ADVERTISEMENT

ಬಂಜಾರಾ ಸಮುದಾಯ ಭವನಕ್ಕೆ 10 ಲಕ್ಷ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 6:35 IST
Last Updated 20 ಫೆಬ್ರುವರಿ 2012, 6:35 IST

ಹುಬ್ಬಳ್ಳಿ: `ಮಹಾರಾಷ್ಟ್ರದ ಪೌರಾದೇವಿಯಲ್ಲಿರುವ ಅಖಿಲ ಭಾರತ ಬಂಜಾರಾ ಕ್ಷೇತ್ರಕ್ಕೆ ಬರುವ ಭಕ್ತರಿಗೆ ತಂಗಲು ಸಮುದಾಯಭವನವನ್ನು ನಿರ್ಮಿಸಲು ಜೆಡಿಎಸ್ ವತಿಯಿಂದ 10 ಲಕ್ಷ ರೂಪಾಯಿ ನೆರವು ನೀಡಲಾಗುವುದು~ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಇಲ್ಲಿ ಘೋಷಿಸಿದರು.

ಬಂಜಾರಾ ಕುಲಗುರು ಸೇವಾಲಾಲರ 273ನೇ ಜಯಂತ್ಯುತ್ಸವ ಹಾಗೂ ರಾಜ್ಯ ಮಟ್ಟದ ಬಂಜಾರಾ ಸಮ್ಮೇಳನದಲ್ಲಿ ಮಾತನಾಡಿದ ಅವರು, `ಭವನ ನಿರ್ಮಾಣಕ್ಕಾಗಿ ಬಂಜಾರಾ ಸಮುದಾಯದ ಜಗದ್ಗುರು ಡಾ.ರಾಮರಾವ್ ಮಹಾರಾಜ ಅವರು ನೆರವು ನೀಡುವಂತೆ ಕೇಳಿದ್ದು, ಅದಕ್ಕೆ ಸ್ಪಂದಿಸಿ ಹಣವನ್ನು ನೀಡುತ್ತಿದ್ದೇವೆ~ ಎಂದು ಹೇಳಿದರು.

`ಬಂಜಾರ ಅಭಿವೃದ್ಧಿ ನಿಗಮವನ್ನು ತಾವು ರಚನೆ ಮಾಡಿದ್ದಾಗಿ ಭಾಷಣ ಮಾಡಿದ್ದಾರೆ. ಈಗ ನಾನು ಆ ಬಗ್ಗೆ ಚರ್ಚೆ ಮಾಡುವುದಿಲ್ಲ~ ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರನ್ನು ಟೀಕಿಸಿದ ಅವರು, `ನಿಗಮಕ್ಕೆ ಹೆಚ್ಚಿನ ನೆರವು ಬೇಕಾಗಿದೆ. ಈ ಜನಾಂಗದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸರ್ಕಾರಿ ಕೆಲಸದಲ್ಲಿದ್ದಾರೆ. ಬಂಜಾರರು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕಾದರೆ ದೊಡ್ಡ ಮೊತ್ತದ ಹಣವನ್ನು ಬಜೆಟ್‌ನಲ್ಲಿ ತೆಗೆದಿರಿಸಬೇಕು. ಅದಕ್ಕಾಗಿ ನಿಮ್ಮ ಒಗ್ಗಟ್ಟು ದೊಡ್ಡದಾಗಬೇಕು. ವೈಯಕ್ತಿಕ ಏಳಿಗೆಯ ಬದಲು ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು~ ಎಂದು ಹೇಳಿದರು.

ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, `ಮೊದಲು ವೀರಶೈವ ಸಮಾಜದ ಸ್ವಾಮೀಜಿಗಳನ್ನೇ ಬಹುಪಾಲು ಸಮುದಾಯದವರು ಪೂಜಿಸುತ್ತಿದ್ದರು. ಆದರೆ ಆ ಸ್ವಾಮೀಜಿಗಳು ಇತರರನ್ನು ಹತ್ತಿರಕ್ಕೆ ಸೇರಿಸಿಕೊಳ್ಳಲಿಲ್ಲ. ಆದ್ದರಿಂದಲೇ ಬಂಜಾರಾ ಸಮುದಾಯವೂ ಸೇರಿದಂತೆ ಎಲ್ಲ ಸಮುದಾಯದವರು ತಮ್ಮ ಜನಾಂಗಕ್ಕೇ ಪ್ರತ್ಯೇಕ ಸ್ವಾಮಿಗಳನ್ನು ಆರಿಸಿಕೊಂಡರು~ ಎಂದು ಹೇಳಿದರು.

ರಾಜಕೀಯ ಬದಲಾವಣೆ ಸಾಕಷ್ಟು ಆಗಿದ್ದು, ಯಾವ ಸರ್ಕಾರ ಏನು ಮಾಡಿದೆ ಎಂಬುದನ್ನೇ ಜನರು ಮರೆಯುತ್ತಿದ್ದಾರೆ ಎಂದು ವಿಷಾದದಿಂದ ಹೇಳಿದರು.

ವಿಧಾನಪರಿಷತ್ ಮಾಜಿ ಸದಸ್ಯೆ ಜಲಜಾ ನಾಯ್ಕ ಮಾತನಾಡಿ, ಬಂಜಾರಾ ಸಮುದಾಯದ ಸಮುದಾಯದ ಮಹಿಳೆಯರು ಸ್ವಾಭಿಮಾನಿಗಳು, ಅವರು ಎಲ್ಲಿಯೂ ಭಿಕ್ಷೆ ಬೇಡುವುದಿಲ್ಲ~ ಎಂದು ಹೇಳಿದರು.
ಸ್ವಾಗತ ಸಮಿತಿ ಅಧ್ಯಕ್ಷ ಪಾಂಡುರಂಗ ಪಮ್ಮಾರ ಪ್ರಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.