನು ತೆಗೆಯಿಸುವ ಗೋಜಿಗೆ ಮಾತ್ರ ಈ ಪೊಲೀಸರು ಹೋಗುವುದಿಲ್ಲ.

ಸುಭಾಸ ರಸ್ತೆಯಲ್ಲಂತೂ ಫುಟ್‌ಪಾತ್‌ಗಳನ್ನು ಹತ್ತುವುದೇ ಕಷ್ಟ. ಈ ರಸ್ತೆಯ ಒಂದು ಬದಿಯ ಫುಟ್‌ಪಾತ್ ಅತಿಕ್ರಮಣವಾಗಿಲ್ಲವಾದರೂ, ಅಂಗಡಿಕಾರರು ಮಾತ್ರ ತಮ್ಮ ಸಾಮಗ್ರಿಗಳನ್ನು ಫುಟ್‌ಪಾತ್ ಮೇಲೆ ಹಾಕಿರುತ್ತಾರೆ. ಆದರೆ ಇನ್ನೊಂದು ಬದಿಯಲ್ಲಿ ಫುಟ್‌ಪಾತ್ ಮೇಲೆ ವ್ಯಾಪಾರ ನಡೆದಿರುತ್ತದೆ. ಹೂವು ಮಾರಾಟಗಾರರಂತೂ ಫುಟ್‌ಪಾತ್ ಬಿಟ್ಟು ಸರಿಯುವುದಿಲ್ಲ.

ಫುಟ್‌ಪಾತ್ ಅತಿಕ್ರಮಣವಾಗಿದ್ದರಿಂದ ಜನರು ರಸ್ತೆಯಲ್ಲಿಯೇ ಸಂಚರಿಸುತ್ತಾರೆ. ಇದರಿಂದ ವಾಹನ ಓಡಿಸಲು ಸರ್ಕಸ್ ಮಾಡುವ ಪರಿಸ್ಥಿತಿ ಇದೆ. ನಗರದಲ್ಲಿ ವಾಹನಗಳು ಹೆಚ್ಚಾಗಿವೆ. ಆದರೆ ಸುಗಮವಾಗಿ ರಸ್ತೆ ಸಂಚಾರ ಈ ಊರಲ್ಲಿ ಕಷ್ಟ. ವಾಹನಗಳ ಪಾರ್ಕಿಂಗ್ ಅಂತೂ ಅವ್ಯವಸ್ಥೆಯ ಆಗರ.

ಕೆಲವು ರಸ್ತೆಗಳಲ್ಲಿ ಮಾತ್ರ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ಅಲ್ಲಿಯೂ ಸಹ ಸಾರ್ವಜನಿಕ ವಾಹನಗಳ ನಿಲುಗಡೆಗೆ ಹೆಚ್ಚಿನ ಅವಕಾಶವಿಲ್ಲ. ಅಲ್ಲಿರುವ ಅಂಗಡಿಕಾರರು, ಬೀದಿ ಬದಿ ವ್ಯಾಪಾರಸ್ಥರು, ಪರ ಊರುಗಳಿಗೆ ಹೋಗಿ ಬರುವವರ ವಾಹನಗಳೇ ಅಲ್ಲಿರುತ್ತವೆ. ಮಾರುಕಟ್ಟೆಗೆ ಬರುವ ಜನರ ವಾಹನಗಳು ನಿಲ್ಲಲು ಅವಕಾಶವೇ ಇರುವುದಿಲ್ಲ.

ಸುಭಾಸ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುಧಾರಣೆಯಾಗಿದ್ದರೂ ವಾಹನ ನಿಲ್ಲಿಸಲು ಹರಸಾಹಸ ಪಡಬೇಕಾಗುತ್ತದೆ. ಈ ರಸ್ತೆಯಲ್ಲಿ ಕೆಲವು ವ್ಯಾಪಾರಸ್ಥರು ಕಬ್ಬಿಣದ ಸಲಾಕೆ, ದೊಡ್ಡ ಗಾತ್ರದ ಕಲ್ಲು ಹಾಕುವ ಮೂಲಕ ಅಂಗಡಿ ಎದುರು ವಾಹನ ನಿಲ್ಲದಂತೆ ಕ್ರಮ ಕೈಕೊಂಡಿದ್ದಾರೆ. ಇದೆಲ್ಲವೂ ಸಂಚಾರಿ ಪೊಲೀಸರಿಗೆ ಗೊತ್ತಿದ್ದರೂ ಗೊತ್ತಿಲ್ಲದಂತೆ ವರ್ತಿಸುವುದು ಸಾಮಾನ್ಯವಾಗಿದೆ.

