ADVERTISEMENT

ಬಹುಆಯ್ಕೆಯ ಮತದಾನ ಯಂತ್ರ

ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯ ಆವಿಷ್ಕಾರ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 10:24 IST
Last Updated 9 ಜುಲೈ 2013, 10:24 IST
ಬಹುಆಯ್ಕೆ ಮತದಾನಕ್ಕೆ ಅಗತ್ಯವಾದ ಮತಯಂತ್ರದ ಮಾದರಿ. ಇದನ್ನು ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಎಂ.ಟೆಕ್ ವಿದ್ಯಾರ್ಥಿ ಆಕಾಶ್ ಕೊಣ್ಣೂರ ಆವಿಷ್ಕರಿಸಿದ್ದಾರೆ
ಬಹುಆಯ್ಕೆ ಮತದಾನಕ್ಕೆ ಅಗತ್ಯವಾದ ಮತಯಂತ್ರದ ಮಾದರಿ. ಇದನ್ನು ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಎಂ.ಟೆಕ್ ವಿದ್ಯಾರ್ಥಿ ಆಕಾಶ್ ಕೊಣ್ಣೂರ ಆವಿಷ್ಕರಿಸಿದ್ದಾರೆ   

ಧಾರವಾಡ: ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ಬಳಕೆ ಮಾಡಲಾಗುತ್ತಿದೆ. ಆದರೆ ವಿಧಾನ ಪರಿಷತ್, ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಹುಆಯ್ಕೆ ಪದ್ಧತಿ ಇರುವುದರಿಂದ ಇವಿಎಂ ಬಳಸುತ್ತಿಲ್ಲ.

ಇಲ್ಲಿಯ ಎಸ್‌ಡಿಎಂ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿ ಆಕಾಶ್ ಕೊಣ್ಣೂರ ಬಹುಆಯ್ಕೆ ಮತದಾನಕ್ಕೆ ಅನುವಾಗುವ ಎವಿಎಂ ಮಾದರಿ ತಯಾರಿಸಿದ್ದಾರೆ.

ಬಹುಆಯ್ಕೆ ಆಧಾರಿತ (ಪ್ರಿಫರೆನ್ಶಿಯಲ್ ವೋಟಿಂಗ್) ಮತಯಂತ್ರ ಎಂದು ಇದಕ್ಕೆ ಹೆಸರಿಟ್ಟಿರುವ ಆಕಾಶ್, ಇದು ಬರೀ ವಿಧಾನ ಪರಿಷತ್‌ನಂತಹ ಬಹುಆಯ್ಕೆ ಮತದಾನ ಪ್ರಕ್ರಿಯೆಗೆ ಅಷ್ಟೇ ಅಲ್ಲದೇ, ಸಾಮಾನ್ಯ ಮತಯಂತ್ರ (ಇವಿಎಂ)ವಾಗಿಯೂ ಬಳಸಬಹುದು ಎಂದು ಹೇಳುತ್ತಾರೆ. ಪ್ರಾತ್ಯಕ್ಷಿಕೆಯನ್ನೂ ಮಾಡಿ ತೋರಿಸಿದರು.

ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂ.ಟೆಕ್ ಅಂತಿಮ ವರ್ಷದಲ್ಲಿ ಓದುತ್ತಿರುವ ಈ ವಿದ್ಯಾರ್ಥಿಗೆ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಅರ್ಚನಾ ನಂದಿಬೇವೂರ ಹಾಗೂ ನೀತಾ ಕಾಖಂಡಕಿ  ಮಾರ್ಗದರ್ಶನ ನೀಡಿದ್ದಾರೆ.

ಈ ಯಂತ್ರದ ತಯಾರಿಕೆಯ ಹಂತದಲ್ಲಿ 3 ಸಾವಿರ ರೂಪಾಯಿ ಖರ್ಚಾಗಿದೆ. ಆದರೆ ಒಂದು ಸಾವಿರ ರೂಪಾಯಿಗೆ ಒಂದು ಯಂತ್ರ ತಯಾರಿಸಬಹುದು. ಇದಕ್ಕೆ ಮೈಕ್ರೊ ಕಂಟ್ರೋಲರ್, ಎಲ್‌ಸಿಡಿ ಪರದೆ, ವಿದ್ಯುತ್ ಸ್ವಿಚ್ ಬೋರ್ಡ್, ಬಟನ್‌ಗಳನ್ನು ಬಳಸಲಾಗಿದೆ.

ಉದಾಹರಣೆಗೆ ಎ, ಬಿ, ಸಿ ಹಾಗೂ ಡಿ ಎಂಬ ನಾಲ್ಕು ಅಭ್ಯರ್ಥಿಗಳು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮತದಾರರು ಯಾವುದರ ಮೇಲೆ ಗುಂಡಿ ಒತ್ತುತ್ತಾರೋ ಅದರ ಮೇಲ್ಭಾಗದಲ್ಲಿರುವ ಕೆಂಪು ದೀಪ ಹತ್ತಿಕೊಳ್ಳುತ್ತದೆ. ನಾಲ್ಕು ಜನ ಇಲ್ಲವೇ ಒಬ್ಬರು, ಇಬ್ಬರು ಅಥವಾ ಮೂವರಿಗೆ ಆದ್ಯತೆಯ ಮೇಲೆ ಮತದಾನ ಮಾಡಬಹುದು. ಅದನ್ನು ದೃಢಪಡಿಸಲು ಬೋರ್ಡ್‌ನ ಬಲಬದಿಯಲ್ಲಿರುವ `ಡನ್' ಎಂಬ ಗುಂಡಿ ಒತ್ತಬೇಕು. ಈ ಪ್ರಕ್ರಿಯೆ ಮುಗಿಯುವವರೆಗೂ ಮತಗಟ್ಟೆ ಅಧಿಕಾರಿ ಮತ್ತೊಬ್ಬರು ಮತದಾನ ಮಾಡಲು ಅವಕಾಶ ನೀಡುವಂತಿಲ್ಲ. ಎಲ್ಲ ಮತದಾನ ಮುಗಿದ ಬಳಿಕ ಕಡಿಮೆ ಮತಗಳು ಬಿದ್ದ ಅಭ್ಯರ್ಥಿಗಳ ಮತಗಳನ್ನು ಇತರರಿಗೆ ಹಂಚಿಕೆ ಮಾಡಿ, ವಿಜೇತ ಅಭ್ಯರ್ಥಿಯನ್ನು ಯಂತ್ರವೇ ಘೋಷಿಸುತ್ತದೆ. ಉಪಕರಣ ಬದಲು ಮಾಡಿದರೆ ಸಾಮಾನ್ಯ ಇವಿಎಂನಂತೆಯೂ ಇದನ್ನು ಬಳಸಬಹುದು. ಈ ಯಂತ್ರ ಇನ್ನೂ ಎಲ್ಲಿಯೂ ತಯಾರಾಗಿಲ್ಲ ಎಂದೂ ಆಕಾಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.