`ಫುಟ್‌ಪಾತ್ ಮೇಲೆ ಓಡಾಡುವುದೇ ಕಷ್ಟವಾಗಿದೆ. ವ್ಯಾಪಾರಕ್ಕೆ ಫುಟ್‌ಪಾತ್ ಕಟ್ಟಿಸಿದ್ದಾರೆ ಎಂದು ಅನ್ನಿಸುತ್ತದೆ. ಗಾಡಿ ನಿಲ್ಲಿಸಲು ಮತ್ತು ಓಡಾಡಲೂ ಜಾಗವೇ ಇಲ್ಲದಾಗಿದೆ. ಅತಿಕ್ರಮಣ ಮಾಡಿದವರಿಗೆ ಹೇಳುವರ‌್ಯಾರು? ನಾವೇನಾದರೂ ಹೇಳಿದರೆ ನಮ್ಮ ಮೇಲೆಯೇ ರೇಗುತ್ತಾರೆ~ ಎಂಬುದು ಮಾರುಕಟ್ಟೆಗೆ ಆಗಮಿಸಿದ್ದ ನಿವೃತ್ತ ಶಿಕ್ಷಕ ಎಸ್.ಟಿ.ಪಾಟೀಲ ಅವರ ಅನಿಸಿಕೆ.

`ಫುಟ್‌ಪಾತ್ ಅತಿಕ್ರಮಣದ ಬಗ್ಗೆ ನನಗೂ ದೂರುಗಳು ಬಂದಿವೆ. ಅತಿಕ್ರಮಣ ತೆರವುಗೊಳಿಸಲು ಪಾಲಿಕೆ ಆಯುಕ್ತರಿಗೆ ಆದೇಶಿಸಲಾಗುವುದು. ಪಾದಚಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮ  ತೆಗೆದುಕೊಳ್ಳಲಾಗುವುದು. ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ತೆರವು ಕೆಲಸ ಮಾಡಬೇಕಾಗುತ್ತದೆ.

ಸಂಚಾರಿ ಪೊಲೀಸರು ಸ್ಥಳದಲ್ಲಿಯೇ ಇದ್ದರೂ ತೆರವುಗೊಳಿಸುವಂತೆ ಹೇಳದೇ ಇರುವುದು ವಿಪರ್ಯಾಸ. ಆದ್ದರಿಂದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು~ ಎಂದು ಮೇಯರ್ ಪೂರ್ಣಾ ಪಾಟೀಲ ಹೇಳಿದರು.

`ಫುಟಪಾತ್ ಅತಿಕ್ರಮಣ ತೆರವು ಗೊಳಿಸಲು ಪಾಲಿಕೆಯವರು ಕರೆದರೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಪಾರ್ಕಿಂಗ್ ಸಮಸ್ಯೆ ಇದೆ. ಇದನ್ನು ಸಹ ಸುಗಮಗೊಳಿಸಲು ನಮ್ಮ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ~ ಎಂದು ಸಂಚಾರ ಪೊಲೀಸ್ ಠಾಣೆಯ ಪಿಐ ಎಂ.ಐ.ಮುಪ್ಪಿನಮಠ ಹೇಳುತ್ತಾರೆ.

ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಪರಸ್ಪರ ಹೊಂದಾಣಿಕೆ ಇಲ್ಲದ ಕಾರಣ ಜನರು ಕಷ್ಟಗಳನ್ನು ಅನುಭವಿಸುವಂತಾಗಿದೆ. ಇದರಿಂದ ಫುಟಪಾತ್ ಹಾಗೂ ಪಾರ್ಕಿಂಗ್ ಸಮಸ್ಯೆ ಜಟಿಲವಾಗುತ್ತ ನಡೆದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.